ಪಟನಾ (ನ. 06): ಸುಮಾರು 4 ದಶಕಗಳಿಂದ ಬಿಹಾರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ, ಜೆಡಿಯು ನಾಯಕ, ರಾಜ್ಯದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (69) ಇದೇ ಮೊಟ್ಟಮೊದಲ ಬಾರಿಗೆ ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ಗುರುವಾರ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡುವ ವೇಳೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸುವ ಮೂಲಕ ನಿತೀಶ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

‘ಇಂದು ಚುನಾವಣಾ ಪ್ರಚಾರದ ಕೊನೆಯದಿನ. ಎರಡು ದಿನ ಬಿಟ್ಟು ಮತದಾನ ನಡೆಯಲಿದೆ. ಇದು ನನ್ನ ಚುನಾವಣೆ. ಅಂತ್ಯ ಒಳ್ಳೆಯದಾದರೆ ಎಲ್ಲವೂ ಒಳ್ಳೆಯದೇ’ ಎನ್ನುವ ಮೂಲಕ ನೆರೆದಿದ್ದ ಸಾವಿರಾರು ಜನ ಒಂದು ನಿಮಿಷ ಮೌನಕ್ಕೆ ತೆರಳುವಂತೆ ಮಾಡಿದರು. ತಕ್ಷಣವೇ 15 ವರ್ಷ ಮುಖ್ಯಮಂತ್ರಿಯಾಗಿ ಆಳಿದ ತಮ್ಮ ನಾಯಕನ ಕುರಿತು ನೆರೆದಿದ್ದ ಜನತೆ ಸುದೀರ್ಘ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಅಭಿನಂದಿಸಿದರು.

ಬೈಡೆನ್ ಪೂರ್ಣ ಅಧಿಕಾರ ನಡೆಸಲ್ಲ: ಕಮಲಾ ಅಧ್ಯಕ್ಷರಾಗ್ತಾರೆ!

ನಿತೀಶ್‌ ತಮ್ಮ ರಾಜಕೀಯ ಜೀವನದ ನಿವೃತ್ತಿ ಕುರಿತು ಮಾತನಾಡಿದ್ದು ಇದೇ ಮೊದಲು. ಕೆಲ ದಿನಗಳ ಹಿಂದೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ನಿತೀಶ್‌ ಈಗಾಗಲೇ ದಣಿದಿದ್ದಾರೆ. ತಾನಿನ್ನೂ ಯುವಕ. ರಾಜ್ಯದ ಅಭಿವೃದ್ಧಿ ಮಾಡಬಲ್ಲೆ ಎನ್ನುವ ಮೂಲಕ ಸಿಎಂಗೆ ಟಾಂಗ್‌ ನೀಡಿದ್ದರು. ಅದರ ಬೆನ್ನಲ್ಲೇ ನಿತೀಶ್‌ರಿಂದ ಈ ಹೇಳಿಕೆ ಹೊರಬಿದ್ದಿದೆ.