ವಾಷಿಂಗ್ಟನ್‌ (ನ.06):  ಅಮೆರಿಕದ ಅಧ್ಯಕ್ಷರಾಗಿ ಡೆಮಾಕ್ರೆಟಿಕ್‌ ಪಕ್ಷದ ಜೋ ಬೈಡನ್‌ ಆಯ್ಕೆಯಾದರೆ ಅವರಿಗೆ ಈಗಾಗಲೇ 78 ವರ್ಷವಾಗಿರುವುದರಿಂದ 4 ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸುವುದಿಲ್ಲ. ಆಗ ನಿಯಮದ ಪ್ರಕಾರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುತ್ತಾರೆ. ಆಕೆ ‘ಎಡಪಂಥೀಯ ವಿಚಾರಧಾರೆಗಳನ್ನು ಬಲವಾಗಿ ಪ್ರತಿಪಾದಿಸುವ ಟ್ರೋಜನ್‌ ಹಾರ್ಸ್‌’ ಎಂದು ಶೇ.59ರಷ್ಟುಅಮೆರಿಕನ್ನರು ಭಾವಿಸಿದ್ದಾರೆ.

ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಈ ಅಂಶ ಬಹಿರಂಗಪಡಿಸಿದೆ. ವಯಸ್ಸಿನ ಕಾರಣದಿಂದ ಬೈಡನ್‌ ತಮ್ಮ ಅಧಿಕಾರ ಮೊಟಕುಗೊಳಿಸಬೇಕಾಗಿ ಬಂದು ಕಮಲಾ ಹ್ಯಾರಿಸ್‌ ಅವರೇ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ನಡೆಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.59ರಷ್ಟುಜನರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾರಣದಿಂದಲೇ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪದೇಪದೇ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಕಮಲಾ ಹ್ಯಾರಿಸ್‌ ಅವರನ್ನು ‘ತೀವ್ರವಾದಿ ಎಡಪಂಥೀಯ ವಿಚಾರಧಾರೆಯ ಟ್ರೋಜನ್‌ ಹಾರ್ಸ್‌’ ಎಂದು ಕರೆಯುತ್ತಿದ್ದರು ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಯಾರು?: ಅಂತಿಮ ಹಂತದಲ್ಲಿ ಬಿರುಸಿನ ಮತದಾನ!

ಡೊನಾಲ್ಡ್‌ ಟ್ರಂಪ್‌ ಬಲಪಂಥೀಯರು. ಜೋ ಬೈಡನ್‌ ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ, ಮಧ್ಯಮ ಮಾರ್ಗಿ. ಆದರೆ, ಭಾರತೀಯ-ಆಫ್ರಿಕನ್‌ ಮೂಲದ ಕಮಲಾ ಹ್ಯಾರಿಸ್‌ ಕಟ್ಟರ್‌ ಎಡಪಂಥೀಯವಾದಿ. ಈಗಾಗಲೇ ‘ಬ್ಲ್ಯಾಕ್‌ ಲೈವ್‌್ಸ ಮ್ಯಾಟರ್‌’ ಮುಂತಾದ ಆಂದೋಲನದಲ್ಲಿ ಅವರು ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸೆನೆಟ್‌ ಸದಸ್ಯೆಯಾಗಿ ಕಪ್ಪು ವರ್ಣೀಯರ ಪರ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಬೈಡನ್‌ ರೀತಿ ಸೌಮ್ಯ ಸ್ವಭಾವದವರಲ್ಲ. ಬದಲಿಗೆ ಹಟವಾದಿ ಮಹಿಳೆ. ಹೀಗಾಗಿ ಬೈಡನ್‌ರನ್ನು ಬದಿಗೆ ಸರಿಸಿ ತಾವೇ ಅಧಿಕಾರ ಚಲಾಯಿಸಬಹುದು ಎಂಬ ಭಾವನೆಯೂ ಅಮೆರಿಕನ್ನರಲ್ಲಿದೆ.