ಮಹಿಳಾ ಹಾಸ್ಟೆಲ್ ಉದ್ಘಾಟಿಸಿದ ನಿತೀಶ್‌ ಕುಮಾರ್ ಕಾಲೇಜು ದಿನಗಳನ್ನು ನೆನೆದ ಬಿಹಾರ ಸಿಎಂ  31.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಲೇಜು

ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್ (Bihar CM Nitish Kumar) ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡರು. ನಾವು ಇಂಜಿನಿಯರಿಂಗ್ (engineering) ಕಲಿಯುತ್ತಿರುವಾಗ ನಮ್ಮ ತರಗತಿಯಲ್ಲಿ ಒಬ್ಬರು ಹುಡುಗಿಯರು ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಕಷ್ಟು ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್ ಹೇಳಿದ್ದಾರೆ. ಪಾಟ್ನಾದಲ್ಲಿರುವ (Patna) ಮಗಧ ಮಹಿಳಾ ಕಾಲೇಜಿನಲ್ಲಿ 504 ಹಾಸಿಗೆಗಳಿರುವ ಹಾಸ್ಟೆಲ್‌ನ್ನು ಉದ್ಘಾಟಿಸಿ ಮಾತನಾಡಿದ ನಿತೀಶ್‌ ಕುಮಾರ್ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. 

ತಮ್ಮ ಕಾಲೇಜು ಆರಂಭದ ದಿನಗಳನ್ನು ನೆನೆದ ನಿತೀಶ್‌ ಕುಮಾರ್, ನಾವು ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಾಗ ಕಾಲೇಜಿನಲ್ಲಿ ಒಬ್ಬರೇ ಒಬ್ಬರು ಹುಡುಗಿಯರು ಇರಲಿಲ್ಲ. ಹುಡುಗಿಯರಿಲ್ಲದ ಕಾಲೇಜು ನೋಡಲು ಕೆಟ್ಟದಾಗಿರುತ್ತಿತ್ತು. ಯಾವಾಗಲಾದರೂ ನಮ್ಮ ಕಾಲೇಜಿಗೆ ಯಾರಾದರು ಹೆಣ್ಣು ಮಕ್ಕಳು ಬಂದರೆ ಎಲ್ಲ ವಿದ್ಯಾರ್ಥಿಗಳು ಆಕೆಯನ್ನು ನೋಡಲು ಗುಂಪು ಗೂಡುತ್ತಿದ್ದರು. ಇದು ಆಗಿನ ಕಾಲದ ಸ್ಥಿತಿ ಆಗಿತ್ತು. ಈಗ ನೋಡಿ ಎಷ್ಟೊಂದು ಹುಡುಗಿಯರು ಇಂದು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುತ್ತಿದ್ದಾರೆ ಎಂದು ಅವರು ಹೇಳಿದರು. 

Bihar Politics| ಮದ್ಯ ಹುಡುಕಿ ವಧುವಿನ ಬೆಡ್‌ರೂಂ, ಬಾತ್‌ರೂಂ ನುಗ್ಗಿದ ಪೊಲೀಸರು, ರಾಬ್ರಿದೇವಿ ಕಿಡಿ!

ಆ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಂತಹ ಪ್ರೋತ್ಸಾಹವಿರಲಿಲ್ಲ. ಮಹಿಳಾ ವಿದ್ಯಾರ್ಥಿನಿಯರು ಮೆಡಿಕಲ್ ಹಾಗೂ ಇಂಜಿನಿಯರಿಂಗ್‌ ಕೋರ್ಸ್‌ ಓದುವುದು ತುಂಬಾ ಕಠಿಣವಾಗಿತ್ತು. ನಮ್ಮ ಸಹೋದರಿಯರು ಹಾಗೂ ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣವನ್ನು ಅಧ್ಯಯನ ಮಾಡಲಿ, ಡಾಕ್ಟರ್ ಇಂಜಿನಿಯರ್‌ಗಳಾಗಲಿ ಎಂದು
ನಮ್ಮ ಸರ್ಕಾರ ಬಿಹಾರದಲ್ಲಿ ಅಧಿಕಾರಕ್ಕೆ ಬಂದಾಗ, ನಾವು ಹೆಣ್ಣು ಮಕ್ಕಳಿಗೆ ಕೋರ್ಸ್‌ಗಳಲ್ಲಿ ಮೀಸಲು ನೀಡಲು ಶುರು ಮಾಡಿದೆವು. ಉನ್ನತ ಶಿಕ್ಷಣದಲ್ಲಿ ನಮ್ಮ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಸೇರುವಂತಾಗಲೂ, ಮಹಿಳೆಯರು ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಲು ನಮ್ಮ ಸರ್ಕಾರ ಕಠಿಣವಾಗಿ ಶ್ರಮಿಸುತ್ತಿದೆ ಎಂದು ನಿತೀಶ್ ಕುಮಾರ್ ಹೇಳಿದರು. 

ಎಣ್ಣೆ ಕುಡಿಯೋರು ಭಾರತೀಯರಲ್ಲ, ಮಹಾಪಾಪಿಗಳು ಎಂದ ಬಿಹಾರ ಸಿಎಂ!

ಏಳಂತಸ್ಥಿನ ಮಹಿಳೆಯರ ಹಾಸ್ಟೆಲ್‌ನ್ನು 31.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರತಿ ಮಹಡಿಯಲ್ಲಿ 18 ಕೋಣೆಗಳು, 16 ಶೌಚಾಲಯಗಳು, 12 ಸ್ನಾನಗ್ರಹಗಳು ಇವೆ. ಅದರಾಚೆಗೆ ವಾಶಿಂಗ್ ಮೆಷಿನ್ ಹೊಂದಿರುವ ಸಾಮಾನ್ಯ ಕೋಣೆಗಳಿವೆ. ಕಾಫಿ ಔಟ್‌ಲೆಟ್ ಹಾಗೂ ಕ್ಯಾಂಟೀನ್ ಇದೆ. ಜೊತೆಗೆ ಪ್ರತಿ ಮಹಡಿಯಲ್ಲಿ ಒಳಾಂಗಣ ಕ್ರೀಡೆಗೆ ಅವಕಾಶವಿದೆ. ಒಂದು ಕೋಣೆಯಲ್ಲಿ ಮೂವರು ವಿದ್ಯಾರ್ಥಿನಿಯರು ಇರಬಹುದಾಗಿದ್ದು, ಎರಡು ಸೌಂಡ್‌ಫ್ರೂಪ್ ಸೆಮಿನಾರ್ ಹಾಲ್‌ಗಳಿದ್ದು, ಮಲ್ಟಿ ಮೀಡಿಯಾ ಪ್ರಯೋಗಾಲಯ ಕೂಡ ಲಭ್ಯವಿದೆ. 

ನವಂಬರ್‌ 2020ರಲ್ಲಿ ನಿತೀಶ್ ಕುಮಾರ್ ಏಳನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಿತೀಶ್ ಕುಮಾರ್ 1 ಮಾರ್ಚ್ 1951ರಂದು ಪಾಟ್ನಾದ ಭಿಕ್ತಿಯಾರ್ಪುರ್‌ನಲ್ಲಿ ಕವಿರಾಜ್ ರಾಮ್ ಲಖನ್ ಹಾಗೂ ಪರಮೇಶ್ವರೀ ದೇವಿ ಮಗನಾಗಿ ಜನಿಸಿದರು. ಕುಟುಂಬದ ಮಂದಿ ಅವರನ್ನು ಮುನ್ನಾ ಎಂದೇ ಕರೆಯುತ್ತಿದ್ದರು. ನಿತೀಶ್ ಕುಮಾರ್ 1973ರಲ್ಲಿ ಅಂತರ್ಜಾತಿ ವಿವಾಹವಾದರು. ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದ ಮಂಜೂ ಕುಮಾರಿ ಅವರನ್ನು ನಿತೀಶ್ ಕುಮಾರ್ ವಿವಾಹವಾಗಿದ್ದರು. ಅವರು 2007ರಲ್ಲಿ ಮೃತಪಟ್ಟರು.

ನಿತೀಶ್ ಕುಮಾರ್ ಏಕೈಕ ಪುತ್ರ ನಿಶಾಂತ್ ಕುಮಾರ್ 20 ಜುಲೈ 1975ರಂದು ಜನಿಸಿದರು. ನಿಶಾಂತ್‌ಗೆ ವಿವಾಹವಾಗಿದ್ದು, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೆಸ್ರಾದಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇಂದಿಗೂ ಇವರು ತನ್ನ ತಂದೆಯೊಂದಿಗೇ ವಾಸಿಸುತ್ತಿದ್ದಾರೆ.