ಪಾಟ್ನಾ(ಮಾ.27): ಸಾರ್ವಜನಿಕ ಸಾರಿಗೆ, ಟೆಂಪೋ, ಟ್ರಕ್ ಸೇರಿದಂತೆ ಸಾರಿಗೆ ವಾಹನಗಳಲ್ಲಿ ಅಶ್ಲೀಲ, ಅಸಭ್ಯ ಮೂಸಿಕ್‌ಗೆ ಬಿಹಾರ ಸರ್ಕಾರ ನಿಷೇಧ ವಿಧಿಸಿದೆ. ಈ ನಿಯಮ ಉಲ್ಲಂಘಿಸಿದರೆ ವಾಹನದ ಪರವಾನಗೆ ರದ್ದು ಮಾಡಲಾಗುವುದು ಎಂದು ಕಟ್ಟು ನಿಟ್ಟಿನ ಆದೇಶವನ್ನು ಬಿಹಾರ ಸರ್ಕಾರ ನೀಡಿದೆ

ಹಿಂಸಾತ್ಮಕ ಪ್ರತಿಭಟನೆ ಮಾಡಿದರೆ ಸರ್ಕಾರಿ ನೌಕರಿ ಕಷ್ಟ ಸಾಧ್ಯ!

ಜುಲೈ 6, 2018 ರಂದು ನಡೆದ ರಾಜ್ಯ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಟ್ರಕ್‌, ಬಸ್‌ಗಳು, ಟೆಂಪೊಗಳು ಮತ್ತು ಇತರ ಸಾರ್ವಜನಿಕ ವಾಹನಗಳಲ್ಲಿ ಅಶ್ಲೀಲ ಹಾಡುಗಳನ್ನು ಪ್ಲೇ ಮಾಡಲು ನಿರ್ಬಂಧ ಹೇರಿದೆ. ಆದರೆ ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ.  ಇದೀಗ ಇದೇ ಆದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಿಹಾರ ಸರ್ಕಾರ ಎಲ್ಲಾ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಆದೇಶದ ಪ್ರಕಾರ, ಟೆಂಪೋ, ಬಸ್, ಟ್ರಕ್ ಹಾಗೂ ಇತರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಅಶ್ಲೀಲ ಹಾಡು ಹಾಕುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ, ವಾಹನದ ಪರವಾನಗೆ ಹಿಂತೆಗೆದುಕೊಳ್ಳಲು ಹಾಗೂ ಕ್ರಿಮಿನಲ್ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.  ಈ ಕುರಿತು ಬಿಹಾರ ಸರ್ಕಾರ ಮಾರ್ಚ್ 13 ರಂದು ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಸಂಗೀತ ಹೆಚ್ಚಾಗಿ ಕೇಳಿಬರುತ್ತಿದೆ. ಈ ಕುರಿತ ಬಂದಿರುವ ಹಲವು ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ವಸತಿ ಪ್ರದೇಶಗಳು, ಶಾಲೆ- ಕಾಲೇಜುಗಳ ಕ್ಯಾಂಪಸ್‌ಗಳ ಬಳಿ ಇದೇ ರೀತಿಯ ಸಂಗೀತ ನುಡಿಸುವುದನ್ನು  ಹಾಗೂ ಹೆಚ್ಚಿನ ಶಬ್ದಗಳಲ್ಲಿ ಹಾಡುಗಳನ್ನು ಹಾಕುವುದನ್ನು ತಡೆಯಲು ಸೂಚಿಸಲಾಗಿದೆ.

ಎಲ್ಲಾ ಸಂಚಾರ SP, ಜಂಟಿ ಆಯುಕ್ತರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಎಲ್ಲಾ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.