ಪಟನಾ(ಫೆ.04): ಹಿಂಸಾತ್ಮಕ ಪ್ರತಿಭಟನೆಗಳು, ಅಕ್ರಮ ರಸ್ತೆ ತಡೆ, ಶಾಂತಿಭಂಗ ಚಟುವಟಿಕೆ- ಇತ್ಯಾದಿಗಳನ್ನು ನಡೆಸಿದರೆ ಬಿಹಾರದಲ್ಲಿ ಸರ್ಕಾರಿ ನೌಕರಿ ಸಿಗುವುದು ಇನ್ನು ಕಷ್ಟಸಾಧ್ಯವಾಗಲಿದೆ. ಇಂಥ ನಿಯಮವೊಂದನ್ನು ನಿತೀಶ್‌ ಕುಮಾರ್‌ ಸರ್ಕಾರ ಜಾರಿಗೆ ತಂದಿದೆ.

‘ಯಾವುದಾದರೂ ವ್ಯಕ್ತಿ ಶಾಂತಿಭಂಗ ತರುವ ಕ್ರಿಮಿನಲ್‌ ಚಟುವಟಿಕೆ ನಡೆಸಿದ್ದರೆ, ಹಿಂಸೆಗೆ ತಿರುಗುವ ಪ್ರತಿಭಟನೆಗಳನ್ನು ಮಾಡಿದ್ದರೆ, ರಸ್ತೆ ಜಾಮ್‌ ಮಾಡಿದ್ದರೆ- ಆತನ ಮೇಲೆ ಪೊಲೀಸ್‌ ಕೇಸು ದಾಖಲಾಗುತ್ತದೆ. ಈ ವಿಷಯವನ್ನು ಪೊಲೀಸರು ವ್ಯಕ್ತಿಯ ಚಾರಿತ್ರ್ಯ ಪ್ರಮಾಣಪತ್ರದಲ್ಲಿ (ಕ್ಯಾರೆಕ್ಟರ್‌ ಸರ್ಟಿಫಿಕೇಟ್‌) ನಮೂದಿಸಬೇಕು. ಇಂಥವರಿಗೆ ಸರ್ಕಾರಿ ನೌಕರಿ ಸಿಗುವುದು ಅಥವಾ ಮದ್ಯದ ಅಂಗಡಿ ಲೈಸೆನ್ಸ್‌ ತೆಗೆದುಕೊಳ್ಳುವುದು ಆಗದು’ ಎಂದು ಬಿಹಾರ ಡಿಜಿಪಿ ಅವರು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ ಬಿಹಾರ ವಿಪಕ್ಷಗಳು ಇದನ್ನು ಪ್ರಶ್ನಿಸಿವೆ. ‘ಪ್ರತಿಭಟನೆ ನಡೆಸೋದೇ ತಪ್ಪಾ? ಪ್ರಜಾಸತ್ತೆಯಲ್ಲಿ ಜನರಿಗೆ ಪ್ರತಿಭಟಿಸುವ ಹಕ್ಕಿದೆ. ಇದು ಹಿಟ್ಲರ್‌, ಮುಸೋಲಿನಿ ಆಡಳಿತ’ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರನ್ನು ಪ್ರಶ್ನಿಸಿದ್ದಾರೆ.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಬಿಹಾರ ಎಡಿಜಿ ಜಿತೇಂದ್ರ ಕುಮಾರ್‌, ‘ಚಾರಿತ್ರ್ಯ ಪ್ರಮಾಣಪತ್ರದಲ್ಲಿ ವ್ಯಕ್ತಿಯ ಕೃತ್ಯಗಳನ್ನು ನಮೂದಿಸುವುದಷ್ಟೇ ಪೊಲೀಸರ ಕೆಲಸ. ಅದನ್ನು ನೋಡಿಕೊಂಡು ನೌಕರಿ ಕೊಡುವುದು ಅಥವಾ ಬಿಡುವುದು ಉದ್ಯೋಗದಾತರಿಗೆ ಬಿಟ್ಟವಿಚಾರ’ ಎಂದು ಹೇಳಿದ್ದಾರೆ.