ಮನೀಶ್ ಸಿಸೋಡಿಯಾಗೆ ಗೂಢಚರ್ಯೆ ಹಗರಣ ಉರುಳು: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅಸ್ತು
ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಅಸ್ತು ನೀಡಿದೆ. ಎಫ್‌ಬಿಯು ಘಟಕದ ವಿರುದ್ಧ ಗೂಢಚಾರಿಕೆ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಸಿಬಿಐ ತನಿಖೆಗೆ ಅಸ್ತು ನೀಡಿದೆ.
ನವದೆಹಲಿ (ಫೆಬ್ರವರಿ 23, 2023): ಅಬಕಾರಿ ಹಗರಣ ಬಳಿಕ ದಿಲ್ಲಿ ಉಪಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಈಗ ‘ರಾಜಕೀಯ ಗೂಢಚರ್ಯೆ ಹಗರಣ’ದ ಉರುಳು ಸುತ್ತಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ವಿರುದ್ಧ ತನಿಖೆ ನಡೆಸಬಹುದು ಎಂದು ಸಿಬಿಐಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ.
ಇದರ ಬೆನ್ನಲ್ಲೇ ಬಿಜೆಪಿ (BJP) ಹಾಗೂ ಆಪ್ (AAP) ನಡುವೆ ವಾಕ್ಸಮರ ತಾರಕಕ್ಕೆರಿದೆ. ಕೇಂದ್ರದ ಈ ಕ್ರಮವನ್ನು ಹೇಡಿಗಳು ಹಾಗೂ ದುರ್ಬಲರ ಕೃತ್ಯ ಎಂದು ಮನೀಶ್ ಸಿಸೋಡಿಯಾ (Manish Sisodia) ಕಿಡಿಕಾರಿದ್ದಾರೆ. ಆದರೆ ಮನೀಶ್ ಸಿಸೋಡಿಯಾರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಏನಿದು ಪ್ರಕರಣ?:
ದಿಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರದ ಮೇಲೆ ಕಣ್ಣಿಡಲು ಫೀಡ್‌ಬ್ಯಾಕ್ ಯೂನಿಟ್ (Feedback Unit) (ಎಫ್‌ಬಿಯು) (FBU) ಎಂಬ ಘಟಕವನ್ನು 2015ರಲ್ಲಿ ಸೃಷ್ಟಿಸಲಾಗಿತ್ತು. ಈ ವಿಭಾಗವು ವಿಚಕ್ಷಣ ಇಲಾಖಾ ಸಚಿವ ಮನೀಶ್ ಸಿಸೋಡಿಯಾ ಅಧೀನದಲ್ಲಿ ಕೆಲಸ ಮಾಡುತ್ತಿತ್ತು.
ಇದನ್ನು ಓದಿ: ಮದ್ಯ ಹಗರಣ: ಇಂದು ವಿಚಾರಣೆಗೆ ಬರುವಂತೆ ಮನೀಶ್ ಸಿಸೋಡಿಯಾಗೆ ಸಿಬಿಐ ಸಮನ್ಸ್; ಹೆಚ್ಚಿನ ಸಮಯ ಕೇಳಿದ ಸಚಿವ
ವಿವಿಧ ಇಲಾಖೆಗಳಲ್ಲಿನ ಕೆಲಸಗಳ ಮೇಲೆ ನಿಗಾ ಇರಿಸಿ ಇದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಿಗೆ ಎಫ್‌ಬಿಯು ವರದಿ ಸಲ್ಲಿಸುತ್ತಿತ್ತು. ಆದರೆ ಈ ಕೆಲಸ ಬಿಟ್ಟು ‘ರಾಜಕೀಯ ಪತ್ತೇದಾರಿಕೆ’ ಕೆಲಸವನ್ನು ಎಫ್‌ಬಿಯು ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಕಾರಣ ಸಿಬಿಐ ಇದರ ಪ್ರಾಥಮಿಕ ವಿಚಾರಣೆ ಆರಂಭಿಸಿತ್ತು. ಈ ವೇಳೆ ತನಗೆ ಮನೀಶ್ ಸಿಸೋಡಿಯಾ ವಿರುದ್ಧ ಬಲವಾದ ಸಾಕ್ಷ್ಯ ಲಭಿಸಿದೆ ಎಂದು ಸಿಬಿಐ (CBI) ಹೇಳಿತ್ತು ಹಾಗೂ ಅವರ ವಿರುದ್ಧ ತನಿಖೆಗೆ ಅನುಮತಿಸಲು ಕೇಂದ್ರದ ಮೊರೆ ಹೋಗಿತ್ತು.
ಮದ್ಯ ಲೈಸೆನ್ಸ್ ಹಗರಣದಲ್ಲೂ ಸಿಬಿಐ ನೋಟಿಸ್
ಇನ್ನೊಂದೆಡೆ, ಆಮ್‌ಆದ್ಮಿ ಪಕ್ಷದ ವಿವಾದಿತ ಮದ್ಯ ಲೈಸೆನ್ಸ್ ಹಗರಣಕ್ಕೆ ಸಂಬಂಧ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿಯ ಅಬಕಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸಿಬಿಐ ನೋಟಿಸ್ ಜಾರಿ ಮಾಡಿತ್ತು. ಆದರೆ, ದೆಹಲಿಯ ಹಣಕಾಸು ಸಚಿವರೂ ಆಗಿರುವ ಮನೀಶ್ ಸಿಸೋಡಿಯಾ ಅವರು 2023 - 24ರ ಹಣಕಾಸು ವರ್ಷದ ರಾಷ್ಟ್ರ ರಾಜಧಾನಿಯ ಬಜೆಟ್ ಅನ್ನು ಸಿದ್ಧಪಡಿಸುತ್ತಿರುವುದರಿಂದ ಸಿಬಿಐ ಕಚೇರಿಗೆ ಹೋಗಲು ಕನಿಷ್ಠ ಒಂದು ವಾರ ಬೇಕು ಎಂದು ಮನವಿ ಮಾಡಿಕೊಂಡಿದ್ದರು. ಕೇಂದ್ರ ಸಂಸ್ಥೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಮನೆ, ಕಚೇರಿ ಮೇಲೆ ದಾಳಿ ಮಾಡಿ ಸಿಬಿಐ ಬರಿಗೈಲಿ ಹಿಂದಿರುಗಿದೆ: ಸಿಸೋಡಿಯಾ
ಕಳೆದ ಅಕ್ಟೋಬರ್ 17ರಂದು ಕೂಡಾ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜೊತೆಗೆ ಅವರ ಮನೆ, ಕಚೇರಿ, ಲಾಕರ್‌ಗಳನ್ನು ಪರಿಶೀಲಿಸಿದ್ದರು. ಮದ್ಯ ಹಗರಣ ಸಂಬಂಧ ಸಿಬಿಐ ಈಗಾಗಲೇ ಆರೋಪಪಟ್ಟಿ ಸಲ್ಲಿಕೆ ಮಾಡಿದೆಯಾದರೂ ಅದಲ್ಲಿ ಮನೀಶ್ ಸಿಸೋಡಿಯಾ ಅವರ ಹೆಸರು ಸೇರಿಸಿಲ್ಲ. ಅವರ ಕುರಿತ ವಿಚಾರಣೆ ಇನ್ನೂ ಮುಂದುವರೆದಿರುವ ಕಾರಣ ಅವರ ಹೆಸರನ್ನು ಸೇರಿಸಿಲ್ಲ ಎಂದು ಸಿಬಿಐ ಮೂಲಗಳು ಹೇಳಿವೆ.
ದೆಹಲಿ ಸರ್ಕಾರದ ಮದ್ಯ ಲೈಸೆನ್ಸ್ ನೀತಿ ಕೆಲ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಳ್ಳುವ ರೀತಿಯಲ್ಲಿತ್ತು ಎಂಬುದು ಸಿಬಿಐ ಆರೋಪ. ಆದರೆ ಆಮ್ ಆದ್ಮಿ ಪಕ್ಷ ಇದನ್ನು ತಳ್ಳಿಹಾಕಿದೆ.
ಇದನ್ನೂ ಓದಿ: ಮನೀಶ್ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್ ನಡೆಸಿದೆ: ಕೇಜ್ರಿವಾಲ್ ಕಿಡಿ