ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಸತ್ ಮೇಲೆ ದಾಳಿ, ನೀಲಂ ಕೌರ್-ಅಮೋಲ್ ಅರೆಸ್ಟ್!
2001ರಲ್ಲಿ ಸಂಸತ್ ಭವನದ ಮೇಲೆ ನಡೆದ ದಾಳಿಗೆ ಇಂದು 22 ವರ್ಷ. ಇದೇ ದಿನ ಹೊಸ ಸಂಸತ್ ಭವನದ ಮೇಲೆ ದಾಳಿ ನಡೆದಿದೆ. ಅಮೋಲ್ ಶಿಂಧೆ ಹಾಗೂ ನೀಲಂ ಕೌರ್ ಎಂಬ ಇಬ್ಬರು ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ದಾಳಿ ನಡೆಸಿದ್ದಾರೆ.
ನವದೆಹಲಿ(ಡಿ.13) ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ಇಬ್ಬರು ಸದನದೊಳಗೆ ದಾಳಿ ನಡೆಸಿದ ಭೀಕರ ಘಟನೆ ನಡೆದಿದೆ. ಪಾಸ್ ಪಡೆದು ಲೋಕಸಭೆಗೆ ಪ್ರವೇಶಿಸಿದ್ದ ಇಬ್ಬರು, ಸದನ ನಡೆಯುತ್ತಿರುವಾಗಲೇ ಪ್ರೇಕ್ಷಕ ಗ್ಯಾಲರಿಯಿಂದ ಜಿಗಿದು ಸದನದೊಳಗೆ ದಾಳಿ ನಡೆಸಿದ್ದಾರೆ. ಕಾಲಿನ ಶೂನ ಒಳಗೆ ಟಿಯರ್ ಗ್ಯಾಸ್ ಸ್ಪ್ರೇ ಇಟ್ಟಿದ್ದ ಯುವಕ ಸದನದೊಳಗೆ ದಾಳಿ ಮಾಡಿದ್ದಾರೆ. ಇತ್ತ ಯುವತಿ ಸದನದ ಹೊರಭಾಗದಲ್ಲಿ ಟಿಯರ್ ಗ್ಯಾಸ್ ಸಿಡಿಸಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾಳೆ. ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ. ಬಂಧಿತರನ್ನು ಅಮೋಲ್ ಶಿಂಧೆ ಹಾಗೂ ನೀಲಂ ಕೌರ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 12 ರಂದು ಸಂಸದ ಪ್ರತಾಪ್ ಸಿಂಹ್ ಕಚೇರಿಯಿಂದ ಪಾಸ್ ಪಡಿದ ಅಮೋಲ್ ಶಿಂಧೆ ಸಂಸತ್ ಭವನದೊಳಕ್ಕೆ ಪ್ರವೇಶ ಪಡೆದಿದ್ದ. ಅಮೋಲ್ ಶಿಂಧೆ, ತಾನು ಮೈಸೂರು ಮೂಲದವನು, ಸಾಗರ್ ಶರ್ಮಾ ಎಂದು ಪರಿಚಯ ಮಾಡಿಕೊಂಡು ಪಾಸ್ ಪಡೆದಿದ್ದ. ಇತ್ತ ಯುವತಿ ಕೂಡ ಪಾಸ್ ಪಡೆದು ಕಲಾಪ ವೀಕ್ಷಣೆ ಪ್ರೇಕ್ಷಕರಾಗಿ ಸದನದೊಳಗೆ ಪ್ರವೇಶಿಸಿದ್ದರು.
ಶೂನ್ಯವೇಳೆಯಲ್ಲಿ ಸಂಸದರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ ಅಮೋಲ್ ಶಿಂಧೆ ಸದನದೊಳಕ್ಕೆ ಜಿಗಿದಿದ್ದಾರೆ. ಬಳಿಕ ಶೂ ಒಳಗಿದ್ದ ಸ್ಪ್ರೇ ತೆಗೆದು ದಾಳಿನಡೆಸಿದ್ದಾರೆ. ಮಹಾರಾಷ್ಟ್ರ ಮೂಲದ ಅಮೋಲ್ ಶಿಂಧೆ ಹಾಗು ಹರ್ಯಾಣದ ಹಿಸ್ಸಾರ್ ಮೂಲದ ನೀಲಂ ಕೌರ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ನಮ್ಮ ಹಕ್ಕುಗಳನ್ನು ದಮನ ಮಾಡುತ್ತಿದೆ. ನಾವು ಯಾವುದೇ ಸಂಘಟನೆಗೆ ಸೇರಿಲ್ಲ. ನಾವು ನೀರುದ್ಯೋಗಿಗಳು, ನಾವು ಹಕ್ಕುಗಳ ಬಗ್ಗೆ ಮಾತನಾಡಿದರೆ ಜೈಲಿಗೆ ಕಳುಹಿಸುತ್ತಿದ್ದಾರೆ. ತಾನಾ ಶಾಹೀ ನಹೀ ಚಲೇಗಾ ಎಂದು ನೀಲಂ ಕೌರ್ ಘೋಷಣೆ ಕೂಗಿದ್ದಾರೆ. ಸದನದ ಹೊರಭಾಗದಲ್ಲಿರುವ ರೆಡ್ ಕ್ರಾಸ್ ರಸ್ತೆಯಲ್ಲಿ ಪಟಾಕಿ ಸಿಡಿಸಿದ ನೀಲಂ ಕೌರ್ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.