ಕಾಕ್ರಾಪಾರ್ ಅಣು ವಿದ್ಯುತ್ ಘಟಕ-3 ಕಾರ್ಯಾರಂಭಕ್ಕೆ ಸನ್ನದ್ಧ| ಇದು ಸಂಪೂರ್ಣ ದೇಶೀಯವಾಗಿ ನಿರ್ಮಿತವಾದ ಭಾರಜಲ ಘಟಕ| ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಸಾಕಾರದತ್ತ ಹೆಜ್ಜೆ| ಮೋದಿ, ಅಮಿತ್ ಶಾ ಅಭಿನಂದನೆ| ದೇಶದ ಅಣು ಇತಿಹಾಸದಲ್ಲೇ ದೊಡ್ಡ ದಿನ: ಶಾ
ನವದೆಹಲಿ(ಜು.23): ಗುಜರಾತ್‌ನ ಕಾಕ್ರಾಪಾರ್ ಅಣು ವಿದ್ಯುತ್ ಸ್ಥಾವರದ 3ನೇ ಘಟಕದ ನಿರ್ಮಾಣ ಪೂರ್ಣಗೊಂಡು ಅದು ಈಗ ಕಾರ್ಯಾರಂಭ ಮಾಡಲು ಸಿದ್ಧವಾಗಿದೆ. ಇದು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿರುವ ಭಾರಜಲ ಅಣು ಘಟಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದು, ‘ಇದು ಭಾರತದ ಪರಮಾಣು ಇತಿಹಾಸದಲ್ಲೇ ದೊಡ್ಡ ದಿನ. ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ’ದ ಕಡೆ ಮಹತ್ವದ ಹೆಜ್ಜೆ’ ಎಂದು ಬಣ್ಣಿಸಿದ್ದಾರೆ.
ಸ್ಥಾವರವು ಈಗ ಕಾರ್ಯಾರಂಭ ಮಾಡಲು ಸನ್ನದ್ಧ ಸ್ಥಿತಿಯಲ್ಲಿದ್ದು, 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.
ಚೀನಾದ 59 ಆ್ಯಪ್ ಬ್ಯಾನ್: ಭಾರತದ ನಿರ್ಧಾರ ಡ್ರ್ಯಾಗನ್ ಮೇಲೆಷ್ಟು ಪ್ರಭಾವ ಬೀರುತ್ತೆ?
ಈ ಬಗ್ಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಕ್ರಾಪಾರ್ ಸ್ಥಾವರದ 3ನೇ ಘಟಕ ವಿದ್ಯುತ್ ಉತ್ಪಾದನೆಗೆ ಸನ್ನದ್ಧವಾಗಿದೆ. ಇದು ಸಂಪೂರ್ಣ ದೇಶೀಯವಾಗಿ ನಿರ್ಮಿತವಾದ ಭಾರಜಲ ಅಣು ವಿದ್ಯುತ್ ಘಟಕ. ನಮ್ಮ ‘ಮೇಕ್ ಇನ್ ಇಂಡಿಯಾ’ ಆಂದೋಲನ ಪ್ರಕಾಶಿಸುತ್ತಿರುವ ಉದಾಹರಣೆ ಇದು. ನಮ್ಮ ಅಣು ವಿಜ್ಞಾನಿಗಳಿಗೆ ಅಭಿನಂದನೆ. ಇದು ಇನ್ನಷ್ಟುಸಾಧನೆಗೆ ದಾರಿದೀಪ’ ಎಂದು ಹರ್ಷಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, ‘ಇದು ಭಾರತದ ಅಣು ಇತಿಹಾಸದಲ್ಲಿ ದೊಡ್ಡ ದಿನ. ವಿಜ್ಞಾನಿಗಳಿಗೆ ದೇಶ ಸಲಾಂ ಹೇಳುತ್ತದೆ. ಮೋದಿ ಅವರ ಆತ್ಮನಿರ್ಭರ ಭಾರತ ಎಂಬ ದೂರದೃಷ್ಟಿಯು ಸಾಕಾರಗೊಳ್ಳುತ್ತಿರುವ ಸಂಕೇತ’ ಎಂದಿದ್ದಾರೆ.
ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್ ರಫ್ತಿಗೆ ಕೇಂದ್ರ ಅನುಮತಿ!
ಕಾಕ್ರಾಪಾರ್ ಅಣು ಘಟಕ ಗುಜರಾತ್‌ನ ವ್ಯಾರಾ ನಗರದ ಸಮೀಪದಲ್ಲಿದೆ. 1992ರಲ್ಲಿ ಮೊದಲ ಘಟಕ ಹಾಗೂ 2ನೇ ಘಟಕ 2018ರಲ್ಲಿ ಶುರುವಾಗಿದ್ದವು. ಅವೂ ದೇಶೀ ನಿರ್ಮಿತವಾಗಿದ್ದವು. 3ನೇ ಹಾಗೂ 4ನೇ ಘಟಕದ ನಿರ್ಮಾಣ 2010ರಲ್ಲಿ ಆರಂಭಗೊಂಡಿತ್ತು. ಈಗ ಘಟಕ-3 ಶುರುವಾಗುತ್ತಿದ್ದು, ಘಟಕ-4 ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
