ತಳಿತಜ್ಞ ಎಂ.ಎಸ್‌.ಸ್ವಾಮಿನಾಥನ್‌, ಕೋಟ್ಯಂತರ ಜನರ ಹಸಿವನ್ನು ನೀಗಿಸಿದ ಅಪರೂಪದ ವಿಜ್ಞಾನಿ. ತಮ್ಮದೇ ಆದ ಬೃಹತ್‌ ತೋಟವಿದ್ದರೂ, ಅದರ ನಿರ್ವಹಣೆ ಬಿಟ್ಟು ದೇಶಕ್ಕಾಗಿ ಹೆಚ್ಚು ಇಳುವರಿ ನೀಡುವ ಹೊಸ ಹೊಸ ಕೃಷಿ ತಳಿ ಅಭಿವೃ ದ್ಧಿಪಡಿಸುವ ಮೂಲಕ ಬರಗಾಲದ ಸಮಯದಲ್ಲೂ ದೇಶದ ಕೋಟ್ಯಂತರ ಜನರು ಹಸಿವಿನಿಂದ ಬಳಲದಂತೆ ಮಾಡಿದ್ದು ಇವರ ಸಾಧನೆ.

ತಳಿತಜ್ಞ ಎಂ.ಎಸ್‌.ಸ್ವಾಮಿನಾಥನ್‌, ಕೋಟ್ಯಂತರ ಜನರ ಹಸಿವನ್ನು ನೀಗಿಸಿದ ಅಪರೂಪದ ವಿಜ್ಞಾನಿ. ತಮ್ಮದೇ ಆದ ಬೃಹತ್‌ ತೋಟವಿದ್ದರೂ, ಅದರ ನಿರ್ವಹಣೆ ಬಿಟ್ಟು ದೇಶಕ್ಕಾಗಿ ಹೆಚ್ಚು ಇಳುವರಿ ನೀಡುವ ಹೊಸ ಹೊಸ ಕೃಷಿ ತಳಿ ಅಭಿವೃ ದ್ಧಿಪಡಿಸುವ ಮೂಲಕ ಬರಗಾಲದ ಸಮಯದಲ್ಲೂ ದೇಶದ ಕೋಟ್ಯಂತರ ಜನರು ಹಸಿವಿನಿಂದ ಬಳಲದಂತೆ ಮಾಡಿದ್ದು ಇವರ ಸಾಧನೆ. ಇಂಥ ಮೇರು ವಿಜ್ಞಾನಿಗೆ ದೇಶದ ಪರಮೋಚ್ಚ ನಾಗರಿಕ ಗೌರವವಾದ ಭಾರತ ರತ್ನ ದೊರಕಿದ್ದು ಅತ್ಯಂತ ಸ್ತುತ್ಯ.

‘ಆರ್ಥಿಕ ಪರಿಸರ ವಿಜ್ಞಾನ ಪಿತಾಮಹ’

ಸ್ವಾಮಿನಾಥನ್‌ ಅವರು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ (ಎಂಎಸ್‌ಪಿ) ಮಾಡಿ ರೈತರ ಬೆಲೆ ಬವಣೆಗೆ ಪರಿಹಾರ ಒದಗಿಸಿದ್ದರು. 60ರ ದಶಕದಲ್ಲೇ ಹೆಚ್ಚು ಇಳುವರಿಯ ಭತ್ತ, ಗೋಧಿ ತಳಿ ಆವಿಷ್ಕಾರದ ಕಾರಣಕರ್ತರಾಗಿ ಆಹಾರ ಭದ್ರತೆಗೆ ಕಾರಣರಾಗಿದ್ದರು. ಸಿರಿಧಾನ್ಯ, ಸುಸ್ಥಿರ ಕೃಷಿಯ ಪ್ರವರ್ತಕರಾಗಿ ಹಸಿರು ಕ್ರಾಂತಿಗೆ ಭಾರಿ ಕೊಡುಗೆ ನೀಡಿದ್ದರು. ಹಸಿರು ಕ್ರಾಂತಿಗೆ ನೀಡಿದ ಕೊಡುಗೆಗಾಗಿ ವಿಶ್ವಸಂಸ್ಥೆಯಿಂದ ‘ಆರ್ಥಿಕ ಪರಿಸರ ವಿಜ್ಞಾನ ಪಿತಾಮಹ’ ಎಂದೂ ಬಣ್ಣಿಸಲ್ಪಟ್ಟಿದ್ದರು.

ತಮಿಳುನಾಡಲ್ಲಿ ಜನನ, ಅಮೆರಿಕದಲ್ಲಿ ಓದು

1925ರಲ್ಲಿ ತಮಿಳುನಾಡಿನ ಕುಂಬಕೋಣಂನಲ್ಲಿ ಜನಿಸಿದ ಮೊನ್‌ಕೊಂಬು ಸಾಂಬಶಿವನ್‌ ಸ್ವಾಮಿ​ನಾಥನ್‌, ರಾಜ್ಯದಲ್ಲಿ ಪ್ರಾಥಮಿಕ, ಕಾಲೇಜು ಅಧ್ಯ​ಯನದ ಬಳಿಕ ಅಮೆರಿಕಕ್ಕೆ ತೆರಳಿ 1949ರಲ್ಲಿ ಆಲೂಗಡ್ಡೆ ವಿಷಯದಲ್ಲಿ ಸೈಟೋಜೆನೆಟಿಕ್‌ ಸಂಶೋಧನೆ ನಡೆಸಿ ಬಳಿಕ ನೆದರ್ಲೆಂಡ್‌ ಮತ್ತು ಕೇಂಬ್ರಿಡ್ಜ್‌ ವಿವಿಯಲ್ಲಿ ತಳಿ ಸಂಶೋಧನೆಯಲ್ಲಿ ಪಿಎಚ್‌ಡಿ ಪದವಿ ಪಡೆದರು. ನಂತರ ಸಿವಿಲ್‌ ಸರ್ವೀಸ್‌ ಪರೀಕ್ಷೆಯಲ್ಲಿ ಪಾಸಾಗಿ ಅಧಿಕಾರಿಯಾಗುವ ಯೋಗ ಹೊಂದಿದ್ದರೂ, ಆ ಕಡೆ ಹೋಗದ ಅವರು, ಕೃಷಿ ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಸ್ವಾಮಿನಾಥನ್‌ ಮಾಡಿದರು ಹಸಿರು ಕ್ರಾಂತಿ

ಸ್ವಾತಂತ್ರ್ಯಪೂರ್ವವಾದ 1943-44ರಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಬಂಗಾಳದ ಬರಗಾಲ ಲಕ್ಷಾಂತರ ಜನರನ್ನು ಬಲಿಪಡೆಯಿತು. ಇದು ಸರ್ಕಾರ ಕೃಷಿ ವಲಯದ ಕಡೆಗೆ ಹೊಸ ದೃಷ್ಟಿಇಡಲು ಕಾರಣವಾದ ಜೊತೆಗೆ, ಸ್ವಾಮಿನಾಥನ್‌ ಅವರಿಗೂ ಹೊಸ ಸಾಧನೆ ಮಾಡಲು ಪ್ರೇರೇಪಿಸಿತು. ಎಂ.ಎಸ್‌. ಸ್ವಾಮಿನಾಥನ್‌ ಅವರು ಮಾಡಿದ್ದ ಸಾಧನೆ ನೋಡಿದ್ದ ಭಾರತ ಸರ್ಕಾರ ಇವರನ್ನು ಕಟಕ್‌ನಲ್ಲಿರುವ ಕೇಂದ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ ನೇಮಿಸಿತು. ಅಲ್ಲಿ ಅವರಿಗೆ ಭತ್ತದ ಹೈಬ್ರಿಡ್‌ ತಳಿ ಅಭಿವೃದ್ಧಿ ಕೆಲಸ ವಹಿಸಲಾಯಿತು. ರಸಗೊಬ್ಬರಕ್ಕೆ ಸ್ಪಂದಿಸಿ ಉತ್ತಮ ತಳಿ ಅಭಿವೃದ್ಧಿಯ ಉದ್ದೇಶ ಸರ್ಕಾರದ್ದಾಗಿತ್ತು. ಈ ಯೋಜನೆ ಫಲ ಕೊಟ್ಟು ದೇಶದಲ್ಲಿ ಹೆಚ್ಚಿನ ಪ್ರಮಾಣದ ಭತ್ತ ಉತ್ಪಾದನೆಗೆ ಕಾರಣವಾಯಿತು. ಇವರ ಸಾಧನೆಯ ಫಲವಾಗಿಯೇ 1.2 ಕೋಟಿ ಟನ್‌ ಭತ್ತ ಬೆಳೆದ ಗರಿಷ್ಠ ದಾಖಲೆ ಹೊಂದಿದ್ದ ಭಾರತೀಯ ರೈತರು ಮೊದಲ ಬಾರಿಗೆ ದಾಖಲೆಯ 1.7 ಕೋಟಿ ಟನ್‌ ಭತ್ತ ಬೆಳೆದರು.

ಗೋಧಿ ಕ್ರಾಂತಿಯಿಂದ ಭಾರತ ಸ್ವಾವಲಂಬಿ

ನೊಬೆಲ್‌ ಪುರಸ್ಕೃತ ವಿಜ್ಞಾನಿ ಡಾ. ನೋರ್ಮನ್‌ ಬೋರ್ಲೋಗ್‌ ಅಭಿವೃದ್ಧಿಪಡಿಸಿದ್ದ ಮೆಕ್ಸಿಕನ್‌ ಕುಬ್ಜ ಗೋಧಿ ತಳಿಯಿಂದ ಪ್ರಭಾವಿತರಾದ ಸ್ವಾಮಿನಾಥನ್‌, ನೋರ್ಮನ್‌ ಅವರನ್ನು ಭಾರತಕ್ಕೆ ಕರೆಸಿ ಅವರ ಜೊತೆಗೂಡಿ ಹೊಸ ಗೋಧಿ ತಳಿ ಅಭಿವೃದ್ಧಿಪಡಿಸಿದರು. ಪರಿಣಾಮ ಗೋಧಿಗೆ ಅಮೆರಿಕದ ಮೇಲೆ ಅವಲಂಬಿತರಾಗಿದ್ದ ಭಾರತ ಪೂರ್ಣ ಸ್ವಾವಲಂಬಿಯಾಗುವಂತೆ ಆಯಿತು. ಇದನ್ನು ಸ್ವಾಮಿನಾಥನ್‌ ಅವರ ಮಾತಿನಲ್ಲೇ ಕೇಳುವುದಾದರೆ ‘1947 ರಲ್ಲಿ ಭಾರತ ಸ್ವತಂತ್ರವಾದಾಗ, ನಾವು ವರ್ಷಕ್ಕೆ ಸುಮಾರು 6 ದಶಲಕ್ಷ ಟನ್ ಗೋಧಿ ಉತ್ಪಾದಿಸುತ್ತಿದ್ದೆವು. 1962ರ ಹೊತ್ತಿಗೆ, ಗೋಧಿ ಉತ್ಪಾದನೆಯು ವರ್ಷಕ್ಕೆ ಸುಮಾರು 10 ದಶಲಕ್ಷ ಟನ್‌ಗಳಿಗೆ ಏರಿತು. ಆದರೆ 1964 ಮತ್ತು 1968ರ ನಡುವೆ, ಗೋಧಿಯ ವಾರ್ಷಿಕ ಉತ್ಪಾದನೆ ಸುಮಾರು 10 ದಶಲಕ್ಷ ಟನ್‌ಗಳಿಂದ ಸುಮಾರು 17 ದಶಲಕ್ಷ ಟನ್‌ಗಳಿಗೆ ಏರಿತು. ಇದು ಉತ್ಪಾದನೆಯಲ್ಲಿ ಭಾರೀ ಜಿಗಿತವಾಗಿತ್ತು ಮತ್ತು ಅದಕ್ಕಾಗಿಯೇ ಇದನ್ನು ಕ್ರಾಂತಿಕಾರಿ ಹೆಜ್ಜೆ ಎಂದು ಕರೆಯಲಾಯಿತು. ಇದು ಭಾರತದ ರೈತರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿತು.’

ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್,ಎಂಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆ

ಸುಸ್ಥಿರ ಆಹಾರ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕ

ಸುಸ್ಥಿರ ಕೃಷಿ ಪದ್ಧತಿಗಾಗಿ ಹಾಗೂ ಸಿರಿಧಾನ್ಯದ ಪ್ರಚಾರಕರಾಗಿ ಅವರ ಅವರು ಪಟ್ಟ ಶ್ರಮವು ಅವರನ್ನು ಸುಸ್ಥಿರ ಆಹಾರ ಭದ್ರತೆಯ ಕ್ಷೇತ್ರದಲ್ಲಿ ವಿಶ್ವ ನಾಯಕನನ್ನಾಗಿ ಮಾಡಿತು.

ಕನಿಷ್ಠ ಬೆಂಬಲ ಬೆಲೆಗೆ ನಾಂದಿ ಹಾಡಿದ ಎಂಎಸ್‌

ರೈತರು ಇಂದು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸುತ್ತಿದೆ. ಈ ಕನಿಷ್ಠ ಬೆಂಬಲ ಬೆಲೆಯ ಹಿಂದಿನ ಚಿಂತನೆಯ ಕೂಸೇ ಎಂ.ಎಸ್‌. ಸ್ವಾಮಿನಾಥನ್‌. 2004ರಲ್ಲಿ ರೈತರ ಆತ್ಮಹತ್ಯೆ ಹೆಚ್ಚಾದಾಗ ಅವರ ಸಂಕಷ್ಟ ಪರಿಹರಿಸಲು ಸ್ವಾಮಿನಾಥನ್‌ ಅವರನ್ನು ರೈತರ ಮೇಲಿನ ರಾಷ್ಟ್ರೀಯ ಆಯೋ​ಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಆಯೋಗವು 2006ರಲ್ಲಿ ತನ್ನ ವರದಿ ಸಲ್ಲಿಸಿತು. ‘ರೈತರು ಬೆಳೆದ ಒಟ್ಟು ಬೆಳೆ ತೂಕಕ್ಕೆ ಹಾಕಿದಾಗ ಅದರ ಒಟ್ಟಾರೆ ಖರ್ಚುವೆಚ್ಚದ ಸರಾಸರಿ ತೆಗೆಯಬೇಕು. ಕನಿಷ್ಠ ಮಾರಾಟ ಬೆಲೆಯು ಈ ಖರ್ಚುವೆಚ್ಚಕ್ಕಿಂತ ಶೇ.50ರಷ್ಟುಹೆಚ್ಚಿರಬೇಕು’ ಎಂದು ಶಿಫಾರಸು ಮಾಡಿದರು. ಇದು ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡಿತು. ಹೀಗಾಗಿ ಬೆಂಬಲ ಬೆಲೆ ಪದ್ಧತಿ ಜಾರಿ ಮಾಡಿದ ಸ್ವಾಮಿನಾಥನ್‌ರನ್ನು ರೈತರು ಇಂದಿಗೂ ನೆನೆಯುತ್ತಾರೆ.

ಅನೇಕ ಹುದ್ದೆಗಳಲ್ಲಿ ಸೇವೆ

ಡಾ। ಸ್ವಾಮಿನಾಥನ್‌ ಅವರು ಅವರು ಭಾರತ ಮತ್ತು ವಿದೇಶಗಳೆರಡರಲ್ಲೂ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಕೃಷಿ ಸಂಶೋ​ಧನಾ ಮಂಡಳಿಯ ಮಹಾನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಕೆಲಸ ಮಾಡಿದ್ದರು. ಆಹಾರ ಮತ್ತು ಕೃಷಿ ಸಂಸ್ಥೆ ಮಂಡಳಿಯ ಸ್ವತಂತ್ರ ಅಧ್ಯಕ್ಷರಾಗಿ (1981-85), ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿ (1984-90), 1989-96 ರಿಂದ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಭಾರತ) ಅಧ್ಯಕ್ಷರಾಗಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ಮಹಾನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಒಲಿದು ಬಂದಿದ್ದವು ಮ್ಯಾಗ್ಸೆಸೆ, ಪದ್ಮ

1971ರಲ್ಲಿ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1987ರಲ್ಲಿ ಮೊತ್ತಮೊದಲ ವಿಶ್ವ ಆಹಾರ ಪ್ರಶಸ್ತಿ, ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿ ಸಂದವು. ಜೊತೆಗೆ ಪ್ರಪಂಚ​ ದಾದ್ಯಂತದ ವಿಶ್ವವಿದ್ಯಾಲಯಗಳಿಂದ 84 ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದರು. ಈಗ ಇವರಿಗೆ ಭಾರತ ರತ್ನ ಗೌರವ ದೊರಕಿದ್ದು ಅತ್ಯಂತ ಸಂತಸದಾಯಕ ಸುದ್ದಿ.

ಕಳೆದ ವರ್ಷ ನಿಧನ

ಅಧಿಕ ಇಳುವರಿ ನೀಡುವ ಭತ್ತ, ಗೋಧಿ ಆವಿಷ್ಕಾರಕ್ಕೆ ಕಾರಣರಾಗಿದ್ದ, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಸಿರಿಧಾನ್ಯ, ಸುಸ್ಥಿರ ಕೃಷಿಯ ಪ್ರವರ್ತಕ ಕ್ರಾಂತಿ’ಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದ ಎಂ.ಎಸ್‌. ಸ್ವಾಮಿನಾಥನ್‌ ಕಳೆದ ವರ್ಷವಷ್ಟೇ (2023ರ ಸೆ.28ರಂದು) ಚೆನ್ನೈನಲ್ಲಿ ನಿಧನರಾದರು. ಆಗ ಅವರಿಗೆ 98 ವರ್ಷ ವಯಸ್ಸಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಯ ಮಾಜಿ ಮುಖ್ಯ ವಿಜ್ಞಾನಿ ಡಾ। ಸೌಮ್ಯ ಸ್ವಾಮಿನಾಥನ್‌ ಸೇರಿದಂತೆ ಮೂವರು ಪುತ್ರಿಯರನ್ನು ಸ್ವಾಮಿನಾಥನ್‌ ಅಗಲಿದರು. 2022ರಲ್ಲೇ ಸ್ವಾಮಿನಾಥನ್‌ ಅವರ ಪತ್ನಿ ನಿಧನರಾಗಿದ್ದರು.