Asianet Suvarna News Asianet Suvarna News

ಭಾರತರತ್ನ: ಯುಪಿಯಲ್ಲಿ ಎಲ್ಲರಿಗೂ ಭೂಮಿ ಸಮಾನ ಹಂಚಿಕೆ ಆಗುವಂತೆ ಮಾಡಿದ್ದ ಚೌಧರಿ ಚರಣ್‌ ಸಿಂಗ್‌

ಕಾಂಗ್ರೆಸ್‌ ಬೆಂಬಲದೊಂದಿಗೆ 1979ರಲ್ಲಿ ಪ್ರಧಾನಿ ಆದ ಚೌಧರಿ ಚರಣ್‌ ಸಿಂಗ್‌ಗೆ ಇಂದಿರಾ ಗಾಂಧಿ ಅವರು ತಮ್ಮ ಮೇಲಿನ ಕೇಸು ಹಿಂಪಡೆಯಬೇಕು ಎಂದು ಷರತ್ತು ಹಾಕಿದ್ದರು ಎನ್ನಲಾಗಿದೆ. ಆದರೆ ಅಧಿಕಾರಕ್ಕೇರದಿದ ನಂತರ ಚರಣ್ ಸಿಂಗ್‌, ಇಂದಿರಾ ಮೇಲಿನ ಕೇಸು ರದ್ದತಿಗೆ ನಿರಾಕರಿಸಿದರು. ಹೀಗಾಗಿ ಕೂಡಲೇ ಕಾಂಗ್ರೆಸ್‌ ಬೆಂಬಲ ಹಿಂಪಡೆಯಿತು

Bharat Ratna Chaudhary Charan Singh pioneer of land reform because of him land was distributed equally to all in Uttar Pradesh akb
Author
First Published Feb 10, 2024, 6:45 AM IST
  • ಭೂಸುಧಾರಣೆಯ ಹರಿಕಾರರಾಗಿದ್ದ ಚರಣ್‌ ಸಿಂಗ್‌ ರೈತರ ಚಾಂಪಿಯನ್‌
  • ಯುಪಿಯಲ್ಲಿ ಎಲ್ಲರಿಗೂ ಭೂಮಿ ಸಮಾನ ಹಂಚಿಕೆ ಆಗುವಂತೆ ಮಾಡಿದ್ದ ಚೌಧರಿ ಚರಣ್‌ ಸಿಂಗ್‌
  • ಬಡ ಭೂರಹಿತರು ಹಾಗೂ ಬಡ ರೈತರ ಪಾಲಿಗೆ ಚರಣ್ ಸಿಂಗ್‌ ಆರಾಧ್ಯ ದೈವ
  •  ಚರಣ್‌ ಸಿಂಗ್‌ರ ರೈತ ಪ್ರೀತಿಗಾಗಿಯೇ ಅವರ ಜನ್ಮದಿನ ‘ರಾಷ್ಟ್ರೀಯ ಕಿಸಾನ್‌ ದಿವಸ್’ ಎಂದು ಆಚರಣೆ
  • ಇಂದಿರಾ ಗಾಂಧಿ ಆಪ್ತತರಾಗಿದ್ದರೂ ತುರ್ತು ಪರಿಸ್ಥಿತಿ ವಿರುದ್ಧ ಸಿಡಿದೆದ್ದಿದ್ದ ಚೌಧರಿ ಚರಣ್ ಸಿಂಗ್


ಸ್ವತಂತ್ರ ಭಾರತದ 5ನೇ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡುವುದಾಗಿ ಕೇಂದ್ರ ಶುಕ್ರವಾರ ಘೋಷಿಸಿದೆ. ಸಿಂಗ್ ತಮ್ಮ ಇಡೀ ಜೀವನವನ್ನು ರೈತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದ ಚರಣ್‌ ಸಿಂಗ್‌ ಅವರು ರೈತರ ಚಾಂಪಿಯನ್‌ ಎಂದೇ ಜನಜನಿತರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತನಾಗಿದ್ದರೂ, ತುರ್ತು ಪರಿಸ್ಥಿತಿ ವಿರುದ್ಧ ಸಿಡಿದೆದ್ದು ನಿಂತಿದ್ದರು. ಅಲ್ಲದೆ, ಉತ್ತರ ಪ್ರದೇಶದ ಪ್ರಮುಖ ಜಾಟ್‌ ಸಮುದಾಯದ ನಾಯಕರಾಗಿ, ರೈತ ನಾಯಕರಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು ಚೌಧರಿ ಚರಣ್‌ ಸಿಂಗ್‌. ಇಂಥ ಮಹಾಮಹಿಮರಿಗೆ ಭಾರತ ರತ್ನ ಸಂದಿರುವುದು ದೇಶದ ರೈತರು ಹೆಮ್ಮೆ ಪಡುವ ಕ್ಷಣ.

ಉತ್ತರ ಪ್ರದೇಶ ರಾಜಕೀಯದಲ್ಲಿ ಛಾಪು

ಚೌಧರಿ ಚರಣ್ ಸಿಂಗ್ ಅವರು 1902 ರಲ್ಲಿ ಉತ್ತರ ಪ್ರದೇಶದ ಮೇರಠ್‌ ಜಿಲ್ಲೆಯ ನೂರ್ಪುರ್ ಗ್ರಾಮದಲ್ಲಿ ರೈತರ ಕುಟುಂಬದಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯಪೂರ್ವದಲ್ಲೇ, ಅಂದರೆ 1937ರಲ್ಲಿ ಛಪ್ರೌಲಿಯಿಂದ ಅಂದಿನ ಯುಪಿ ಅಸೆಂಬ್ಲಿಗೆ ಮೊದಲ ಬಾರಿಗೆ ಆಯ್ಕೆಯಾದರು. ಜೂನ್ 1951ರಲ್ಲಿ, ಅವರು ರಾಜ್ಯ ಕ್ಯಾಬಿನೆಟ್ ಮಂತ್ರಿಯಾದರು. ಇದು ಅವರು ದೇಶದ ಅತ್ಯುನ್ನತ ರಾಜಕೀಯ ಹುದ್ದೆಗೆ ಏರಲು ಒಂದು ಪ್ರಮುಖ ಮೆಟ್ಟಿಲು.

ಕಾಂಗ್ರೆಸ್ ತೊರೆದು ಭಾರತ ಕ್ರಾಂತಿ ದಳ ರಚನೆ, 2 ಬಾರಿ ಸಿಎಂ

ಚರಣ್‌ ಸಿಂಗ್‌ 50ರ ದಶಕದಲ್ಲಿ ಯುಪಿಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಆದರೆ ಪಕ್ಷದಲ್ಲಿನ ಕೆಲವು ವಿದ್ಯಮಾನದಿಂದ ಅತೃಪ್ತರಾದ ಸಿಂಗ್, ಯುಪಿಯಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ಕಾಂಗ್ರೆಸ್ ತೊರೆದರು. ಅವರು ಭಾರತೀಯ ಕ್ರಾಂತಿ ದಳ (ಬಿಕೆಡಿ) ರಚಿಸಿದರು. ಸಿಂಗ್ ಯುಪಿ ಮುಖ್ಯಮಂತ್ರಿಯಾಗಿ 2 ಬಾರಿ ಸೇವೆ ಸಲ್ಲಿಸಿದರು. ಮೊದಲನೆಯದಾಗಿ, ಏಪ್ರಿಲ್ 3, 1967 ರಿಂದ ಫೆಬ್ರವರಿ 25, 1968 ರವರೆಗೆ ಮತ್ತು ಎರಡನೆಯದು ಫೆಬ್ರವರಿ 18, 1970 ರಿಂದ ಅಕ್ಟೋಬರ್ 1, 1970 ರವರೆಗೆ. ಅದರ ನಂತರ, ಅವರು ರಾಷ್ಟ್ರೀಯ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡರು.

ತುರ್ತು ಸ್ಥಿತಿ ವೇಳೆ ಜೈಲು ವಾಸ

1974 ರಲ್ಲಿ, ಅವರು ತಮ್ಮ ಪಕ್ಷವನ್ನು ಸಂಯುಕ್ತ (ಯುನೈಟೆಡ್) ಸಮಾಜವಾದಿ ಪಕ್ಷದೊಂದಿಗೆ ವಿಲೀನಗೊಳಿಸಿ ಭಾರತೀಯ ಲೋಕದಳ (ಬಿಎಲ್‌ಡಿ) ಅನ್ನು ರಚಿಸಿದರು. ಆ ಸಮಯದಲ್ಲಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು ಮತ್ತು ಬಹುತೇಕ ಅಜೇಯ ರಾಜಕೀಯ ಶಕ್ತಿಯಾಗಿದ್ದರು. ಮುಂದಿನ ವರ್ಷ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಇತರ ಪ್ರಮುಖ ವಿರೋಧ ಪಕ್ಷದ ನಾಯಕರಂತೆ ಸಿಂಗ್ ಅವರು ಒಂದು ವರ್ಷ ಜೈಲುವಾಸ ಅನುಭವಿಸಿದರು.

1977ರಲ್ಲಿ ಇಂದಿರಾರನ್ನು ಬಂಧಿಸಿದ್ದ ಚರಣ್

ತುರ್ತುಪರಿಸ್ಥಿತಿಯ ರದ್ದತಿಯ ನಂತರ ಕಾಂಗ್ರೆಸ್‌ ವಿರೋಧಿ ಅಲೆ ದೇಶದಲ್ಲಿ ಬೀಸಿತು. 1977ರಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಿದ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ ರಚನೆ ಆಯಿತು. ಸರ್ಕಾರ ನಿರ್ಣಾಯಕ ಘಟಕವಾಗಿ ಚರಣ್‌ಸಿಂಗ್‌ರ ಪಕ್ಷ ಹೊರಹೊಮ್ಮಿತು. ಈ ವೇಳೆ ಸಿಂಗ್ ಅವರು ಮಾರ್ಚ್ 24, 1977 ರಿಂದ ಜುಲೈ 1, 1978 ರವರೆಗೆ ಕೇಂದ್ರ ಗೃಹ ಸಚಿವರಾದರು. ಇದೇ ವೇಳೆ ಭ್ರಷ್ಟಾಚಾರದ ಆರೋಪ ಹೊರಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಂಧನವಾಯಿತು. ಗೃಹ ಸಚಿವ ಚರಣ್‌ ಸಿಂಗ್‌ ಅಣತಿಯ ಮೇರೆಗೆ ಇಂದಿರಾ ಬಂಧನ ಆಯಿತು ಎಂದು ದೇಶದಲ್ಲಿ ರಾಜಕೀಯ ಕೋಲಾಹಲವೇ ಸೃಷ್ಟಿಯಾಯಿತು.

ನನ್ನ ಪ್ರಾಣ ನನ್ನದಲ್ಲ. ನನ್ನ ಉಸಿರು ರಾಷ್ಟ್ರಕ್ಕೆ ಸಮರ್ಪಿತವಾಗಿದೆ: ಅಡ್ವಾಣಿ

1979ರಲ್ಲಿ ಚರಣ್‌ಗೆ ಪ್ರಧಾನಿ ಪಟ್ಟ

ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಆಂತರಿಕ ಸಂಘರ್ಷಗಳು ತಲೆದೋರಿದ ಕಾರಣ ದೇಸಾಯಿ 1979ರಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಆಗ ಜನತಾ ಪಕ್ಷ ಒಡೆದು ಜನತಾ ಪಕ್ಷ (ಜಾತ್ಯತೀತ) ರಚನೆಯಾಯಿತು. ಇದು ಜನತಾ ಪ್ರಯೋಗದ ಅಂತ್ಯಕ್ಕೆ ನಾಂದಿಯಾಯಿತು. ಈ ವೇಳೆ ಚರಣ್ ಸಿಂಗ್‌ ಅವರು ತಾವು ಸಂಘರ್ಷಕ್ಕೆ ಇಳಿದಿದ್ದ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು ಮತ್ತು ಜುಲೈ 28, 1979ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

23 ದಿನ ಪ್ರಧಾನಿ, ಬಹುಮತ ಸಾಬೀತಿಗೂ ಮೊದಲೇ ರಾಜೀನಾಮೆ

ಕಾಂಗ್ರೆಸ್‌ ಬೆಂಬಲದೊಂದಿಗೆ 1979ರಲ್ಲಿ ಪ್ರಧಾನಿ ಆದ ಚೌಧರಿ ಚರಣ್‌ ಸಿಂಗ್‌ಗೆ ಇಂದಿರಾ ಗಾಂಧಿ ಅವರು ತಮ್ಮ ಮೇಲಿನ ಕೇಸು ಹಿಂಪಡೆಯಬೇಕು ಎಂದು ಷರತ್ತು ಹಾಕಿದ್ದರು ಎನ್ನಲಾಗಿದೆ. ಆದರೆ ಅಧಿಕಾರಕ್ಕೇರದಿದ ನಂತರ ಚರಣ್ ಸಿಂಗ್‌, ಇಂದಿರಾ ಮೇಲಿನ ಕೇಸು ರದ್ದತಿಗೆ ನಿರಾಕರಿಸಿದರು. ಹೀಗಾಗಿ ಕೂಡಲೇ ಕಾಂಗ್ರೆಸ್‌ ಬೆಂಬಲ ಹಿಂಪಡೆಯಿತು. ಇದರಿಂದಾಗಿ ಅಧಿಕಾರಕ್ಕೇರಿದ ಕೇವಲ 23 ದಿನದಲ್ಲಿ ಬಹುಮತ ಸಾಬೀತಿಗೂ ಮೊದಲೇ ಪ್ರಧಾನಿ ಹುದ್ದೆಗೆ ಚರಣ್‌ ಸಿಂಗ್‌ ರಾಜೀನಾಮೆ ನೀಡಿದರು. ವಿಶ್ವಾಸಮತಕ್ಕೂ ಮೊದಲೇ ರಾಜೀನಾಮೆ ನೀಡಿದ ಮೊದಲ ಪ್ರಧಾನಿ ಎಂದೆನ್ನಿಸಿಕೊಂಡರು. ಬಳಿಕ ಹಂಗಾಮಿ ಪ್ರಧಾನಿ ಆಗಿ ಮುಂದುವರಿದ ಅವರು ಒಟ್ಟು 170 ದಿನ ಪ್ರಧಾನಿ ಹುದ್ದೆಯಲ್ಲಿದ್ದರು.

ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್,ಎಂಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆ

ಕೊನೆಯ ದಿನಗಳು

ಪ್ರಧಾನಿ ಹುದ್ದೆ ತೊರೆದ ಬಳಿಕ 1980ರಲ್ಲಿ ಅವರು ಜನತಾ ಪಾರ್ಟಿ (ಜಾತ್ಯತೀತ) ವಿಸರ್ಜಿಸಿ ಲೋಕದಳ ಕಟ್ಟಿದರು. ಬಳಿಕ ಅದನ್ನೂ ವಿಸರ್ಜಿಸಿ ‘ದಲಿತ್‌ ಮಜ್ದೂರ್ ಕಿಸಾನ್‌ ಪಕ್ಷ’ ಕಟ್ಟಿದರು. ಬಳಿಕ ಈ ಪಕ್ಷವನ್ನೂ ವಿಸರ್ಜಿಸಿ ಮತ್ತೆ ಅದಕ್ಕೆ ಲೋಕದಳ ಎಂದು ಹೆಸರಿಟ್ಟರು. ಈ ನಡುವೆ 1985ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಅವರು ಚೇತರಿಸಿಕೊಳ್ಳಲಿಲ್ಲ. 1987ರ ಮೇ 28ರಂದು ನಿಧನರಾದರು. ಇವರ ನಿಧನಾನಂತರ ಮಗ ಅಜಿತ್‌ ಸಿಂಗ್‌ ಅವರು ಲೋಕದಳದ ಚುಕ್ಕಾಣಿ ಹಿಡಿದರೆ, ಈಗ ಮೊಮ್ಮಗ ಜಯಂತ್‌ ಚೌಧರಿ ಈ ಪಕ್ಷದ ನೇತಾರರಾಗಿದ್ದಾರೆ.

ಭೂಸುಧಾರಣೆಯ ಹರಿಕಾರ ಚರಣ್ ಸಿಂಗ್‌

ರೈತ ನಾಯಕ ಎಂದೇ ಖ್ಯಾತರಾಗಿದ್ದ ಚರಣ್‌ ಸಿಂಗ್‌, ಉತ್ತರ ಪ್ರದೇಶದಲ್ಲಿ ಭೂಸುಧಾರಣೆಗಳ ಮುಖ್ಯ ವಾಸ್ತುಶಿಲ್ಪಿಯಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಇವರ ಒತ್ತಾಸೆ ಮೇಲೆ ಮಸೂದೆಯೊಂದು ಜಾರಿಗೆ ಬಂದು ಗ್ರಾಮೀಣ ಸಾಲಗಾರರಿಗೆ ನಿರಾಳತೆ ತಂದಿತು. ಇನ್ನು ಉತ್ತರ ಪ್ರದೇಶದಲ್ಲಿ ಚರಣ್‌ ಸಿಂಗ್‌ ಅವರ ಉಪಕ್ರಮದಿಂದಲೇ ಮಂತ್ರಿಗಳು ಅನುಭವಿಸುತ್ತಿದ್ದ ಮಿತಿಮೀರಿದ ಸಂಬಳ ಮತ್ತು ಇತರ ಸವಲತ್ತುಗಳು ಕಡಿತಗೊಂಡವು. ಮುಖ್ಯಮಂತ್ರಿಯಾಗಿ ಅವರು ಭೂ ಹಿಡುವಳಿ ಕಾಯಿದೆ-1960 ಅನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಇದು ರಾಜ್ಯದಾದ್ಯಂತ ಭೂಮಿಯು ಬಡವರು ಹಾಗೂ ಶ್ರೀಮಂತರಿಗೆ ಏಕರೂಪದಲ್ಲಿ ಹಂಚಿಕೆಯಾಗಲು ನೆರವು ನೀಡಿತು. ಹೀಗಾಗಿ ಬಡ ಭೂರಹಿತರು ಹಾಗೂ ಬಡ ರೈತರ ಪಾಲಿಗೆ ಚರಣ್ ಸಿಂಗ್‌ ಆರಾಧ್ಯ ದೈವವಾಗಿ ಹೊರಹೊಮ್ಮಿದರು. ಸಿಂಗ್ ಮರಣಾನಂತರವೂ ಅವರಿಗೆ ತಿಳಿದಿರುವ ಅನೇಕರು ಅವರ ಜೀವನ ಮತ್ತು ಕೆಲಸವನ್ನು ಧನಾತ್ಮಕವಾಗಿ ನೆನಪಿಸಿಕೊಳ್ಳುತ್ತಾರೆ. ರೈತರ ಮೇಲಿನ ಅವರ ಪ್ರೀತಿಯನ್ನು ಗಣನೆಗೆ ತೆಗೆದುಕೊಂಡು ದಿಲ್ಲಿಯಲ್ಲಿನ ಅವರ ಸ್ಮಾರಕಕ್ಕೆ ಕಿಸಾನ್‌ ಘಾಟ್‌ ಎಂದು ಹೆಸರಿಡಲಾಗಿದೆ. ಡಿ.23ರಂದು ಅವರ ಜನ್ಮದಿನವನ್ನು ಭಾರತದಲ್ಲಿ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. 1990ರಲ್ಲಿ ಅವರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಆಗಿದೆ. ಇನ್ನು ಲಖನೌ ವಿಮಾನ ನಿಲ್ದಾಣಕ್ಕೆ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.

Follow Us:
Download App:
  • android
  • ios