ನವದೆಹಲಿ[ಫೆ.23]: ‘ಭಾರತ್‌ ಮಾತಾ ಕೀ ಜೈ’ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರ ಮೂಲಕ ಭಾವನಾತ್ಮಕ ಹಾಗೂ ಉಗ್ರವಾದದ ಚಿಂತನೆಯನ್ನು ಬಿತ್ತಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಆರೋಪಿಸಿದ್ದಾರೆ. ಬಿಜೆಪಿಯನ್ನು ಉದ್ದೇಶಿಸಿಯೇ ಅವರು ಈ ಮಾತು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜವಾಹರಲಾಲ್‌ ನೆಹರು ಕುರಿತ ‘ಹೂ ಇಸ್‌ಭಾರತ್‌ ಮಾತಾ’ ಪುಸ್ತಕದ ಇಂಗ್ಲಿಷ್‌ ಹಾಗೂ ಕನ್ನಡ ಅವತರಣಿಕೆಗಳ ಬಿಡುಗಡೆ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ‘ಇಂದು ಭಾರತ್‌ ಮಾತಾ ಕೀ ಜೈ ಘೋಷಣೆಯನ್ನು ಉಗ್ರವಾದ ಹಾಗೂ ಭಾವನಾತ್ಮಕ ಚಿಂತನೆಯನ್ನು ಹುಟ್ಟಿಸಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ಪುಸ್ತಕ ಮಹತ್ವ ಪಡೆದಿದೆ’ ಎಂದರು.

‘ಭಾರತವು ಇಂದು ಪ್ರಕಾಶಿಸುತ್ತಿರುವ ಪ್ರಜಾಸತ್ತೆಯ ದೇಶಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದರೆ ಹಾಗೂ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎನ್ನಿಸಿಕೊಂಡಿದ್ದರೆ ಅದಕ್ಕೆ ದೇಶದ ಪ್ರಥಮ ಪ್ರಧಾನಿಯೇ ಕಾರಣ. ಅವರೇ ಮುಖ್ಯ ಶಿಲ್ಪಿ’ ಎಂದು ನೆಹರು ಅವರನ್ನು ಕೊಂಡಾಡಿದರು.

‘ಆದರೆ ಇತಿಹಾಸ ಓದದ ಕೆಲವರು ಇಂದು ನೆಹರು ಅವರನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಇಂಥ ಸುಳ್ಳು ಹಾಗೂ ನಕಲಿ ಪ್ರಚೋದಿತ ಆರೋಪಗಳನ್ನು ತಿರಸ್ಕರಿಸುವ ಶಕ್ತಿ ಇತಿಹಾಸಕ್ಕಿದೆ’ ಎಂದರು.