ಕೇಂದ್ರ, ರೈತರ ಮಾತುಕತೆ ಮತ್ತೆ ವಿಫಲ, ರೈತರಿಂದ ಭಾರತ್‌ ಬಂದ್‌ ಖಚಿತ!

ಕೃಷಿ ಕಾಯ್ದೆ ಕಗ್ಗಂಟು: ನಾಡಿದ್ದು ರೈತರಿಂದ ಭಾರತ್‌ ಬಂದ್‌ ಖಚಿತ| ಕೇಂದ್ರ, ರೈತರ ಮಾತುಕತೆ ಮತ್ತೆ ವಿಫಲ| ಡಿ.9ಕ್ಕೆ ಮತ್ತೆ ಸಭೆ| ಭಾರತ್‌ ಬಂದ್‌ಗೆ ಕಾರ್ಮಿಕ ಸಂಘಟನೆಗಳಿಂದಲೂ ಬೆಂಬಲ

Bharat Bandh on Dec 8 govt farmers to meet next day for another round of talks pod

ನವದೆಹಲಿ(ಡಿ.06): ಕೇಂದ್ರದ 3 ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಳೆದ 10 ದಿನಗಳಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ 5 ಗಡಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕೇಂದ್ರ ಸರ್ಕಾರ ಶನಿವಾರ ನಡೆಸಿದ ಐದನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಆದರೆ ಮಾತುಕತೆಯಿಂದ ಪೂರ್ಣ ಪ್ರಮಾಣದಲ್ಲಿ ರೈತರು ಹಿಂದಕ್ಕೆ ಸರಿಯುವುದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಫಲವಾಗಿದೆ. ಇದರ ಫಲವೆಂಬಂತೆ ಡಿ.9ರಂದು ಮತ್ತೊಮ್ಮೆ ರೈತರನ್ನು ಮನವೊಲಿಸಲು ಕೇಂದ್ರ ಸರ್ಕಾರ ಸಭೆ ನಿಗದಿಗೊಳಿಸಿದೆ.

ಆದರೆ ಈ ಸಭೆಯ ಹೊರತಾಗಿಯೂ ಈಗಾಗಲೇ ಕರೆ ನೀಡಿರುವಂತೆ ಡಿ.8ರಂದು ಭಾರತ ಬಂದ್‌ ನಡೆಯಲಿದೆ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ. ಮತ್ತೊಂದೆಡೆ ವಿವಿಧ ಕಾರ್ಮಿಕ ಸಂಘಟನೆಗಳು ಕೂಡಾ ಭಾರತ್‌ ಬಂದ್‌ಗೆ ಬೆಂಬಲ ಘೋಷಿಸುವುದರೊಂದಿಗೆ ಪ್ರತಿಭಟನೆ ಮತ್ತಷ್ಟುತೀವ್ರ ಸ್ವರೂಪ ಪಡೆಯುವುದು ಖಚಿತವಾಗಿದೆ.

ಸುದೀರ್ಘ ಸಭೆ:

ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹಾಗೂ ಪಂಜಾಬ್‌ ಸಂಸದರೂ ಆಗಿರುವ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ ಪ್ರಕಾಶ್‌ ಅವರು 40 ರೈತ ಸಂಘಟನೆಗಳ ಪ್ರಮುಖರೊಂದಿಗೆ ಮಧ್ಯಾಹ್ನ 2.30ರಿಂದ ಸಭೆ ನಡೆಸಿದರು.

ಭತ್ತದ ಕೂಳೆ ಸುಟ್ಟಕಾರಣಕ್ಕೆ ರೈತರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯುತ್ತೇವೆ. ರೈತರ ಮೇಲಿನ ಎಲ್ಲ ಕೇಸುಗಳನ್ನೂ ಹಿಂಪಡೆಯುತ್ತೇವೆ. ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಮುಕ್ತವಾಗಿ ಪರಿಗಣಿಸುತ್ತೇವೆ ಎಂದು ನರೇಂದ್ರ ಸಿಂಗ್‌ ತೋಮರ್‌ ಮನವಿ ಮಾಡಿದರು. ಆದರೆ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯುತ್ತೀರೋ ಇಲ್ಲವೋ ಮೊದಲು ಹೇಳಿ ಎಂದು ರೈತರು ಪಟ್ಟು ಹಿಡಿದರು. ಸರ್ಕಾರದಿಂದ ಸ್ಪಷ್ಟಉತ್ತರ ದೊರೆಯದೆ ಇದ್ದಾಗ ಸಭೆಯನ್ನು ಬಹಿಷ್ಕರಿಸಲು ಮುಂದಾದರು. ಕೊನೆಗೆ ಸಚಿವರೆ ಆಕ್ರೋಶಭರಿತ ರೈತರ ಮನವೊಲಿಸಿ ಸಭೆ ಮುಂದುವರಿಯುವಂತೆ ನೋಡಿಕೊಂಡರು.

ನೂತನ ಕೃಷಿ ಕಾಯ್ದೆಗಳಿಂದ ಎಪಿಎಂಸಿಗಳು ರದ್ದಾಗುತ್ತವೆ. ಕನಿಷ್ಠ ಬೆಂಬಲ ಬೆಲೆಯಡಿ ಬೆಳೆಗಳನ್ನು ಖರೀದಿಸುವ ವ್ಯವಸ್ಥೆಯೂ ಕೊನೆಗೊಳ್ಳಲಿದ್ದು, ಕಾರ್ಪೋರೆಟ್‌ ಕಂಪನಿಗಳಿಗೆ ಅನುಕೂಲವಾಗಲಿದೆ ಎಂದು ರೈತರು ವಾದಿಸಿದರು. ಆದರೆ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಸ್ಪಷ್ಟಭರವಸೆ ನೀಡಲಿಲ್ಲ. ಆದರೆ ಕಾಯ್ದೆಗಳಿಗೆ ರೈತರ ಸಲಹೆಗಳನ್ನು ಸೇರ್ಪಡೆ ಮಾಡಲು ತಿದ್ದುಪಡಿ ತರುವ ಇಂಗಿತವನ್ನು ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ.

ವೃದ್ಧರು, ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿಭಟನಾ ಸ್ಥಳದಿಂದ ವಾಪಸ್‌ ಕಳುಹಿಸುವಂತೆಯೂ ತೋಮರ್‌ ಮನವಿ ಮಾಡಿಕೊಂಡರು.

ಸರ್ಕಾರದ ಭರವಸೆ

- ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಈಗಿನಂತೆ ಮುಂದುವರಿಕೆ, ಅದರಲ್ಲಿ ಬದಲಾವಣೆ ಇಲ್ಲ.

- ಎಪಿಎಂಸಿ ಮತ್ತಷ್ಟುಬಲಯುತಗೊಳಿಸಲು, ಅದರ ಬಳಕೆ ಹೆಚ್ಚಳಕ್ಕೆ ಅಗತ್ಯ ಕ್ರಮ

- ಭತ್ತದ ಕೂಳೆ ಸುಟ್ಟಕಾರಣಕ್ಕೆ ಹಾಕಿದ್ದೂ ಸೇರಿದಂತೆ ರೈತರ ವಿರುದ್ಧ ಹೂಡಿರುವ ಕೇಸ್‌ ವಾಪಸ್‌

- ನೂತನ ಕಾಯ್ದೆಯಡಿ ರಚನೆಯಾಗುವ ಖಾಸಗಿ ಮಂಡಳಿಗೆ ಸಮಾನ ತೆರಿಗೆ

- ವ್ಯಾಪಾರದ ವೇಳೆಯ ವಿವಾದ ಕುರಿತು ಉನ್ನತ ಕೋರ್ಟ್‌ಗೆ ಮನವಿ ಸಲ್ಲಿಸುವ ಅವಕಾಶ

- ಎಪಿಎಂಸಿಯಿಂದ ಹೊರಗಿನ ವ್ಯಾಪಾರಿಗಳ ನೋಂದಣಿಗೆ ಕಾಯ್ದೆಯಡಿ ಅವಕಾಶಕ್ಕೆ ಸಿದ್ಧ

Latest Videos
Follow Us:
Download App:
  • android
  • ios