ಚಂದ್ರನ ಮೇಲೆ ಇಟ್ಟಿಗೆ ತಯಾರಿ: ಬೆಂಗಳೂರು ವಿಜ್ಞಾನಿಗಳ ಸಂಶೋಧನೆ!
ಚಂದ್ರನ ಮೇಲೆ ಇಟ್ಟಿಗೆ ತಯಾರಿಸುವ ಐಡಿಯಾ!| ಬೆಂಗಳೂರು ವಿಜ್ಞಾನಿಗಳ ಸಂಶೋಧನೆ| ಭವಿಷ್ಯದಲ್ಲಿ ಮಾನವ ವಸತಿಗೆ ಅನುಕೂಲ
ಬೆಂಗಳೂರು(ಆ.15): ಚಂದ್ರ ಸೇರಿದಂತೆ ಇತರೆ ಗ್ರಹಗಳಲ್ಲಿ ಮಾನವರ ವಾಸಕ್ಕೆ ಪೂರಕ ವಾತಾವರಣ ಇದೆಯೇ ಎಂಬುದನ್ನು ಶೋಧಿಸಲು ವಿಶ್ವಾದ್ಯಂತ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿರುವಾಗಲೇ, ಚಂದ್ರನ ಮೇಲೆ ‘ಇಟ್ಟಿಗೆ’ ತಯಾರಿಸಲು ಭಾರತೀಯ ವಿಜ್ಞಾನಿಗಳು ಹೊಸ ಮಾರ್ಗ ಶೋಧಿಸಿದ್ದಾರೆ.
ಚಂದ್ರನಲ್ಲಿ ಸಿಗುವ ಮಣ್ಣು, ಯೂರಿಯಾ ಬಳಸಿ ಭಾರ ತಡೆಯುವಂತಹ ಇಟ್ಟಿಗೆಯಂತಹ ರಚನೆ ಹೇಗೆ ಮಾಡಬಹುದು ಎಂಬುದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಹುಡುಕಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಸತಿ ಕೈಗೊಳ್ಳುವ ಸ್ಥಿತಿ ಬಂದರೆ ಈ ಬಾಹ್ಯಾಕಾಶ ಇಟ್ಟಿಗೆಗಳನ್ನು ಬಳಸಿಕೊಂಡು, ಕಟ್ಟಡಗಳನ್ನು ವಿನ್ಯಾಸಗೊಳಿಸಬಹುದಾಗಿದೆ.
ಭೂಮಿಯಿಂದ ಬಾಹ್ಯಾಕಾಶಕ್ಕೆ ಅರ್ಧ ಕೆ.ಜಿ. ವಸ್ತು ಒಯ್ಯಲು 7.5 ಲಕ್ಷ ರು. ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಂದ್ರನಲ್ಲಿಯೇ ಇಟ್ಟಿಗೆಯಂತಹ ವಸ್ತು ತಯಾರಿಸುವ ಸಂಶೋಧನೆಯಿಂದ ಆ ಖರ್ಚು ಉಳಿಯುವ ಸಾಧ್ಯತೆ ಇರುತ್ತದೆ.
ಈ ಪ್ರಕ್ರಿಯೆಯ ಪ್ರಕಾರ, ಮಾನವರ ಮೂತ್ರದಿಂದ ಸಿಗುವ ಯೂರಿಯಾ, ಚಂದ್ರನ ಮಣ್ಣು ಬಳಸಿ ಇಟ್ಟಿಗೆ ತಯಾರಿಸಬಹುದಾಗಿದೆ. ಸಿಮೆಂಟ್ ಬದಲಿಗೆ ಗೋರಿಕಾಯಿಯನ್ನು ಅಂಟಿನ ರೂಪದಲ್ಲಿ ಬಳಸಬಹುದಾಗಿದೆ ಎಂದು ಐಐಎಸ್ಸಿ ಹೇಳಿಕೆ ನೀಡಿದೆ.