ಹನಿಮೂನ್‌ನಲ್ಲಿ ಪತ್ನಿಯಿಂದಲೇ ಕೊಲೆಯಾದ ರಾಜಾ ರಘುವಂಶಿ ಪ್ರಕರಣದ ಬೆನ್ನಲ್ಲೇ 2003ರಲ್ಲಿ ಬೆಂಗಳೂರಿನಲ್ಲಿ ಇದೇ ರೀತಿಯಲ್ಲಿ ನಡೆದ ಪ್ರಕರಣ ಎಲ್ಲರ ನೆನಪಿಗೆ ಬಂದಿತ್ತು. ಶುಭ ಎನ್ನುವ ಯುವತಿ, ಭಾವಿ ಪತಿಯನ್ನು  ಕೊಲೆ ಮಾಡಿದ್ದ ಘಟನೆಯಲ್ಲಿ ಈಗ ಸುಪ್ರೀಂ ಕೋರ್ಟ್‌ ಜೀವಾವಧಿ ಶಿಕ್ಷೆ ಕಾಯಂ ಮಾಡಿದೆ.

ಬೆಂಗಳೂರು (ಜೂ.12): ಇತ್ತೀಚೆಗೆ ರಾಜಾ ರಘುವಂಶಿ ಹತ್ಯೆ ಕೇಸ್‌ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಬಾರೀ ಚರ್ಚೆಯಾಗಿದ್ದು 2003ರಲ್ಲಿ ಬೆಂಗಳೂರಿನಲ್ಲಿ ಆದಂಥ ಕೇಸ್‌. ಹನಿಮೂನ್‌ನಲ್ಲಿ ಸಂಸಾರದ ಸುಖ ಕಾಣಲು ಹೋಗಿದ್ದ ರಾಜಾ ರಘುವಂಶಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ತನ್ನ ಪತ್ನಿಯಿಂದಲೇ ಸಾವು ಕಂಡಿದ್ದು ಇಡೀ ದೇಶಕ್ಕೆ ಆಘಾತ ನೀಡಿತ್ತು. ಆದರೆ, ಬೆಂಗಳೂರಿಗರ (Bengaluru) ಪಾಲಿಗೆ ಇದು ಹೊಸ ರೀತಿಯ ಕೇಸ್‌ ಏನೂ ಆಗಿರಲಿಲ್ಲ. 2003ರಲ್ಲಿ ಶುಭ (Ring Road Shubha Case) ಎನ್ನುವ ಯುವತಿ ತನ್ನ ಭಾವಿ ಪತಿಯನ್ನು (BV Girish) ಕೊಲೆ ಮಾಡಿದ ರೀತಿ ಇಡೀ ಬೆಂಗಳೂರು ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಸ್ಥಳೀಯ ಹಾಗೂ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆ (Life imprisonment) ಪಡೆದುಕೊಂಡಿದ್ದ ಶುಭ, ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈಗ ಸುಪ್ರೀಂ ಕೋರ್ಟ್‌ ಕೇಸ್‌ನ ಅಂತಿಮ ತೀರ್ಪು ನೀಡಿದ್ದು, ಕೊಲೆ ಪ್ರಕರಣದಲ್ಲಿ ಭಾಗಿಯಾದ ಶುಭ ಹಾಗೂ ಆಕೆಯ ಸಹಚರರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂ ಮಾಡಿದೆ. ಆದರೆ, ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂದಿನ 8 ವಾರದ ಒಳಗಾಗಿ ರಾಜ್ಯಪಾಲರ ಬಳಿ ಕ್ಷಮಾದಾನದ ಅರ್ಜಿಯನ್ನು ಹಾಕುವ ಅವಕಾಶ ನೀಡಿದೆ. ಆ ಕ್ಷಣದ ಸಿಟ್ಟು ಹಾಗೂ ಮುಂದಾಗುವ ಸಮಸ್ಯೆಗಳ ಪರಿವೆ ಇಲ್ಲದೆ ಈ ಕೃತ್ಯ ಎಸಗಿದ್ದಾರೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ, ಮುಂದಿನ 8 ವಾರಗಳ ಕಾಲ ಇವರನ್ನು ಬಂಧಿಸದೇ ಇರುವಂತೆಯೂ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಅಷ್ಟಕ್ಕೂ 2003ರ ರಿಂಗ್‌ ರೋಡ್‌ ಶುಭ ಕೇಸ್‌ನಲ್ಲಿ ಆಗಿದ್ದೇನು? ಅವುಗಳ ವಿವರ ಇಲ್ಲಿದೆ.

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ 2003ರ ರಿಂಗ್‌ ರೋಡ್‌ ಮರ್ಡರ್‌

ಅದು 2003ರ ಇಸವಿ. ನವೆಂಬರ್‌ 30. 21 ವರ್ಷದ ಕಾನೂನು ವಿದ್ಯಾರ್ಥಿ ಶುಭ ಶಂಕರನಾರಾಯಣ್‌ ಅವರ ನಿಶ್ಚಿತಾರ್ಥ 27 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಬಿವಿ ಗಿರೀಶ್‌ ಜೊತೆ ನಡೆದಿತ್ತು. ಮದುವೆ ಮುಂದಿನ ವರ್ಷಕ್ಕೆ ನಿಗದಿ ಮಾಡಲಾಗಿತ್ತು. ಇಂಜಿನಿಯರ್‌ ಆಗಿದ್ದ ಗಿರೀಶ್‌ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದ ಸರಳ ವ್ಯಕ್ತಿ. ಸುಂದರಿಯಾಗಿದ್ದ ಶುಭಳನ್ನು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಸಂತೋಷದಿಂದಲೇ ಎಲ್ಲೆಡೆ ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ಶುಭ ಕೂಡ ಶ್ರೀಮಂತ ಕುಟುಂಬದ ಹುಡುಗಿ. ಆಕೆಯ ತಂದೆ ಬೆಂಗಳೂರಿನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾಗಿದ್ದರು.

ಬನಶಂಕರಿ II ಹಂತದಲ್ಲಿ ವಾಸಿಸುತ್ತಿದ್ದ ಈ ಕುಟುಂಬಗಳು ಒಂದು ದಶಕಕ್ಕೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಇದು ಸಾಮಾನ್ಯವಾಗಿ ಭಾರತೀಯ ಕುಟುಂಬದಲ್ಲಿ ಕಾಣಬರುವ ನಿಶ್ಚಿತಾರ್ಥ-ಮದುವೆ ಎನಿಸಿಕೊಂಡಿದ್ದರಿಂದ, ಎಂಗೇಜ್‌ಮೆಂಟ್‌ ಆಗುವವರೆಗೂ ಯಾವ ಸಮಸ್ಯೆಗಳೂ ಕಾಣಿಸಿರಲಿಲ್ಲ.

ಆದರೆ, ಎಂಗೇಜ್‌ಮೆಂಟ್‌ ಆದ ಮೂರೇ ದಿನಕ್ಕೆ ಎರಡೂ ಕುಟುಂಬಕ್ಕೆ ಬರ ಸಿಡಿಲಿನಂಥ ಸುದ್ದಿ ಎದುರಾಗಿತ್ತು. 2003ರ ಡಿಸೆಂಬರ್‌ 3 ರಂದು ಗಿರೀಶ್‌ ದಾರುಣವಾಗಿ ಕೊಲೆಯಾಗಿದ್ದ. ಶುಭ ಮಾಡಿದ್ದ ಅತ್ಯಂತ ಸ್ಪಷ್ಟ ಪ್ಲ್ಯಾನಿಂಗ್‌ನ ಕೊಲೆ ಬೇಧಿಸುವುದು ಪೊಲೀಸರಿಗೂ ಸವಾಲಾಗಿತ್ತು.

ಡಿಸೆಂಬರ್‌ 3 ರಂದು ಆಗಿದ್ದೇನು?

ಡಿಸೆಂಬರ್‌ 3ರ ರಾತ್ರಿ ಗಿರೀಶ್‌ಗೆ ಕರೆ ಮಾಡಿದ್ದ ಶುಭ ತನ್ನನ್ನು ರಾತ್ರಿ ಹೊರಗೆ ಊಟಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಇದರಿಂದ ಇಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಲಿದೆ ಎಂದು ಶುಭ ಹೇಳಿದ್ದಳು. ಊಟ ಮುಗಿಸಿ ಎಚ್‌ಎಎಲ್‌ ಏರ್ಪೋರ್ಟ್‌ ಬಳಿಕ ಕತ್ತಲ ಪ್ರದೇಶದಲ್ಲಿ ಬರುವಾಗ ಶುಭ ಸ್ವಲ್ಪ ಹೊತ್ತು ಇಲ್ಲೇ ನಿಲ್ಲೋಣ ಎಂದಿದ್ದಳು. ಏರೋಪ್ಲೇನ್‌ಗಳು ಟೇಕ್‌ಆಫ್‌ ಹಾಗೂ ಲ್ಯಾಂಡಿಂಗ್‌ ಮಾಡುವುದನ್ನು ನೋಡಬೇಕು ಎಂದು ಆಕೆ ಹೇಳಿದ್ದರ ಹಿಂದಿನ ಮರ್ಮ ಗಿರೀಶ್‌ಗೆ ಅಲ್ಲಿ ಅರ್ಥವಾಗಿರಲೇ ಇದ್ದಿರಲಿಲ್ಲ.

ಎಚ್‌ಎಎಲ್‌ ಏರ್ಪೋರ್ಟ್‌ ಬಳಿ ನಿಂತಾಗ ಗಿರೀಶ್‌ ಮೇಲೆ ಒಂದು ಗ್ಯಾಂಗ್‌ ದಾಳಿ ಮಾಡಿತ್ತು. ಅವರನ್ನು ಬಿಟ್ಟುಬಿಡುವಂತೆ ಶುಭ ಅವರ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದಳು. ತಾನು ಅಮಾಯಕಿ ಎಂದು ಬಿಂಬಿಸುವ ಪ್ರಯತ್ನ ಆಕೆಯದ್ದಾಗಿತ್ತು. ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟು ತಿಂದಿದ್ದ ಗಿರೀಶ್‌ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟವಶಾಪ್‌ ಮರುದಿನ ಬೆಳಗ್ಗೆ ಗಿರೀಶ್‌ ಸಾವಿನ ಸುದ್ದಿ ಎಲ್ಲೆಡೆ ತಲುಪಿತ್ತು.

ಪೊಲೀಸರಿಗೆ ಸುಳಿವು ಸಿಕ್ಕಿದ್ದು ಹೇಗೆ?

ಗಿರೀಶ್‌ ಅವರ ಕುಟುಂಬ ಪೊಲೀಸ್‌ ದೂರು ದಾಖಲಿಸಿತು. ಆದರೆ, ಕೇಸ್‌ಅನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಸಾಕ್ಷ್ಯಗಳೂ ಸಿಕ್ಕಿರಲಿಲ್ಲ. ಹಲವು ದಿನಗಳವರೆಗೆ ಅಲ್ಲಿ ಏನಾಗಿರಬಹುದು ಎನ್ನುವುದಕ್ಕೆ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಯಾಕೆಂದರೆ, ಗಿರೀಶ್‌ಗೆ ವೈರಿ ಅಂಥಾ ಯಾರೂ ಇದ್ದಿರಲಿಲ್ಲ. ಇನ್ನು ಶುಭ ಮೇಲೆ ಅನುಮಾನ ಪಡುವಂತೆಯೇ ಇಲ್ಲ. ಯಾಕೆಂದರೆ, ಅವರ ನಿಶ್ಚಿತಾರ್ಥ ಆಗಿದ್ದೇ ಮೂರು ದಿನಗಳ ಹಿಂದೆ. ಇದಕ್ಕಾಗಿ ಪೊಲೀಸ್‌ ಅವರ ಎಂಗೇಜ್‌ಮೆಂಟ್‌ ಸಮಾರಂಭದ ವಿಡಿಯೋವನ್ನು ಪರಿಶೀಲನೆ ಮಾಡಿ, ಅಲ್ಲಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಬಂದಿದ್ದರೇ ಎಂದು ನೋಡಿದ್ದರು.

ಶುಭ ಮುಖ ನೋಡಿ ಪೊಲೀಸ್‌ಗೆ ಬಂದಿತ್ತು ಅನುಮಾನ!

ನಿಶ್ಚಿತಾರ್ಥದ ದೃಶ್ಯಗಳಲ್ಲಿ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ ಎರಡೂ ಕುಟುಂಬದ ವ್ಯಕ್ತಿಗಳು ಹಾಗೂ ನಿಶ್ಚಿತ ವಧು-ವರರ ಬಾಡಿ ಲ್ಯಾಂಗ್ವೇಜ್‌ಅನ್ನು ಚೆಕ್‌ ಮಾಡಿದ್ದರು. ಈ ವೇಳೆ ಶುಭಳ ಮುಖದಲ್ಲಿ ಅಸಮಾಧಾನ, ಆಸಕ್ತಿ ಇಲ್ಲದೇ ಇರುವಂಥ ತುಂಬಾ ಬೇಸರಗೊಂಡಂತೆ ಇದ್ದ ಭಾವವನ್ನು ಕಂಡಿದ್ದರು. ಇದು ಪೊಲೀಸರ ಕುತೂಹಲವನ್ನು ಮತ್ತಷ್ಟು ಕೆರಳಿತ್ತು. ಆ ಬಳಿಕ ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಲು ಮುಂದಾದರು.

ಹೆಚ್ಚಿನ ತನಿಖೆಯಲ್ಲಿ ಘಟನೆ ನಡೆದ ದಿನದಂದು ಆಕೆ ತನ್ನ ಕಾಲೇಜಿನಲ್ಲಿ ಜೂನಿಯರ್‌ ಆಗಿದ್ದ ಅರುಣ್ ವರ್ಮಾ ಅವರಿಗೆ 73 ಕರೆಗಳನ್ನು ಮಾಡಿ ಹಲವಾರು ಎಂಎಸ್‌ಎಂಸ್‌ ಕಳುಹಿಸಿದ್ದು ಗೊತ್ತಾಗಿತ್ತು.

ಆ ಬಳಿಕ ಪೊಲೀಸ್‌ ಅರುಣ್‌ರನ್ನು ಬಂಧಿಸಿ ವಿಚಾರಿಸಿದಾಗ ಘಟನೆ ನಡೆದ ದಿನ ತಾನು ಬೆಂಗಳೂರಿನಲ್ಲಿಯೇ ಇದ್ದಿರಲಿಲ್ಲ ಎಂದಿದ್ದ. ಈ ವೇಳೆ ಪೊಲೀಸರು ಆತನ ಫೋನ್‌ ಪಡೆದು ಲೊಕೇಷನ್‌ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಿದಾಗ, ಗಿರೀಶ್‌ ಮೇಲೆ ದಾಳಿಯಾದ ಸ್ಥಳದಲ್ಲಿ ಈತನೂ ಇದ್ದ ಎನ್ನುವುದು ಗೊತ್ತಾಗಿತ್ತು.

ಈ ಪ್ರಕರಣವನ್ನು ಭೇದಿಸಲು ಪೊಲೀಸರು ಕರೆ ದಾಖಲೆಗಳು ಲೊಕೇಷನ್‌ನಂಥ ಡಿಜಿಟಲ್‌ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೊದಲ ನಿದರ್ಶನಗಳಲ್ಲಿ ಒಂದಾಗಿತ್ತು. ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿದಾಗ, ಶುಭಾ, ಅರುಣ್‌ನನ್ನು ಪ್ರೀತಿ ಮಾಡುತ್ತಿದ್ದಳು ಮತ್ತು ಅವಳ ತಂದೆ ಈ ಸಂಬಂಧವನ್ನು ಒಪ್ಪದ ಕಾರಣ ಗಿರೀಶ್‌ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಗಿರೀಶ್‌ನನ್ನು ಕೊಲ್ಲಲು ಈ ಜೋಡಿ ಇಬ್ಬರು ಜನರನ್ನು ಕೂಡ ನೇಮಿಸಿದ್ದರು.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಶುಭ, ಅರುಣ್‌ ಹಾಗೂ ಇನ್ನಿಬ್ಬರಾದ ವೆಂಕಟೇಶ್‌ ಹಾಗೂ ದಿನಕರ್‌ರನ್ನು 2004ರ ಜನವರಿಯಲ್ಲಿ ಬಂದಿಸಲಾಯಿತು. ಕೊಲೆ ಹಾಗೂ ಪಿತೂರಿಯ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. 2010ರಲ್ಲಿ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ನಾಲ್ವರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಜುಲೈನಲ್ಲಿ, ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು, ಆರೋಪಿಯ ನಡವಳಿಕೆಯು "ಅಪರಾಧಕ್ಕೆ ಹೊಂದಿಕೆಯಾಗುತ್ತದೆ ಮತ್ತು ಮುಗ್ಧತೆಗೆ ಹೊಂದಿಕೆಯಾಗುವುದಿಲ್ಲ" ಎಂದು ಹೇಳಿತು. ನವೆಂಬರ್ 2011 ರಲ್ಲಿ, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಶುಭಾ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತು. 2014 ರಲ್ಲಿ, ಶುಭಾ 52 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ ಎಂದು ಅವರ ವಕೀಲರು ವಾದಿಸಿದ ನಂತರ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತು ಮತ್ತು ಅವರ ಸಹ-ಆರೋಪಿಗೆ ಜಾಮೀನು ನೀಡಲಾಗಿದೆ.