ಫೋನ್ ಡಿಸ್‌ಕನೆಕ್ಟ್ ಮಾಡ್ತೇನೆ, ಸಂಸದೆ ಸುಧಾಮೂರ್ತಿಗೆ ಸೈಬರ್ ವಂಚಕನ ಬೆದರಿಕೆ, ಘಟನೆ ನಡೆದಿದೆ. ನಿಮ್ಮ ಫೋನ್ ನಂಬರ್ ಮೂಲಕ ಇತರರಿಗೆ ವಿಡಿಯೋಗಳು ಕಳುಹಿಸುತ್ತೇನೆ. ತಕ್ಷಣವೇ ನಿಮ್ಮ ಫೋನ್ ಡಿಸ್ಕನೆಕ್ಟ್ ಮಾಡುತ್ತೇವೆ ಎಂದು ಬೆದೆರಿಕೆ ಹಾಕಲಾಗಿದೆ
ಬೆಂಗಳೂರು (ಸೆ.22) ರಾಜ್ಯಾಸಭಾ ಸಂಸದೆ ಸುಧಾಮೂರ್ತಿ ಇನ್ಫೋಸಿಸ್ ಫೌಂಡೇಶನ್ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಎಂಜಿನೀಯರ್ ಆಗಿರುವ ಸುಧಾಮೂರ್ತಿಗೆ ಸೈಬರ್ ವಂಚಕನೊಬ್ಬ ಕರೆ ಮಾಡಿ ಬೆದರಿಸಿದ ಘಟನೆ ನಡೆದಿದೆ. ಬೆಳಗ್ಗೆ 9.40ರ ವೇಳೆಗೆ ಸೈಬರ್ ವಂಚಕ ಸುಧಾ ಮೂರ್ತಿಗೆ ಕರೆ ಮಾಡಿದ್ದಾನೆ. ಟ್ರೂಲ್ ಕಾಲರ್‌ನಲ್ಲಿ ಟೆಲಿಕಾಂ ವಿಭಾಗ ಎಂದು ಸೂಚಿಸಿದೆ. ಹೀಗಾಗಿ ಫೋನ್ ರಿಸೀವ್ ಮಾಡಿದ ಸುಧಾಮೂರ್ತಿಗೆ, ತಾನು ಟೆಲಿಕಾಂ ಸಚಿವಾಲಯದ ಸಿಬ್ಬಂದಿ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಸುಧಾಮೂರ್ತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಡಿಯೋ, ಆಧಾರ್ ಲಿಂಕ್ ಪ್ರಶ್ನಿಸಿದ ವಂಚಕ
ಸುಧಾಮೂರ್ತಿಗೆ ಕರೆ ಮಾಡಿದ ವಂಚಕ, 2020ರಲ್ಲಿ ನಿಮ್ಮ ಫೋನ್ ನಂಬರ್ ರಿಜಿಸ್ಟ್ರೇಶನ್ ಮಾಡಲಾಗಿದೆ. ಆದರೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ನಿಮ್ಮ ಫೋನ್ ನಂಬರ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುತ್ತೇನೆ. 12 ಗಂಟೆ ಒಳಗೆ ಫೋನ್ ಸಂಪರ್ಕ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಡಿಜಿಟಲ್ ಅರೆಸ್ಟ್‌ಗೆ ಯತ್ನಿಸಿದ ವಂಚಕ
ಸುಧಾಮೂರ್ತಿ ವೈಯುಕ್ತಿಕ ಡೇಟಾ ಪಡೆಯಲು ಈತ ಯತ್ನಿಸಿದ್ದಾನೆ. ಫೋನ್ ಮೂಲಕ ಕೆಲ ಮಾಹಿತಿ ಪಡೆದು ಸೈಬರ್ ವಂಚನೆ ಮಾಡಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ಟೆಲಿಕಾಂ ಸಚಿವಾಲಯದ ಸಿಬ್ಬಂದಿ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ. ಡೇಟಾ ಪಡೆದು ಸುಧಾಮೂರ್ತಿ ಖಾತೆ ಹಾಗೂ ಇತರ ದಾಖಲೆಗಳನ್ನು ಪಡೆದು ವಂಚನೆ ನಡೆಸಲು ಪ್ಲಾನ್ ಮಾಡಿದ್ದ. ಡಿಜಿಟಲ್ ಅರೆಸ್ಟ್ ಮಾಡಿ, ಹಣ ಪಡೆಯಲು ಮುಂದಾಗಿದ್ದ ಈತನ ಪ್ಲಾನ್ ವರ್ಕೌಟ್ ಆಗಿಲ್ಲ.
ಸುಧಾಮೂರ್ತಿ ಈ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕನ ಫೋನ್ ನಂಬರ್ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಸುಧಾಮೂರ್ತಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ ಆರೋಪಿ ಪತ್ತೆಗಾಗಿ ಬಲೆಬೀಸಿದ್ದಾರೆ.
ಏನಿದು ಡಿಜಿಟಲ್ ಅರೆಸ್ಟ್
ಕೊರಿಯರ್ ಸಿಬ್ಬಂದಿ, ಪೊಲೀಸ್, ಟೆಲಿಕಾಂ ಸಿಬ್ಬಂದಿ, ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವು ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡುತ್ತಾರೆ. ಬಳಿಕ ಟ್ರಾಪ್‌ಗೆ ಸಿಲುಕಿಸುತ್ತಾರೆ. ಈ ಟ್ರಾಪ್‌ನಲ್ಲಿ ನಿಲುಕಿದರೆ ಬಳಿಕ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಫೋನ್ ಮೂಲಕವೇ ಅರೆಸ್ಟ್ ಮಾಡಿ ಬಿಡುತ್ತಾರೆ. ಮನೆಯಿಂದ ಹೊರಹೋಗದಂತೆ, ಯಾರ ಜೊತೆಗೂ ಮಾತನಾಡದಂತೆ ಮಾಡಿಬಿಡುತ್ತಾರೆ. ಬಳಿಕ ಹಣ ವರ್ಗಾವಣೆ ಮಾಡಲು ಸೂಚಿಸುತ್ತಾರೆ.
