ಇನ್ನು ಬೆಂಗಳೂರಿನಿಂದ ಗೋವಾ ದೂರವಿಲ್ಲ. 14 ನಿಲುಗಡೆ ಮೂಲಕ ವಂದೇ ಭಾರತ್ ಬೆಂಗಳೂರಿನಿಂದ ಗೋವಾ ತಲುಪಲಿದೆ. ಕರ್ನಾಟಕ ಸುಂದರ ತಾಣಗಳ ಮೂಲಕ ಈ ರೈಲು ಸಾಗಲಿದೆ. ಇಲ್ಲಿದೆ ರೂಟ್ ಮ್ಯಾಪ್.
ಬೆಂಗಳೂರು (ಅ.04) ಭಾರತದ ಪ್ರಮುಖ ನಗರಗಳು, ಪ್ರಮುಖ ತಾಣಗಳಿಗೆ ವಂದೇ ಭಾರತ್ ರೈಲು ಸೇವೆ ಲಭ್ಯವಾಗುತ್ತಿದೆ. ಬೆಂಗಳೂರಿನಿಂದ ಅತೀ ಹೆಚ್ಚು ಮಂದಿ ಭೇಟಿ ನೀಡುವ ಸ್ಥಳಗಳಲ್ಲಿ ಗೋವಾ ಕೂಡ ಒಂದು. ಇದೀಗ ಬೆಂಗಳೂರು ಹಾಗೂ ಗೋವಾ ನಡುವಿನ ಅಂತರ ಕಡಿಮೆಯಾಗುತ್ತಿದೆ. ಕಾರಣ ಭಾರತೀಯ ರೈಲ್ವೇ ಬೆಂಗಳೂರು ಟು ಗೋವಾ ವಂದೇ ಭಾರತ್ ರೈಲು ಸೇವೆ ನೀಡುತ್ತಿದೆ. ಕರ್ನಾಟಕದ ಸುಂದರ ತಾಣಗಳ ಮೂಲಕ ಈ ವಂದೇ ಭಾರತ್ ರೈಲು ಸಾಗಲಿದೆ.
ಕರ್ನಾಟಕ ಸುಂದರ ತಾಣಗಳ ಮೂಲಕ ರೈಲು ಸಂಚಾರ
ಬೆಂಗಳೂರು ಗೋವಾ ವಂದೇ ಭಾರತ್ ರೈಲು ವಯಾ ಮಂಗಳೂರು ಮೂಲಕ ಸಾಗಲಿದೆ. ಒಟ್ಟು 14 ನಿಲುಗಡೆ ಇರಲಿದೆ. ರೈಲ್ವೇ ಮೂಲಗಳ ಪ್ರಕಾರ ಯಶವಂತಪುರದಿಂದ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಕಬಕ ಪುತ್ತುರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರುಡೇಶ್ವರ, ಗೋಕರ್ಣ, ಕಾರವಾರ, ಮಂಡಗಾಂವ್ ಮೂಲಕ ಸಾಗಲಿದೆ. ಸಂಪೂರ್ಣವಾಗಿ ಕರ್ನಾಟಕದ ತಾಣಗಳ ಮೂಲಕ ಈ ರೈಲು ಸಾಗಲಿದೆ.
ಬೆಂಗಳೂರು ಗೋವಾ ವಂದೇ ಭಾರತ್ ರೈಲು ಸಮಯ
ಭಾರತೀಯ ರೈಲ್ವೇ ಸಚಿವಾಲಯ ಈ ಕುರಿತು ಅಧಿಕೃತ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ರೈಲ್ವೇ ಮೂಲಗಳ ಪ್ರಕಾರ ಯಶವಂತಪುರ ಮಡಗಾಂವ್ ವಂದೇ ಭಾರತ್ ರೈಲು ( 26655) ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. ಸಂಜೆ 7.15ಕ್ಕೆ ಗೋವಾ ತಲುಪಲಿದೆ. ಇನ್ನು ಮಡಗಾಂವ್ -ಯಶವಂತಪುರ ವಂದೇ ಭಾರತ್ ರೈಲು ( 26656) ರೈಲು ಗೋವಾದ ಮಡಗಾಂವ್ ನಿಲ್ದಾಣದಿಂದ ಬೆಳಗ್ಗೆ 5.030ಕ್ಕೆ ಹೊರಡಲಿದೆ. ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ.
2023ರ ಡಿಸೆಂಬರ್ 31ರಿಂದ ಮಂಗಳೂರು ಗೋವಾ ವಂದೇ ಭಾರತ್ ರೈಲು ಸೇವೆ ನೀಡುತ್ತಿದೆ. 5 ಗಂಟೆ 30 ನಿಮಿಷದಲ್ಲಿ ಮಂಗಳೂರಿನಿಂದ ಗೋವಾ ತಲುಪುತ್ತಿದೆ. ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು ಗೋವಾ ರೈಲನ್ನು ಬೆಂಗಳೂರಿಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. 16 ಕೋಚ್‌ಗಳ ಈ ವಂದೇ ಭಾರತ್ ರೈಲು ಬೆಂಗಳೂರು ಹಾಗೂ ಗೋವಾ ಸಂಪರ್ಕಿಸಲಿದೆ. ಬೆಂಗಳೂರಿನಿಂದ ಗೋವಾ ತೆರಳುವ ಮಂದಿ ಒಂದೇ ದಿನದಲ್ಲಿ ಬೆಂಗಳೂರಿನಿಂದ ಗೋವಾ ತಲುಪಲು ಸಾಧ್ಯವಿದೆ. ಇಷ್ಟೇ ಅಲ್ಲ ಆರಾಮದಾಯಕ ಪ್ರಯಾಣ ಸಿಗಲಿದೆ.

