ನಿಧಾನವಾಗಿ ಹಾರಿ ಒಮ್ಮಲೇ ಭರ್ರೆಂದು ನಭೋ ಮಂಡಲಕ್ಕೆ ಜಿಗಿಯುವ ಲೋಹದ ಹಕ್ಕಿಗಳು, ಕಿವಿಗಡಚಿಕ್ಕುವ ಶಬ್ದ, ಆಕಾಶದಲ್ಲಿ ಬಗೆ ಬಗೆಯ ರಂಗೋಲಿ ಚಿತ್ತಾರ ಮೂಡಿಸಿ ಮನ ಸೆಳೆದ ವಿಮಾನಗಳು. ಇದು ಸೋಮವಾರದಿಂದ ಯಲಹಂಕ ವಾಯು ನೆಲೆಯಲ್ಲಿ ಆರಂಭವಾದ ಏರೋ ಇಂಡಿಯಾದಲ್ಲಿ ಲೋಹದ ಹಕ್ಕಿಗಳು ಜನರ ಕಣ್ಮನ ಸೆಳೆದ ದೃಶ್ಯಗಳು

ಕನ್ನಡಪ್ರಭ ವಾರ್ತೆ
ಬೆಂಗಳೂರು: ನೀಲಾಕಾಶದಲ್ಲಿ ಲೋಹದ ಹಕ್ಕಿಗಳ ಸರ್ಕಸ್‌, ನಿಧಾನವಾಗಿ ಹಾರಿ ಒಮ್ಮಲೇ ಭರ್ರೆಂದು ನಭೋ ಮಂಡಲಕ್ಕೆ ಜಿಗಿಯುವ ಲೋಹದ ಹಕ್ಕಿಗಳು, ಕಿವಿಗಡಚಿಕ್ಕುವ ಶಬ್ದ, ಆಕಾಶದಲ್ಲಿ ಬಗೆ ಬಗೆಯ ರಂಗೋಲಿ ಚಿತ್ತಾರ ಮೂಡಿಸಿ ಮನ ಸೆಳೆದ ವಿಮಾನಗಳು. ಇದು ಸೋಮವಾರದಿಂದ ಯಲಹಂಕ ವಾಯು ನೆಲೆಯಲ್ಲಿ ಆರಂಭವಾದ ಏರೋ ಇಂಡಿಯಾದಲ್ಲಿ ಲೋಹದ ಹಕ್ಕಿಗಳು ನಡೆಸಿದ ಕಣ್ಮನ ಸೆಳೆದ ದೃಶ್ಯಗಳು. ಪ್ರೇಮಿಗಳ ದಿನಕ್ಕೆ ಸಂದೇಶ ನೀಡುವ ರೀತಿಯಲ್ಲಿ ಎರಡು ಸೂರ್ಯಕಿರಣ ವಿಮಾನಗಳು ನೀಲಾಕಾಶದಲ್ಲಿ ಪ್ರೇಮ ಸಂಕೇತ ಬಿಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರೆ, ತಾಯಿ ಹಿಂದೆ ಮರಿ ಮೀನುಗಳು ಹೋದ ರೀತಿ ಸಿ-17 ಗ್ಲೋಬಲ್‌ ಮಾಸ್ಟರ್‌ ವಿಮಾನದ ಹಿಂದೆ 9 ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಈಜಿದವು. ಎಚ್‌ಎಎಲ್‌ನಿರ್ಮಿತ ಹೆಲಿಕಾಪ್ಟರ್‌ಗಳು ಮೀನುಗಳಂತೆ ಈಜಿದವು.

ಆತ್ಮನಿರ್ಭರ್‌ ಚಿತ್ತಾರದೊಂದಿಗೆ ರಾಷ್ಟ್ರಧ್ವಜ, ಭಾರತೀಯ ವಾಯುಪಡೆಯ ಧ್ವಜ, ಏರೋ ಇಂಡಿಯಾ-2023ರ ಬಾವುಟ ಹಾಗೂ ಜಿ 20 ಧ್ವಜಗಳನ್ನು ಹೊತ್ತ ನಾಲ್ಕು ಪ್ರತ್ಯೇಕ ಹೆಲಿಕಾಪ್ಟರ್‌ಗಳು ವೇದಿಕೆಯ ಮುಂದೆ ಹಾದು ಹೋದಾಗ ನೆರೆದಿದ್ದ ಜನರ ಹರ್ಷ ಮುಗಿಲು ಮುಟ್ಟಿತು. 'ಸೂರ್ಯಕಿರಣ್‌' ಮೂರು ವಿಮಾನಗಳು ತ್ರಿರಂಗವನ್ನು ಬಾನಂಗಳದಲ್ಲಿ ಮೂಡಿಸಿದವು. ತೇಜಸ್‌, ಸೂಖೋಯ್‌-30 (Sukhoi-30) ಸೇರಿ ಒಟ್ಟು 53 ಏರ್‌ಕ್ರಾಫ್ಟ್‌ಗಳು ಹಲವು ಬಗೆಯಲ್ಲಿ ನೀಡಿದ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾದವು.

300 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಮಾನವ ರಹಿತ ಪುಟ್ಟ ವಿಮಾನ: ಜೂನ್‌ನಲ್ಲಿ ಪರೀಕ್ಷಾರ್ಥ ಹಾರಾಟ

ಸೂರ್ಯಕಿರಣ್‌ ರೋಮಾಂಚನ:

ಸೂರ್ಯಕಿರಣ್‌ನ (Suryakiran) ವಿಮಾನಗಳು ಏಕಕಾಲದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಿಳಿ ಹೊಗೆ ಸೂಸುತ್ತಾ ಎದುರು-ಬದುರಾಗಿ ಬಂದು ಹಾರಾಟ ನಡೆಸಿದ್ದು, ನೆರೆದಿದ್ದ ಜನರ ಎದೆ ಬಡಿತ ಜೋರು ಮಾಡಿತ್ತು. ಸೂರ್ಯಕಿರಣ ವಿಮಾನಗಳ ಸುತ್ತ ಇನ್ನೇರಡು ಎರಡು ಸೂರ್ಯಕಿರಣ ವಿಮಾನ ಪಲ್ಟಿಹಾಕುತ್ತಾ ಬಲದಿಂದ ಎಡಕ್ಕೆ ಹಾರಿದ್ದು, ನೋಡುಗರ ಮೈನವಿರೇಳಿಸಿತ್ತು. 9 ಸೂರ್ಯಕಿರಣ ವಿಮಾನಗಳ ಪೈಕಿ ಒಂದು ವಿಮಾನ ಚಾರ್ಲಿ ಮಾದರಿಯಲ್ಲಿ ಪ್ರದರ್ಶನ ನೀಡಿದ್ದು ರೋಚಕವಾಗಿತ್ತು.

ತೇಜಸ್‌ನಿಂದ ರಾಪಿಡ್‌ ರೂಲ್‌

ಸ್ವದೇಶಿ ನಿರ್ಮಿತ ಹಾಗೂ ವಿಶ್ವದ ಅತ್ಯಂತ ಹಗುರ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ತೇಜಸ್‌ ಎಂಕೆ-1 (Tejas Mk-1) ಕಿವಿ ಗುಯ್‌ಗುಡುಂತೆ ಸೂಪರ್‌ ಸಾನಿಕ್‌ ವೇಗದಲ್ಲಿ ಆಗಸದಲ್ಲಿ ಪಲ್ಟಿಹೊಡೆಯಿತು. ನಿಧಾನವಾಗಿ ಹಾರಾಡುತ್ತಾ ಬಂದ ತೇಜಸ್‌ ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಮೋಡಗಳಲ್ಲಿ ಮರೆಯಾಗಿ ಅಚ್ಚರಿ ಮೂಡಿಸಿತ್ತು.

ಏಕಾಂಗಿ ಪ್ರದರ್ಶನದಲ್ಲಿ ಗಮನ ಸೆಳೆದ ಪ್ರಚಂಡ

ಹಿಂದೂಸ್ತಾನ್‌ ಏರೊನಾಟಿಕ್‌ ಲಿಮಿಟೆಡ್‌ ನಿರ್ಮಿತ ಪ್ರಚಂಡ (Prachanda) ಹೆಲಿಕಾಪ್ಟರ್‌ಗಳು ಏಕಾಂಗಿಯಾಗಿ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾದರೂ ತಮ್ಮ ಸಾಹಸ ಕೌಶಲ್ಯ ಹಾಗೂ ಚಾಕಚಕ್ಯತೆಯಿಂದ ಗಮನ ಸೆಳೆದವು. ಪ್ರಚಂಡ ಹೆಲಿಕಾಪ್ಟರ್‌ ನೀರಿನಲ್ಲಿ ಮೀನು ಈಜಿದಂತೆ ಹಾರಾಡಿ ಮೆಚ್ಚುಗೆಗೆ ಪಾತ್ರವಾಯಿತು.


ಸೈನಿಕರಿಗಾಗಿ ಸ್ವದೇಶಿ ಜೆಟ್‌ಪ್ಯಾಕ್‌ ಸಿದ್ಧ: ಏರೋ ಇಂಡಿಯಾದಲ್ಲಿ ಗಮನ ಸೆಳೆದ ಸ್ವದೇಶಿ ಜೆಟ್‌ಸ್ಯೂಟ್‌

ಹಲವು ಮೊದಲಿಗೆ ಸಾಕ್ಷಿ

ವೈಮಾನಿಕ ಪ್ರದರ್ಶನವು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಅಮೆರಿಕದ ಎಫ್‌-35 ಫೈಟರ್‌ ಜೆಟ್‌, ಎಚ್‌ಎಎಲ್‌ (Hindustan Aeronautic Limited) ನಿರ್ಮಿತ ಪ್ರಚಂಡ ಹೆಲಿಕಾಪ್ಟರ್‌ (ಎಎಲ್‌ಎಚ್‌) ಹಾಗೂ ಡಿಆರ್‌ಡಿಒ (DRDO) ಅಭಿವೃದ್ಧಿ ಪಡಿಸಿರುವ ತಪಸ್‌ ಯುಎವಿ ಏರೋ ಇಂಡಿಯಾದಲ್ಲಿ ಪ್ರಪ್ರಥಮ ಬಾರಿಗೆ ತಮ್ಮ ಶಕ್ತಿ-ಸಾಮರ್ಥ್ಯ ಪ್ರದರ್ಶಿಸಿದವು.


ಎಫ್‌-35 ಫೈಟರ್‌ ಜೆಟ್‌ ಸದ್ದು

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕದ ಎಫ್‌-35 ಫೈಟರ್‌ ಜೆಟ್‌ನ (US F-35 fighter jets) ಎರಡು ವಿಮಾನಗಳು ಹಾರಾಟ ನಡೆಸಿದವು. ರಫೆಲ್‌ ಖರೀದಿ ಬಳಿಕ ಇದೀಗ ಭಾರತ ಎಫ್‌-35 ಫೈಟರ್‌ ಜೆಟ್‌ ಖರೀದಿ ಮಾತುಕತೆ ನಡೆಸಲಾಗಿದೆ. ಹೀಗಾಗಿ, ಏರೋ ಇಂಡಿಯಾದಲ್ಲಿ ಎಫ್‌-35 ವಿಮಾನಗಳ ವೈಮಾನಿಕ ಪ್ರದರ್ಶನ ನೀಡಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಅಮೆರಿಕದ ಎಫ್‌-15 ಹಾಗೂ ಎಫ್‌ಎ-18 ಯುದ್ಧ ವಿಮಾನಗಳು ಏರೋ ಇಂಡಿಯಾದಲ್ಲಿ ಭಾಗವಹಿಸಿದ್ದವು. ಮೊಟ್ಟಮೊದಲ ಬಾರಿಗೆ ಸೂಪರ್‌ ಸಾನಿಕ್‌ ಹಾಗೂ ವಿಶ್ವ ಶಕ್ತಿ ಶಾಲಿ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಫ್‌-35 ಸದ್ದು ಮಾಡಿರುವುದು ಈ ಬಾರಿಯ ಏರೋ ಇಂಡಿಯಾದ ವಿಶೇಷವಾಗಿದೆ.


ಜೈ ಭಜರಂಗಿ ಚಿತ್ರ

ಎಚ್‌ಎಎಲ್‌ ಅಭಿವೃದ್ಧಿ ಪಡಿಸುತ್ತಿರುವ ಮಾರುತ್‌ ಹೆಸರಿನ ಎಚ್‌ಎಲ್‌ಎಫ್‌ಟಿ-42 ಸುಧಾರಿತ ಮತ್ತು ಅತ್ಯಧುನಿಕ ತಂತ್ರಜ್ಞಾನ ಹೊಂದಿರುವ ತರಬೇತಿ ವಿಮಾನದ ಮೇಲೆ ಪವನಪುತ್ರ ಆಂಜನೇಯನ ಚಿತ್ರ ಬರೆಯಲಾಗಿದೆ. ಆಂಜನೇಯ ಕೈಯಲ್ಲಿ (Anjaney flying) ಗದೆಯನ್ನು ಹಿಡಿದು ಹಾರಿದ ಮಾದರಿಯಲ್ಲಿ ಚಿತ್ರ ಬರೆಯಲಾಗಿದೆ. ವಿಮಾನದ ಹಿಂಬದಿಯ ಬಾಲದ ಎಡ ಮತ್ತು ಬಲ ಎರಡೂ ಕಡೆಯೂ ಬರೆಯಲಾಗಿದೆ.

Aero India 2023: ಏರೋ ಇಂಡಿಯಾ ಭಾರತದ ಶಕ್ತಿ: ಪ್ರಧಾನಿ ಮೋದಿ

ವಿಮಾನದ ಕುರಿತು ವಿವರಣೆ ನೀಡಿದ ಟೆಸ್ಟ್‌ ಫೈಲೆಟ್‌ ಹರ್ಷವರ್ಧನ್‌ ಠಾಕೂರ್‌, ಎಚ್‌ಎಎಲ್‌ ಮಾರುತ್‌ ಹೆಸರಿನ ಎಚ್‌ಎಲ್‌ಎಫ್‌ಟಿ-42 ತರಬೇತಿ ಯುದ್ಧ ವಿಮಾನ ಅಭಿವೃದ್ಧಿ ಪಡಿಸುತ್ತಿದೆ. 2030ರ ವೇಳೆಗೆ ಈ ವಿಮಾನ ಹಾರಾಟಕ್ಕೆ ಸಿದ್ಧವಾಗಲಿದೆ. ಇದು ತೇಜಸ್‌-ಮಾರ್ಕ್ 2 ಮಾದರಿಯ ತಂತ್ರಜ್ಞಾನವನ್ನು ಹೊಂದಿದೆ.

ಏರ್‌ ಆ್ಯಂಬುಲೆನ್ಸ್‌ ಆಗುತ್ತೆ ಕಾಪ್ಟರ್‌!

ಎಚ್‌ಎಎಲ್‌ನ ‘ಅಡ್ವಾನ್ಸ್‌ಡ್‌ ಲೈಟ್‌ ಹೆಲಿಕಾಪ್ಟರ್‌-ಎಂಕೆ 3’ ಅನ್ನು ತುರ್ತು ಸಂದರ್ಭದಲ್ಲಿ ಕೇವಲ ಎರಡು ಗಂಟೆಯಲ್ಲಿ ಏರ್‌ ಆ್ಯಂಬುಲೆನ್ಸ್‌ ಆಗಿ ಪರಿವರ್ತನೆ ಮಾಡಬಹುದಾಗಿದೆ. ಕಳೆದ ಎರಡು ವರ್ಷದಿಂದ ಈ ಹೆಲಿಕಾಪ್ಟರ್‌ ಏರ್‌ ಆ್ಯಂಬುಲೆನ್ಸ್‌ ಸೇವೆ ನೀಡುತ್ತಿದೆ. ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾದ ಆರೋಗ್ಯ ವ್ಯವಸ್ಥೆ ಈ ಹೆಲಿಕಾಪ್ಟರ್‌ನಲ್ಲಿದೆ. ಐಸಿಯುನಲ್ಲಿ ನೀಡಬಹುದಾದ ಎಲ್ಲಾ ಚಿಕಿತ್ಸೆಗಳನ್ನು ಹೆಲಿಕಾಪ್ಟರ್‌ ಒಳಭಾಗದಲ್ಲಿಯೇ ನೀಡಬಹುದಾಗಿದೆ.

ಪ್ರಚಂಡ ವೈಮಾನಿಕ ಪ್ರದರ್ಶನ

ಈ ಬಾರಿಯ ಏರ್‌ ಇಂಡಿಯಾದಲ್ಲಿ ಎಚ್‌ಎಎಲ್‌ ನಿರ್ಮಿತ ‘ಪ್ರಚಂಡ’ ಹೆಲಿಕಾಪ್ಟರ್‌ನ ಪ್ರಚಂಡ ವೈಮಾನಿಕ ಪ್ರದರ್ಶನವು ನೋಡುಗರ ಕಣ್ಮನ ಸೆಳೆಯಿತು. ಇದು ಅಮೆರಿಕದ ಅಪಾಚಿ ಹೆಲಿಕಾಪ್ಟರ್‌ ಸರಿಸಾಟಿಯಾಗಿ ನಿಲ್ಲಬಲ್ಲ ಹೆಲಿಕಾಪ್ಟರ್‌ ಆಗಿದೆ. ಅತಿ ಎತ್ತರದ ಪ್ರದೇಶ, ಮರುಭೂಮಿಯಂತ ತೀಕ್ಷ್ಣ ಪ್ರದೇಶದಲ್ಲಿ ಬಳಕೆ ಮಾಡಬಹುದಾದ ಹೆಲಿಕಾಪ್ಟರ್‌ ಆಗಿದೆ. ಇದು ಅವಳಿ ಎಂಜಿನ್‌ ಹೊಂದಿದೆ. 5.8 ಟನ್‌ ತೂಕ, ಗ್ಲಾಸ್‌ ಕಾಕ್‌ಪಿಟ್‌, ಕಾಂಪೊಸಿಟ್‌ ಏರ್‌ಫ್ರೇಮ್‌ ವಿನ್ಯಾಸ, 700 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯ, ಆಗಸದಿಂದಲೇ ಕ್ಷಿಪಣಿ ಹಾರಿಸಬಲ್ಲ ತಂತ್ರಜ್ಞಾನ. 16,400 ಅಡಿ ಎತ್ತರದಲ್ಲೂ ಬಹುಬೇಗ ಟೇಕಾಫ್‌ ಆಗಬಲ್ಲದು. ತುಮಕೂರಿನ ಎಚ್‌ಎಎಲ್‌ ಘಟಕದಲ್ಲಿ 15 ಹೆಲಿಕಾಪ್ಟರ್‌ಗಳ ನಿರ್ಮಾಣ ಮಾಡಲಾಗುತ್ತಿದೆ.


ನಿರಾಸೆಗೊಳಿಸಿದ ರಫೇಲ್‌, ಸಾರಂಗ್‌

ಪ್ರೇಕ್ಷಕರು ತುಂಬಾ ಆಸಕ್ತಿ ಹೊಂದಿದ್ದ ರಪೇಲ್‌ (Rafale) ಮತ್ತು ಸಾರಂಗ್‌(, Sarang) ಹಾರಾಟ ನಡೆಸದಿರುವುದು ಬೇಸರ ಮೂಡಿಸಿತು. ಪೂರ್ವ ನಿಗದಿಯಂತೆ ಬೆಳಗ್ಗೆ 11.30ಕ್ಕೆ ರಫೇಲ್‌ ಮತ್ತು 11.40ಕ್ಕೆ ಸಾರಂಗ್‌ ಹಾರಾಟ ನಡೆಸಬೇಕಿತ್ತು. ಆದರೆ, 11.20ರ ವೇಳೆಗೆ ಸೂರ್ಯಕಿರಣ್‌ ಪ್ರದರ್ಶನ ಮುಗಿಯುತ್ತಿದ್ದಂತೆ ಉದ್ಘಾಟನಾ ಸಮಾರಂಭದ ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು.

ದಿನಕ್ಕೆ ಒಂದೇ ವೈಮಾನಿಕ ಪ್ರದರ್ಶನ

ಪ್ರತಿ ಏರೋ ಶೋದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ದಿನಕ್ಕೆ ಎರಡು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ದಿನಕ್ಕೆ ಕೇವಲ ಒಂದು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿದೆ. ಕೊನೆಯ ಎರಡು ದಿನ ಮಾತ್ರ ಬೆಳಗ್ಗೆ ಮತ್ತು ಮಧ್ಯಾಹ್ನ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದೆ.

ಕುಡಿಯಲು ನೀರು ಇಲ್ಲ

14ನೇ ಏರೋ ಇಂಡಿಯಾದ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ಬೆಳಗ್ಗೆ 9.30ರಿಂದ 11.30ರ ವರೆಗೆ ನಡೆಯಿತು. ಕಾರ್ಯಕ್ರಮ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವರೆಗೆ ಸಮಾರಂಭದ ವೀಕ್ಷಣೆ ಆಗಮಿಸಿದ್ದ ಯಾರೊಬ್ಬರಿಗೂ ಕನಿಷ್ಠ ಕುಡಿಯಲು ನೀರಿನ ವ್ಯವಸ್ಥೆಯನ್ನು ಆಯೋಜಕರು ಮಾಡಿರಲಿಲ್ಲ.


ಆತ್ಮನಿರ್ಭರ ಭಾರತ್‌ ಫಾರ್ಮೇಷನ್‌ ಕಾಣೆ

ಕಳೆದ 2021ರ ಏರೋ ಇಂಡಿಯಾದಲ್ಲಿ ಸ್ವದೇಶಿ ಉತ್ಪಾದನೆ ಹೆಚ್ಚಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಎಚ್‌ಎಎಲ್‌ ನಿರ್ಮಿತ ಆರು ವಿಮಾನಗಳಿಂದ ‘ಆತ್ಮನಿರ್ಭರ ಭಾರತ್‌’ ಫಾರ್ಮೇಷನ್‌ ನಡೆಸಿದ್ದವು. ಆದರೆ, 2023ರ ಏರೋ ಇಂಡಿಯಾದಲ್ಲಿ ಆತ್ಮನಿರ್ಭರ ಫಾರ್ಮೇಷನ್‌ ಇರಲಿಲ್ಲ.