ಪಶ್ಚಿಮ ಬಂಗಾಳದಲ್ಲಿ ದುರ್ಗಾ ದೇವಿಯ 'ಜಾಗೋ ಮಾ' ಭಕ್ತಿಗೀತೆ ಹಾಡುತ್ತಿದ್ದ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರನ್ನು ಕಾರ್ಯಕ್ರಮದ ಸಂಘಟಕ ಮೆಹಬೂಬ್ ಮಲ್ಲಿಕ್ ತಡೆದು. ಜಾತ್ಯತೀತ ಗೀತೆ ಹಾಡುವಂತೆ ಒತ್ತಾಯಿಸಿ, ಹಲ್ಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
ಜಾಗೋ ಮಾ ಎಂಬ ಭಕ್ತಿಗೀತೆಯನ್ನು ಪಶ್ಚಿಮ ಬಂಗಾಳದಲ್ಲಿ ಕೇಳದ ಜನರಿಲ್ಲ, ಅದು ಹಿಂದೂ ದೇವತೆ ದುರ್ಗೆಯನ್ನು ಆರಾಧಿಸುವ ಪ್ರಮುಖ ಭಕ್ತಿಗೀತೆಗಳಲ್ಲಿ ಒಂದು. ಪಶ್ಚಿಮ ಬಂಗಾಳದಲ್ಲಿ ದುರ್ಗೆ ಹಾಗೂ ಕಾಳಿಯ ಆರಾಧನೆ ಬಹಳ ಪ್ರಸಿದ್ಧ. ಹೀಗಾಗಿಯೇ ನಮ್ಮ ಕರ್ನಾಟಕದಲ್ಲಿ ನಾಡಹಬ್ಬ ದಸರಾದಂತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ನಾಡಹಬ್ಬ ಎನಿಸಿದೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ಪ್ರತಿ ಮನೆಗಳಲ್ಲೂ ದುರ್ಗೆಯನ್ನು ಕೂರಿಸಿ ಪೂಜೆ ಮಾಡುತ್ತಾರೆ. ಹೀಗಾಗಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ದುರ್ಗಾಮಾತೆಯ ಆರಾಧನೆ ಬಹಳ ಪ್ರಮುಖವಾದ ಹಬ್ಬ ಎನಿಸಿದೆ. ಇದೆಲ್ಲಾ ಪೀಠಿಕೆ ಏಕೆ ಅಂತೀರಾ ಇಂತಹ ಪಶ್ಚಿಮ ಬಂಗಾಳದಲ್ಲೇ ದುರ್ಗೆಗೆ ಸಮರ್ಪಿತವಾದ ಜಾಗೋ ಮಾ ಹಾಡನ್ನು ಹಾಡುತ್ತಿದ್ದ ಗಾಯಕಿಯನ್ನು ಮಧ್ಯದಲ್ಲೇ ತಡೆದ ಆರೋಪಿ ಜಾತ್ಯಾತೀತ ಗೀತೆ ಹಾಡುವಂತೆ ಕಿರುಕುಳ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಪೂರ್ವ ಮಿಡ್ನಾಪುರದ ಭಗವಾನ್‌ಪುರದ ಖಾಸಗಿ ಶಾಲೆಯಲ್ಲಿ ನಡೆದ ಲೈವ್ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳದ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರು ಈ ಜಾಗೋ ಮಾ ಹಾಡನ್ನು ಹಾಡಲು ಶುರು ಮಾಡಿದ್ದಾರೆ. ಆದರೆ ಆ ಶಾಲೆಯ ಮಾಲೀಕ ಹಾಗೂ ಈ ಕಾರ್ಯಕ್ರಮದ ಸಂಘಟಕನಾಗಿದ್ದ ಆರೋಪಿ ಮೆಹಬೂಬ್ ಮಲ್ಲಿಕ್ ಎಂಬಾತ ಹಾಡು ಹಾಡುತ್ತಿದ್ದ ಗಾಯಕಿ ಲಗ್ನಜಿತಾ ಚಕ್ರವರ್ತಿಯನ್ನು ಮಧ್ಯದಲ್ಲೇ ತಡೆದು ಜಾಗೋ ಮಾ ಹಾಡನ್ನು ನಿಲ್ಲಿಸುವಂತೆ ಹಾಗೂ ಯಾವುದಾದರೂ ಜಾತ್ಯಾತೀಕ ಹಾಡನ್ನು ಹಾಡುವಂತೆ ಹೇಳಿ ತನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಗಾಯಕಿ ಲಗ್ನಜಿತಾ ಆರೋಪಿಸಿದ್ದಾರೆ.
ಆರೋಪಿ ಮೆಹಬೂಬ್ ಮಲ್ಲಿಕ್ ಕಾರ್ಯಕ್ರಮದ ಪ್ರಮುಖ ಸಂಘಟಕ ಮತ್ತು ಶಾಲೆಯ ಮಾಲೀಕರಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಿತುನ್ ಡೇ ತಿಳಿಸಿದ್ದಾರೆ.
ಹಾಡು ಹಾಡಿರುವ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರು 'ಬಸಂತೋ ಎಶೆ ಗೆಚೆ' ಎಂಬ ಬಂಗಾಳಿ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದರು. ಇವರು ಬಂಗಾಳಿ ಭಕ್ತಿಗೀತೆಯಾದ ಜಾಗೋ ಮಾ ಹಾಡುತ್ತಿದ್ದಾಗ ವೇದಿಕೆಯ ಮೇಲೆ ಬಂದ ಮೆಹಬೂಬ್ ಮಲ್ಲಿಕ್ ತನ್ನ ಮೇಲೆ ದೈಹಿಕ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಅವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಲಗ್ನಜಿತಾ ಚಕ್ರವರ್ತಿ ಹೇಳಿದ್ದಾರೆ.' ಒನೆಕ್ ಜಾಗೋ ಮಾ ಹೋಯೆಚೆ, ಎಬರ್ ಕಿಚ್ಚು ಸೆಕ್ಯುಲರ್ ಗಾ ಎಂದು ಆತ ಕೂಗಾಡಿದ ಅಂದರೆ ಜಾಗೋ ಮಾ ಹಾಡು ಸಾಕು, ಈಗ ಯಾವುದಾದರೂ ಜಾತ್ಯತೀತ ಹಾಡುಗಳನ್ನು ಹಾಡಿ ಎಂದು ಆತ ಕೂಗಾಡಿದ ಎಂದು ಲಗ್ನಜಿತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದೂರು ನೀಡಲು ಹೋದಾಗ ಭಗವಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಗಾಯಕಿ ಆರೋಪಿಸಿದ್ದರು. ಆದರೆ ನಂತರ ಪ್ರಕರಣ ದಾಖಲಿಸಿ ಮಲ್ಲಿಕ್‌ನನ್ನು ಬಂಧಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಭಗವಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮತ್ತು ಇನ್ನೊಬ್ಬ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲಾಗಿದೆ. ಅವರ ನಿರ್ಲಕ್ಷ್ಯಕ್ಕಾಗಿ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಿಥುನ್ ಡೇ ಹೇಳಿದ್ದಾರೆ.
ಆದರೆ ಮಲ್ಲಿಕ್ ಅವರ ಸಹೋದರ ಮಸೂದ್ ಮಲ್ಲಿಕ್ ಈ ಆರೋಪವನ್ನು ಆಧಾರರಹಿತ ಎಂದು ಕರೆದಿದ್ದು, ಚಕ್ರವರ್ತಿಗೆ ವೇದಿಕೆ ನೀಡುವಲ್ಲಿ ವಿಳಂಬವಾದ ಕಾರಣ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರು ಎಂದು ಆರೋಪಿಸಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರದ ಧಾರ್ಮಿಕ ಹಾಡನ್ನು ಹಾಡುತ್ತಿದ್ದರು. ಆದ್ದರಿಂದ, ಅದು ಶಾಲೆಯ ಸಮಾರಂಭವಾದ್ದರಿಂದ ಜಾತ್ಯತೀತ ಹಾಡನ್ನು ಹಾಡಲು ಅವರಿಗೆ ಕೇಳಲಾಯಿತು. ಆದರೆ ಅವರು ತನ್ನ ಪ್ರದರ್ಶನವನ್ನು ನಿಲ್ಲಿಸಿ ಪೊಲೀಸ್ ಠಾಣೆಗೆ ಹೋದರು ಎಂದು ಅವರು ಹೇಳಿದ್ದಾರೆ.
ನಾವು ಅವರ ಅಭಿನಯಕ್ಕಾಗಿ ಹೆಚ್ಚುವರಿ ಹಣವನ್ನು ನೀಡಲು ನಿರಾಕರಿಸಿದ್ದರಿಂದ ಅವರು ನಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಚಕ್ರವರ್ತಿ ತಮ್ಮ ವಿರುದ್ಧದ ಈ ಆರೋಪವನ್ನು ತಿರಸ್ಕರಿಸಿದ್ದಾರೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ ಮತ್ತು ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಲೆನ್ಸ್ ಒಳಗಿಂದ ಆರ್‌ಎಸ್‌ಎಸ್‌ನ್ನು ಅರ್ಥ ಮಾಡಿಕೊಳ್ಳುವುದು ದೊಡ್ಡ ತಪ್ಪು: ಮೋಹನ್ ಭಾಗವತ್
ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಆರೋಪಿ ಮಲ್ಲಿಕ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು. ಪಶ್ಚಿಮ ಬಂಗಾಳ ಜಿಹಾದಿಗಳ ಕೈಯಲ್ಲಿದೆ. ಅವರು ಗಾಯಕಿಗೆ ಯಾವ ಹಾಡನ್ನು ಹಾಡಬೇಕೆಂದು ನಿರ್ದೇಶಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ ನೀತಿ ಎಂದು ಬಿಜೆಪಿಯ ಶಂಕುದೇವ್ ಪಾಂಡಾ ಟೀಕಿಸಿದ್ದಾರೆ. ಲಗ್ನಜಿತಾ ಚಕ್ರವರ್ತಿ ಪೊಲೀಸ್ ಠಾಣೆಗೆ ಹೋದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪೊಲೀಸರು ಪೊಲೀಸ್ ದೂರು ದಾಖಲಿಸಲು ನಿರಾಕರಿಸಿದರು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ


