Navratri 2022 : ದುರ್ಗೆ ಪೂಜೆ ಜೊತೆ ಮನೆ ಮಹಿಳೆ ಮೇಲಿರಲಿ ವಿಶೇಷ ಪ್ರೀತಿ
ನವರಾತ್ರಿಯಲ್ಲಿ ದೇವಿ ಪೂಜೆಗೆ ಮಹತ್ವದ ಸ್ಥಾನವಿದೆ. ದೇವಿಯನ್ನು ಎಲ್ಲರೂ ಭಕ್ತಿಯಿಂದ ಆರಾಧಿಸ್ತಾರೆ. ಆದ್ರೆ ನವರಾತ್ರಿಯಲ್ಲಿ ಬರೀ ತಾಯಿಯ ಪೂಜೆ ಮಾಡಿದ್ರೆ ಸಾಲೋದಿಲ್ಲ. ಮಹಿಳೆಯರಿಗೆ ಗೌರವ ನೀಡೋದು ಕೂಡ ಬಹಳ ಮುಖ್ಯ.
ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನವರಾತ್ರಿಯ ಹಬ್ಬ ಕೂಡ ಒಂದು. ಭಾರತದಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ಖುಷಿಯಿಂದ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ದೇವಿಯ ಪೂಜೆ, ಆರಾಧನೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ಆದಿಶಕ್ತಿಯ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಶಕ್ತಿ, ಸಂತೋಷ ಮತ್ತು ಸಂಪತ್ತು, ಸಮೃದ್ಧಿಯ ಸಂಕೇತ ದೇವಿ. ಹಾಗಾಗಿಯೇ ನವರಾತ್ರಿಯಲ್ಲಿ ಕನ್ಯೆಯ ಪೂಜೆ ನಡೆಯುತ್ತದೆ. ನವರಾತ್ರಿಯಂದು ದೇವಿ ಪೂಜೆ ಮಾಡಿದ್ರೆ ಸದಾ ಸುಖ, ಶಾಂತಿ, ಸಮೃದ್ಧಿ, ಸಂತೋಷ ನೆಲೆಸುತ್ತದೆ. ಬರೀ ದೇವಿ ದುರ್ಗೆಯನ್ನು ಮಾತ್ರ ಪೂಜೆ ಮಾಡಿದ್ರೆ ಸಾಲದು, ಎಲ್ಲ ಮಹಿಳೆಯರನ್ನು ದೇವಿಯಂತೆ ಕಾಣ್ಬೇಕು. ಮಹಿಳೆಯರನ್ನು ಗೌರವದಿಂದ ನೋಡಿದ್ರೆ ದುರ್ಗೆ ಪೂಜೆ ಮಾಡಿದಷ್ಟೇ ಫಲ ನಿಮಗೆ ಸಿಗುತ್ತದೆ.
ಮಹಿಳೆ ತಾಯಿ (Mother) ಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಅನೇಕ ರೂಪದಲ್ಲಿ ಕಾಣಿಸಿಕೊಳ್ತಾಳೆ. ನವರಾತ್ರಿ (Navratri) ದಿನ ಕನ್ಯೆ ಪೂಜೆ ಮಾಡಿದ್ರೆ ಸಾಲುವುದಿಲ್ಲ, ಮನೆಯಲ್ಲಿರುವ ಮಹಿಳೆಯರನ್ನು ಕೂಡ ಗೌರವದಿಂದ ನೋಡಬೇಕು. ಮನೆಯಲ್ಲಿ ಸದಾ ಸುಖವಿರಬೇಕು ಅಂದ್ರೆ ಮನೆ ಹಾಗೂ ಹೊರಗಿರುವ ಮಹಿಳೆಯರನ್ನು ಗೌರವಿಸಿ.
ನವರಾತ್ರಿಯಿಂದ ಮಹಿಳೆ ಮೇಲಿರುವ ನಿಮ್ಮ ಭಾವನೆ ಬದಲಿಸಿ :
ಅಮ್ಮನಿಗೆ ಸಮಯ ನೀಡಿ : ದೇವಿ (Goddess) ದೇವರ ಮನೆಯಲ್ಲಿ ನೆಲೆಸಿರುವಂತೆ ಮನೆಯಲ್ಲಿ ತಾಯಿ ನೆಲೆಸಿರುತ್ತಾಳೆ. ಮಕ್ಕಳನ್ನು ತಾಯಿ ದೇವಿಯಂತೆ ನೋಡಿಕೊಳ್ತಾಳೆ. ದೇವಿ ಪ್ರತಿಯೊಬ್ಬ ಭಕ್ತರನ್ನು ರಕ್ಷಿಸುವಂತೆ, ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿ ನಿಮ್ಮ ಆರೋಗ್ಯ, ಸಂತೋಷ ಮತ್ತು ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ತಾಯಿ ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಆದ್ರೆ ಮಕ್ಕಳಿಗೆ ತಾಯಿಗೆ ಸಮಯ ನೀಡಲು ಸಮಯವಿರೋದಿಲ್ಲ. ಕೆಲಸ, ಮನೆ, ಮಕ್ಕಳು, ಪತ್ನಿ ಕೆಲಸದಲ್ಲಿ ಅವರು ತಾಯಿಯನ್ನು ಮರೆತು ಬಿಡ್ತಾರೆ. ಆದ್ರೆ ನವರಾತ್ರಿ ಸಮಯದಲ್ಲಿ ತಾಯಿ ಜೊತೆ ಸಮಯ ಕಳೆಯುವ ಪಣತೊಡಿ. ಬ್ಯುಸಿ ಲೈಫ್ ನಲ್ಲಿ ಸ್ವಲ್ಪ ಸಮಯವನ್ನು ತಾಯಿ ಜೊತೆ ಇದ್ದು, ಮಾತನಾಡಿ. ಮಕ್ಕಳು ತನಗೆ ಪ್ರೀತಿ ತೋರಿಸಿದ್ರೆ ತಾಯಿ ಮನಸ್ಸು ಖುಷಿಯಾಗುತ್ತದೆ. ತಾಯಿ ಖುಷಿಯಾದ್ರೆ ಮನೆಯಲ್ಲಿ ಸಂತೋಷ ಸದಾ ನೆಲೆಸಿರುತ್ತದೆ.
ಸಹೋದರಿಗೆ ಆತ್ಮರಕ್ಷಣೆ ಕಲಿಸಿ : ಮನೆಯ ಮುದ್ದು ಸಹೋದರಿ. ಮನೆಯಲ್ಲಿ ಆಕೆ ಓಡಾಡ್ತಿದ್ದರೆ ವಿಶೇಷ ಖುಷಿ ನೆಲೆಸಿರುತ್ತದೆ. ಸಹೋದರಿ ಮೇಲೆ ವಿಶೇಷ ಕಾಳಜಿಯಿರುತ್ತದೆ. ಆಕೆಗೆ ಕೆಲವೊಂದು ನಿರ್ಬಂಧ ಹೇರಿರಲಾಗಿರುತ್ತದೆ. ಹಾಗಾಗಿ ಆಕೆ ತನಗೆ ಇಷ್ಟವಾಗುವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಹೋದರಿಗೆ ಸ್ವಾತಂತ್ರ್ಯ ನೀಡ್ಬೇಕು. ಆಕೆ ಬಯಸಿದ್ದನ್ನು ಮಾಡಲು ಪ್ರೋತ್ಸಾಹಿಸಬೇಕು. ಆಕೆ ಆಕೆ ಭದ್ರತೆಯ ಬಗ್ಗೆ ಕಾಳಜಿ ಇದ್ದರೆ, ಅವರಿಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆ ಕಲಿಸಿ.
ಫೆಂಗ್ ಶುಯಿಯ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ಹೆಚ್ಚುತ್ತೆ !
ಪತ್ನಿ ಮರೆಯಬೇಡಿ : ತಂದೆ – ತಾಯಿಯನ್ನು ಬಿಟ್ಟು ಬೇರೊಂದು ಮನೆಗೆ ಬಂದು ಎಲ್ಲರ ಜೊತೆ ಬೆರೆತು ಜೀವನ ನಡೆಸ್ತಿರುತ್ತಾಳೆ ಹೆಂಡತಿ. ಹೆಚ್ಚಿನ ಮಹಿಳೆಯರಿಗೆ ತಮ್ಮ ತಾಯಿಯ ಮನೆಯಲ್ಲಿ ಸಿಗುವ ಗೌರವ ಅತ್ತೆಯ ಮನೆಯಲ್ಲಿ ಸಿಗುವುದಿಲ್ಲ. ಮನೆಯ ಲಕ್ಷ್ಮಿ ಹೆಂಡತಿ. ಹಾಗಾಗಿ ಆಕೆಗೆ ದುಃಖವಾಗದಂತೆ ನೋಡಿಕೊಳ್ಳಿ. ಆಕೆಯನ್ನು ಗೌರವಿಸಿ. ಆಕೆಯನ್ನು ತವರಿನಲ್ಲಿ ನೋಡುವಂತೆ ಪ್ರೀತಿಯಿಂದ ನೋಡಿಕೊಳ್ಳಿ.
ಶಿವನ ಪೂಜೆಗೆ ಮಾತ್ರವಲ್ಲ, ಹಲವು ಸಮಸ್ಯೆ ನಿವಾರಿಸಲು ಬೆಸ್ಟ್ ಈ ಹೂವು
ಮಗಳಿಗೆ ಶಿಕ್ಷಣ ನೀಡಿದ್ರೆ ದೇಶದ ಅಭಿವೃದ್ಧಿ : ವಂಶಾಭಿವೃದ್ಧಿಯಾಗುವುದು ಗಂಡು ಮಕ್ಕಳಿಂದ ಎನ್ನುವ ಕಾರಣಕ್ಕೆ ಮನೆಯಲ್ಲಿರುವ ಗಂಡು ಮಗುವಿಗೆ ಶಿಕ್ಷಣ ನೀಡಲಾಗುತ್ತದೆ. ಆದ್ರೆ ಹೆಣ್ಣು ಮಕ್ಕಳ ಕನಸನ್ನು ನಿರ್ಲಕ್ಷ್ಯಿಸಲಾಗುತ್ತದೆ. ಆದ್ರೆ ಈ ತಪ್ಪನ್ನು ಎಂದೂ ಮಾಡ್ಬೇಡಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ. ಮಗಳು ಕೂಡ ಕುಟುಂಬದ ಭಾಗವಾಗಿದ್ದಾಳೆ. ಮಗಳಿಗೆ ಎರಡು ಕುಟುಂಬ ನಡೆಸುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಮಗಳಿಗೆ ಅವಶ್ಯವಾಗಿ ವಿದ್ಯೆ ಕಲಿಸಬೇಕು.