ಅನ್ಯಧರ್ಮದ ಯುವಕನೊಂದಿಗೆ ಓಡಿಹೋದ ಯುವತಿಗೆ ಕುಟುಂಬಸ್ಥರು ತಿಥಿ ಮಾಡಿದ್ದಾರೆ.
Interfaith Marriage:ಕೋಲ್ಕತ್ತಾ: ಅನ್ಯ ಧಾರ್ಮಿಯ ಯುವಕನೊಂದಿಗೆ ಓಡಿ ಹೋದ ಯುವತಿಗೆ ಆಕೆಯ ಮನೆಯವರು ತಿಥಿ ಮಾಡಿದ ಘಟನೆ ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾಲೇಜು ಓದುತ್ತಿದ್ದ ಹುಡುಗಿ ಅನ್ಯಧರ್ಮದ ಯುವಕನೊಂದಿಗೆ ಓಡಿ ಹೋಗಿ ತಮ್ಮ ಮನೆತನಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಆಕೆ ತಮ್ಮ ಪಾಲಿಗೆ ಸತ್ತಳು ಎಂದು ಅಂತ್ಯಕ್ರಿಯೆ ಮಾಡಿದ್ದಾಗಿ ಯುವತಿಯ ಕುಟುಂಬ(Bengal Family) ಹೇಳಿದೆ.
ಹುಡುಗಿಗೆ ಮದುವೆ ನಿಶ್ಚಯ ಮಾಡಿದ್ದ ಕುಟುಂಬದವರು:
ಯಾವುದೇ ವ್ಯಕ್ತಿ ಸಾವಿನ ನಂತರ 12 ದಿನಗಳ ಕಾಲ ಶೋಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಿಸಲಾಗುತ್ತದೆ. ಅದೇ ರೀತಿ ಇಲ್ಲಿ ಈ ಹುಡುಗಿ ಬೇರೆ ಧರ್ಮದ ಯುವಕನ ಜೊತೆ ಓಡಿ ಹೋದ ನಂತರ ಕುಟುಂಬದವರು ಆಕೆಗೆ ಅಂತ್ಯಕ್ರಿಯೆ ಮಾಡಿ 12 ದಿನಗಳ ನಂತರ ಆಕೆಗೆ ತಿಥಿ ಕಾರ್ಯವನ್ನು ಮಾಡಿದ್ದಾರೆ. ಆಕೆ ನಮ್ಮ ಪಾಲಿಗೆ ಸಾವಿನಷ್ಟೇ ಒಳ್ಳೆಯವಳು. ನಾವು ಆಕೆಯ ಮದುವೆಯನ್ನು ನಿಶ್ಚಯ ಮಾಡಿದ್ದೆವು. ಆದರೆ ಆಕೆ ನಮ್ಮ ಮಾತುಗಳನ್ನು ಕೇಳಲು ಸಿದ್ಧಳಿರಲಿಲ್ಲ. ಆಕೆ ನಮ್ಮ ಕುಟುಂಬವನ್ನು ಈ ಸ್ಥಿತಿಯಲ್ಲಿ ಕೈ ಬಿಟ್ಟು ನಮಗೆ ತಲೆ ಎತ್ತಿ ತಿರುಗಲಾಗದಂತೆ ಮಾಡಿದ್ದಾಳೆ. ಆಕೆಯ ವಿಷಯದಲ್ಲಿ ಎಲ್ಲವೂ ಮುಗಿದಿದೆ ಎಂದು ಆಕೆಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ಹೇಳಿದ್ದಾರೆ.
ಅನ್ಯಧರ್ಮದ ಯುವಕನೊಂದಿಗೆ ಓಡಿ ಹೋಗಿದ್ದಕ್ಕೆ ಶ್ರದ್ಧಾ
ಆಕೆ ಓಡಿ ಹೋಗಿದ್ದರಿಂದ ಆಕೆಗೆ ಸಾವಿನ ನಂತರ ಮಾಡಬಹುದಾದ ಎಲ್ಲಾ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು(shradh ceremony) ಮಾಡಿದ್ದು, ಆಕೆಯ ಕುಟುಂಬದವರು ಈ ಅಂತ್ಯಕ್ರಿಯೆ ಸಂಸ್ಕಾರಗಳಲ್ಲಿ ಒಂದಾದ ಕೇಶ ಮುಂಡನವನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಯುವತಿಯ ಫೋಟೋಗೆ ಹೂವಿನ ಹಾರವನ್ನು ಹಾಕಿ ಪುರೋಹಿತರನ್ನು ಕರೆಸಿ ಎಲ್ಲಾ ಅಂತ್ಯಕ್ರಿಯೆಯಲ್ಲಿ ನಡೆಸಬಹುದಾದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದಾರೆ.
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ಗಲಾಟೆ
ನಾವು ಆಕೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸುಟ್ಟು ಹಾಕಿದ್ದೇವೆ ಎಂದು ಆಕೆಯ ತಾಯಿ ಹೇಳಿದ್ದಾರೆ. ಸ್ಥಳೀಯ ಕಾಲೇಜಿನಲ್ಲಿ ದ್ವೀತಿಯ ವರ್ಷದಲ್ಲಿ ಓದುತ್ತಿದ್ದ ಆಕೆಗೆ ಆಕೆಯ ಕುಟುಂಬದವರು ಮದುವೆ ನಿಗದಿ ಮಾಡಿದ್ದರು. ಆದರೆ ಈ ಮದುವೆ ಆಕೆಗೆ ಇಷ್ಟವಿರಲಿಲ್ಲ. ಹೀಗಾಗಿ ಕುಟುಂಬದ ಜೊತೆ ಹಲವು ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ಇದಾದ ಕೆಲ ದಿನಗಳಲ್ಲಿ ಆಕೆ ಅನ್ಯಧರ್ಮಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವತಿಯ ತಂದೆ
ಯುವತಿಯ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯ ಕುಟುಂಬದವರ ನಿರ್ಧಾರಕ್ಕೆ ಆತ ಬದ್ಧರಾಗಿರುವುದಾಗಿ ತಿಳಿದು ಬಂದಿದೆ. ಆದರೆ ಹೀಗೆ ಓಡಿ ಹೋದ ಜೋಡಿಗೆ ಆತ್ಮೀಯರಾಗಿದ್ದ ಒಬ್ಬರು ಹೇಳುವಂತೆ ಹೀಗೆ ಓಡಿ ಹೋದ ಯುವತಿ ತನ್ನ ಅತ್ತೆ ಮಾವನವರ ಮನೆಯಲ್ಲಿ ಇದ್ದು, ಆಕೆಗೆ ಸೈಕಲಾಜಿಸ್ಟ್‌ಗಳಿಂದ ಕೌನ್ಸೆಲಿಂಗ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ವಿಚಾರದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆದರೆ ಯುವತಿಗೆ 18 ವರ್ಷ ತುಂಬಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಆಗುವುದಿಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಯಾವುದೇ ದೂರು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
