ನವದೆಹಲಿ(ಏ.15): ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್‌ ಕಾರಣ ಲಾಕ್‌ಡೌನ್‌ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ. ಅಲ್ಲದೆ, ಏಪ್ರಿಲ್‌ 20ರವರೆಗೆ ಲಾಕ್‌ಡೌನ್‌ ಕಠಿಣವಾಗಿರಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಅವರ ಈ 2 ಹಂತದ ಲಾಕ್‌ಡೌನ್‌ ಹಿಂದೆ 3.23 ಲಕ್ಷ ಜನರ ಕ್ವಾರಂಟೈನ್‌ ರಹಸ್ಯ ಅಡಗಿದೆ.

ಹೌದು. ಸರ್ಕಾರದ ಮೂಲಗಳೇ ಇದನ್ನು ಹೇಳಿವೆ. ‘ಈಗ 3.23 ಲಕ್ಷ ಜನರು ಕ್ವಾರಂಟೈನ್‌ನಲ್ಲಿದ್ದಾರೆ. ಕಠಿಣ ಲಾಕ್‌ಡೌನ್‌ ಜಾರಿಯಲ್ಲಿರುವ 1 ವಾರದಲ್ಲಿ ಇವರಲ್ಲಿ ಎಷ್ಟುಜನರಿಗೆ ಸೋಂಕು ದೃಢಪಡಬಹುದು ಎಂಬುದನ್ನು ಸರ್ಕಾರ ಗಮನಿಸಲಿದೆ. ಇದನ್ನು ಆಧರಿಸಿ ಮುಂದಿನ ಕ್ರಮವನ್ನು ಮೋದಿ ಜರುಗಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2ನೇ ಹಂತದ ಲಾಕ್‌ಡೌನ್ ಮಾರ್ಗಸೂಚಿ ಇಂದು: ಇಲ್ಲಿದೆ ಸಾಧ್ಯತೆಗಳು

‘ಏಪ್ರಿಲ್‌ 20ರವರೆಗಿನ ಪ್ರಕರಣಗಳ ಆಧಾರದಲ್ಲಿ ಎಲ್ಲಿ ಹೆಚ್ಚು ಸೋಂಕು ವರದಿ ಆಗಿರುವ ಹಾಟ್‌ಸ್ಪಾಟ್‌ಗಳಿವೆ? ಎಲ್ಲಿ ಹೊಸ ಹಾಟ್‌ಸ್ಪಾಟ್‌ಗಳು ಉಗಮ ಆಗುತ್ತಿವೆ? ಎಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಗುರುತಿಸಲಾಗುತ್ತದೆ. ಎಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆಯೋ ಅಲ್ಲಿ ಕೆಲವು ಅಗತ್ಯ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ಹೊಸ ಹಾಟ್‌ಸ್ಪಾಟ್‌ ಸೃಷ್ಟಿಆದರೆ ದೊಡ್ಡ ಸವಾಲಾಗಲಿದೆ. ಹೀಗಾಗಿ ಮುಂದಿನ 1 ವಾರ ನಿರ್ಣಾಯಕ ಆಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದ 718 ಜಿಲ್ಲೆಗಳಲ್ಲಿ 370 ಜಿಲ್ಲೆಗಳು ಕೊರೋನಾ ಬಾಧಿತ ಜಿಲ್ಲೆಗಳಾಗಿವೆ.