ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ದಾದ್ರಾ ನಗರ್‌ ಹವೇಲಿ ಸಂಸದ ಮೋಹನ್‌ ದೇಲ್ಕರ್‌| ಸಂಸದ ದೇಲ್ಕರ್‌ ಸಾವಿಗೂ ಮುನ್ನ ಮೋದಿ, ಶಾಗೆ ಪತ್ರ: ಕಾಂಗ್ರೆಸ್‌ ದೂರು

ಮುಂಬೈ(ಮಾ.15): ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ದಾದ್ರಾ ನಗರ್‌ ಹವೇಲಿ ಸಂಸದ ಮೋಹನ್‌ ದೇಲ್ಕರ್‌ ಸಾವಿಗೂ ಮುನ್ನ ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರಿಗೆ ಅನೇಕ ಬಾರಿ ಪತ್ರ ಬರೆದಿದ್ದರು. ಆದರೆ ಅವರ ಪತ್ರವನ್ನು ನಿರ್ಲಲ್ಷ್ಯ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಸಚಿನ್‌ ಸಾವಂತ್‌, ‘ದೇಲ್ಕರ್‌ ಅವರು ಬಿಜೆಪಿ ನಾಯಕರು ಮತ್ತು ಕೇಂದ್ರದ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಸಹಾಯ ಕೋರಿ ಪ್ರಧಾನಿ ಮೋದಿ, ಅಮಿತ್‌ ಶಾ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರು. ಪ್ರಧಾನಿ ಭೇಟಿಗೂ ಅವಕಾಶ ಕೋರಿದ್ದರು. ಆದರೆ ಉದ್ದೇಶಪೂರ್ವಕವಾಗಿಯೇ ಅವರ ಪತ್ರವನ್ನು ನಿರ್ಲಕ್ಷಿಸಿದರೇ ಎಂಬುದು ಕಾಡುವ ಪ್ರಶ್ನೆ’ ಎಂದು ದೂರಿದ್ದಾರೆ.

ಕೇಂದ್ರಾಡಳಿತ ಪ್ರದೇಶದಿಂದ 7 ಬಾರಿ ಸಂಸದರಾಗಿದ್ದ ದೇಲ್ಕರ್‌ ಅವರು ಮುಂಬೈನ ಹೋಟೆಲ್‌ವೊಂದರಲ್ಲಿ ಫೆ.22ರಂದು ಆತ್ಮಹತ್ಯೆಗೆ ಶರಣಾಗಿದ್ದರು.