BBMP Election 2022: ಬಿಬಿಎಂಪಿಗೆ 9 ವಾರದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿ: ಸುಪ್ರೀಂಕೋರ್ಟ್‌

2 ವರ್ಷಗಳ ಹಿಂದೆಯೇ ಅವಧಿ ಪೂರೈಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) 8 ವಾರಗಳಲ್ಲಿ ವಾರ್ಡ್‌ ಮರುವಿಂಗಡಣೆ ಮತ್ತು ಇತರೆ ಹಿಂದುಳಿದ ವರ್ಗದ ಒಬಿಸಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ.

bbmp election 2022 start election process within 8 weeks supreme court directs karnataka election commission gvd

ನವದೆಹಲಿ (ಮೇ.21): 2 ವರ್ಷಗಳ ಹಿಂದೆಯೇ ಅವಧಿ ಪೂರೈಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) 8 ವಾರಗಳಲ್ಲಿ ವಾರ್ಡ್‌ ಮರುವಿಂಗಡಣೆ ಮತ್ತು ಇತರೆ ಹಿಂದುಳಿದ ವರ್ಗದ ಒಬಿಸಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ. ಜೊತೆಗೆ ಈ ಅಧಿಸೂಚನೆ ಹೊರಬಿದ್ದ 1 ವಾರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. 

ಇದರೊಂದಿಗೆ 2020ರಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗೆ ಮುಹೂರ್ತ ಕೂಡಿಬಂದಂತೆ ಆಗಿದೆ. ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಎ.ಎಂ.ಕಾನ್ವಿಲ್ಕರ್‌ ಮತ್ತು ನ್ಯಾ ಜೆ.ಬಿ.ಪರ್ಡಿವಾಲ ಅವರಿದ್ದ ಪೀಠ ‘ವಾರ್ಡ್‌ ಮರುವಿಂಗಡಣಾ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. 8 ವಾರಗಳ ಒಳಗೆ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ದಾಖಲೆ ರೂಪದಲ್ಲಿ ಮಾಹಿತಿ ನೀಡಿದೆ. 

Bengaluru Rains: ಸಿಎಂ ಮುಂದೆ ಮಳೆ ಸಂತ್ರಸ್ತರ ಗೋಳಾಟ: ಜನರ ಆಕ್ರೋಶ

ಹೀಗಾಗಿ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಅಗತ್ಯ ಅಧಿಸೂಚನೆಗಳನ್ನು ಹೊರಡಿಸಲು ಮತ್ತು ಮೀಸಲಾತಿಯನ್ನು ನಿಗದಿ ಪಡಿಸಲು 8 ವಾರಗಳ ಕಾಲಾವಕಾಶ ನೀಡಲಾಗಿದೆ. ಅದರೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿತು. ಜೊತೆಗೆ ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಬಿದ್ದ 1 ವಾರದಲ್ಲಿ ರಾಜ್ಯ ಚುನಾವಣಾ ಆಯೋಗ, ಚುನಾವಣಾ ಪ್ರಕ್ರಿಯೆ ಆರಂಭಿಸಿ, ಹೊಸದಾಗಿ ರಚನೆಯಾಗುವ ಮಹಾನಗರ ಪಾಲಿಕೆ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.

ಜುಲೈ 22ರೊಳಗೆ ಆಗಬೇಕು: ಎಂಟು ವಾರಗಳ ಗಡುವು ನೀಡಿ ಸುಪ್ರೀಂ ಕೋರ್ಟ್‌ ಜುಲೈ 22ಕ್ಕೆ ವಿಚಾರಣೆ ಮುಂದೂಡಿದೆ. ಎಂಟು ವಾರಗಳ ಗಡುವು ಜುಲೈ 3ನೇ ವಾರಕ್ಕೆ ಮುಕ್ತಾಯಗೊಳ್ಳಲಿದ್ದು, ಸರ್ಕಾರ ಮೀಸಲಾತಿ ನಿಗದಿ ಹಾಗೂ ವಾರ್ಡ್‌ ಪುನರ್‌ವಿಂಗಡಣೆ ಪ್ರಕ್ರಿಯೆ ಮುಗಿಸಬೇಕು. ಬಳಿಕ ಒಂದು ವಾರದಲ್ಲಿ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆ ಶುರು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಸರ್ಕಾರ ಚುನಾವಣೆಗೆ ಬಾಕಿ ಇರುವ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣಾ ಆಯೋಗವು ಸಕಾಲಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಿದರೆ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ವರ್ಷದ ಹಗ್ಗ ಜಗ್ಗಾಟ: 2015ರಲ್ಲಿ ಚುನಾಯಿತವಾಗಿದ್ದ ಬಿಬಿಎಂಪಿ ಆಡಳಿತದ ಅವಧಿಯು 2020ರ ಸೆಪ್ಟಂಬರ್‌ಗೆ ಮುಕ್ತಾಯಗೊಂಡಿತ್ತು. ಈ ವೇಳೆಗೆ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯನ್ನು ವಾರ್ಡ್‌ ಪುನರ್‌ವಿಂಗಡಣೆ, ವಾರ್ಡ್‌ ಸಂಖ್ಯೆ ಹೆಚ್ಚಳದ ಕಾರಣ ನೀಡಿ ಮುಂದೂಡಲಾಗಿತ್ತು. ಬಳಿಕ ಆಡಳಿತಾಧಿಕಾರಿ ಆಡಳಿತ ತರಲಾಗಿತ್ತು. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜು ಮತ್ತು ಅಬ್ದುಲ್‌ ವಾಜೀದ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ 2020ರ ಡಿ.4 ರಂದು ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.

ನಂತರ ರಾಜ್ಯ ಸರ್ಕಾರ ಹೈಕೋರ್ಟ್‌ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರಿಂ ಕೋರ್ಟ್‌ ಸರ್ಕಾರದ ಅರ್ಜಿ ವಿಚಾರಣೆ ನಡೆಸಿ 2020 ಡಿ.18 ರಂದು ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದುವರೆಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ರಘು ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ‘ಬಿಬಿಎಂಪಿ ಅಧಿನಿಯಮ-2020’ ಜಾರಿಗೊಳಿಸಿತ್ತು. ಅಲ್ಲದೇ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು.

ಮುಂಗಾರು ಆರಂಭಕ್ಕೂ ಮುನ್ನವೇ ಬೆಂಗ್ಳೂರಲ್ಲಿ 10,282 ರಸ್ತೆ ಗುಂಡಿ ಭರ್ತಿ: ಬಿಬಿಎಂಪಿ

ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ರಚನೆ ಮಾಡಿ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಮರು ವಿಂಗಡಣೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಸಮಿತಿ ವಾರ್ಡ್‌ ಮರು ವಿಂಗಡಣೆ ಪ್ರಕ್ರಿಯೆ ನಡೆಸುತ್ತಿದೆ. ಇನ್ನೂ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡುವುದು ಬಾಕಿ ಇದೆ.

Latest Videos
Follow Us:
Download App:
  • android
  • ios