ಮುಂಗಾರು ಆರಂಭಕ್ಕೂ ಮುನ್ನವೇ ಬೆಂಗ್ಳೂರಲ್ಲಿ 10,282 ರಸ್ತೆ ಗುಂಡಿ ಭರ್ತಿ: ಬಿಬಿಎಂಪಿ
* ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಗುಂಡಿ ಗುರುತು
* ಅಪಾಯಕಾರಿ 218 ಗುಂಡಿಗಳ ಭರ್ತಿಗೆ ಪ್ರತ್ಯೇಕ ಯೋಜನೆ
* ರಸ್ತೆಯಲ್ಲಿ ಕಸದ ಲಾರಿ ತಪಾಸಣೆ ಸರಿಯಲ್ಲ
ಬೆಂಗಳೂರು(ಮೇ.19): ನಗರದಲ್ಲಿ ಈವರೆಗೆ ಪತ್ತೆಯಾಗಿರುವ 10,282 ರಸ್ತೆ ಗುಂಡಿಗಳನ್ನು ಮುಂಗಾರು ಆರಂಭಕ್ಕೂ ಮುನ್ನವೇ ಮುಚ್ಚುವ ಪ್ರಯತ್ನ ಮಾಡಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ತೆಯಾಗಿರುವ ಗುಂಡಿಗಳ ಪೈಕಿ 218 ಗುಂಡಿಗಳು ಗಂಭೀರ ಸ್ವರೂಪದಲ್ಲಿದ್ದು, ಇವುಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡುವುದಕ್ಕೆ ಸಾಧ್ಯವಿಲ್ಲ. ಪ್ರತ್ಯೇಕ ಯೋಜನೆ ರೂಪಿಸಿ ಸರಿಪಡಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
Potholes: ಬೆಂಗ್ಳೂರಿನ ಗುಂಡಿ ಮುಚ್ಚುವ ಆದೇಶಕ್ಕೆ ಇಂದೇ ಡೆಡ್‌ಲೈನ್..!
ಉಳಿದಂತೆ ಪೂರ್ವ ವಲಯದಲ್ಲಿ ಅತಿ ಹೆಚ್ಚು 2,395 ರಸ್ತೆ ಗುಂಡಿ ಪತ್ತೆಯಾಗಿದ್ದು, ದಕ್ಷಿಣ ವಲಯದಲ್ಲಿ 1,436 ರಸ್ತೆ ಗುಂಡಿಗಳಿವೆ. ಸೋಮವಾರದಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬಿಬಿಎಂಪಿಯ ಡಾಂಬರ್ ಮಿಶ್ರಣ ಘಟಕದಿಂದ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಆಯಾ ವಲಯವಾರು ಭರ್ತಿ ಮಾಡಿದ ಗುಂಡಿಗಳ ಪೈಕಿ ಶೇ.1ರಷ್ಟು ಗುಂಡಿಗಳನ್ನು ವಲಯ ಆಯುಕ್ತರು ಪರಿಶೀಲನೆ ಮಾಡಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ದೃಢಿಕರಿಸಬೇಕು. ಶೇ.5ರಷ್ಟುಮುಖ್ಯ ಎಂಜಿನಿಯರ್‌ಗಳು, ಶೇ.30ರಷ್ಟುಕಾರ್ಯಪಾಲಕ ಎಂಜಿನಿಯರ್‌ಗಳು ಪರಿಶೀಲನೆ ನಡೆಸಲಿದ್ದಾರೆ. ಫಿಕ್ಸ್ ಮೈಸ್ಟ್ರೀಟ್ ಆ್ಯಪ್ ಸಾರ್ವಜನಿಕರು ಬಳಕೆ ಮಾಡಬಹುದಾಗಿದ್ದು, ರಸ್ತೆಯಲ್ಲಿ ಗುಂಡಿ ಕಂಡು ಬಂದರೆ ಆ್ಯಪ್ ಮೂಲಕ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ ಎಂದರು.
ರಸ್ತೆ ಗುಂಡಿಯಿಂದ ಸಂಭವಿಸುವ ಅಪಘಾತಕ್ಕೆ ಬಿಬಿಎಂಪಿ ಹೊಣೆ: ಪರಿಹಾರ ಕೊಡ್ತೀವಿ ಅಂದ್ರೂ ಅರ್ಜಿ ಬರ್ತಿಲ್ಲ!
ರಸ್ತೆಯಲ್ಲಿ ಕಸದ ಲಾರಿ ತಪಾಸಣೆ ಸರಿಯಲ್ಲ
ಬಿಬಿಎಂಪಿಯ ಕಸದ ಕಾಂಪ್ಯಾಕ್ಟರ್‌ಗಳು ಪದೆ ಪದೇ ಅಪಘಾತಕ್ಕೆ ಒಳಗಾಗುತ್ತಿರುವುದಕ್ಕೆ ಸಂಚಾರಿ ಪೊಲೀಸರು ರಸ್ತೆ ಮಧ್ಯೆ ಲಾರಿಗಳನ್ನು ದಿಢೀರ್ ತಡೆದು ನಿಲ್ಲಿಸಿ ದಾಖಲಾತಿ ಪರಿಶೀಲಿಸುವುದು ಸರಿಯಲ್ಲ. ಇದು ಮತ್ತೊಂದು ಅಪಘಾತಕ್ಕೆ ಕಾರಣವಾಗಬಹುದು. ಈ ಬಗ್ಗೆ ಸಂಚಾರಿ ಪೊಲೀಸ್ ಆಯುಕ್ತರಾದ ರವೀಕಾಂತೇಗೌಡ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ರವೀಂದ್ರ ತಿಳಿಸಿದರು.