ಬೊಮ್ಮಾಯಿಗೆ ಸಿಎಂ ಪಟ್ಟ; ಕರ್ನಾಟಕ ಸೇರಿ 5 ರಾಜ್ಯದಲ್ಲಿ ಸಿಎಂ ಮಕ್ಕಳೇ ಸಿಎಂ!
- ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ
- ದಕ್ಷಿಣ ಭಾರತದಲ್ಲಿ ಅಪ್ಪ-ಮಕ್ಕಳ ಸಿಎಂ ಜೋಡಿ
- 5 ರಾಜ್ಯದಲ್ಲಿ ಸಿಎಂ ಮಕ್ಕಳೇ ಸಿಎಂ
ಬೆಂಗಳೂರು(ಜು.27): ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ, ಬಸವರಾಜ ಬೊಮ್ಮಾಯಿ ಕರ್ನಾಟಕದ 11ನೇ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಪುತ್ರ. ಈ ಮೂಲಕ ಕರ್ನಾಟಕದಲ್ಲಿ ತಂದೆ ಬಳಿಕ ಸಿಎಂ ಸ್ಥಾನ ಅಲಂಕರಿಸಿದ 2ನೇ ಜೋಡಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಭಾರತದ 5 ರಾಜ್ಯದಲ್ಲಿ ಸಿಎಂ ಪುತ್ರರದ್ದೇ ಆಡಳಿತವಾಗಿದೆ.
ನೂತನ ಸಿಎಂ ಆಗಿ ಬೊಮ್ಮಾಯಿ ಆಯ್ಕೆ; ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ!
ಆಗಸ್ಟ್ 1988 ರಿಂದ ಏಪ್ರಿಲ್ 1989ರ ವರೆಗೆ ಎಸ್ ಆರ್ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಇದೀಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಕೈಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ನೀಡಲಾಗಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗೋ ಮೂಲಕ ಭಾರತದ 5 ರಾಜ್ಯಗಳಲ್ಲಿ ಸಿಎಂ ಪುತ್ರರೇ ಸಿಎಂ ಆಗಿರುವುದು ವಿಶೇಷವಾಗಿದೆ.
ತಮಿಳುನಾಡು:
ತಮಿಳುನಾಡಿನಲ್ಲಿ ಸದ್ಯ ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸ್ಟಾಲಿನ್ ತಮಿಳುನಾಡಿ ಅತ್ಯಂತ ಜನಪ್ರಿಯ, ಪ್ರಭಾವಿ ಮುಖ್ಯಮಂತ್ರಿ, ದಿವಗಂತ ಎಂ ಕರುಣಾನಿಧಿ ಪುತ್ರ. ಕರುಣಾನಿಧಿ 5 ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಆಂಧ್ರ ಪ್ರದೇಶ:
ಆಂಧ್ರ ಪ್ರದೇಶದಲ್ಲಿ ಸದ್ಯ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ಮೇ 30, 2019ರಲ್ಲಿ ಜಗನ್ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶ ಕಂಡ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಬಿಎಸ್ ರಾಜಶೇಖರ ರೆಡ್ಡಿ ಪುತ್ರ. ರಾಜಶೇಕರ್ ರೆಡ್ಡಿ 2004ರಿಂದ 2009ರ ವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಿರುಪರಿಚಯ
ಒಡಿಶಾ:
ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅಪ್ಪನನ್ನೇ ಮೀರಿಸಿದ ಸಿಎಂ ಆಗಿದ್ದಾರೆ. ನವೀನ್ ಪಟ್ನಾಯಕ್ 5ನೇ ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇನ್ನು ನವೀನ್ ಪಟ್ನಾಯಕ್ ತಂದೆ ಬಿಜು ಪಟ್ನಾಯಕ್ 1961-1963 ಹಾಗೂ 1990-95ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಜಾರ್ಖಂಡ್:
ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ 2ನೇ ಬಾರಿಗೆ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ. 2ನೇ ಅವಧಿ 2019ರಲ್ಲಿ ಆರಂಭಗೊಂಡಿದೆ. ಹೇಮಂತ್ ಸೊರನೆ ತಂದೆ ಶಿಬು ಸೊರೆನ್ 2 ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಒಟ್ಟು 5 ರಾಜ್ಯಗಳಲ್ಲಿ ಸಿಎಂ ಮಕ್ಕಳೆೇ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ. ಇನ್ನು ಅಪ್ಪ-ಮಕ್ಕಳು ಸಿಎಂ ಆಗಿರುವುದು ಉದಾಹರಣೆಗಳು ಇನ್ನೂ ಇವೆ. ಕರ್ನಾಟಕದಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದಲ್ಲಿ ಫಾರುಖ್ ಅಬ್ದುುಲ್ಲಾ ಹಾಗೂ ಓಮರ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯ್ಯಿದ್ ಹಾಗೂ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆಗಿ ಆಡಳಿತ ನಡೆಸಿದ್ದಾರೆ.