ಆಹಾರ ಅರಸಿ ಬಂದ ಆನೆಗೆ ಬೆಂಕಿಯ ಈಟಿ ಎಸೆದ ಜನ: ನರಳಿ ನರಳಿ ಪ್ರಾಣ ಬಿಟ್ಟ ಗಜರಾಜ
ವೈದ್ಯೆ ಮೇಲಿನ ಅತ್ಯಾಚಾರ ಕೊಲೆ ಕಾರಣಕ್ಕೆ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಹಾರ ಅರಸಿ ಬಂದ ಆನೆಯ ಗುಂಪಿನ ಮೇಲೆ ಜನ ಬೆಂಕಿಯ ಈಟಿ ಎಸೆದಿದ್ದು, ಇದರಿಂದ ಆನೆ ನೋವು ತಡೆದುಕೊಳ್ಳಲಾಗದೇ ನರಳಿ ನರಳಿ ಪ್ರಾಣ ಬಿಟ್ಟಿದೆ
ಕೋಲ್ಕತಾ: ವೈದ್ಯೆ ಮೇಲಿನ ಅತ್ಯಾಚಾರ ಕೊಲೆ ಕಾರಣಕ್ಕೆ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಹಾರ ಅರಸಿ ಬಂದ ಆನೆಯ ಗುಂಪಿನ ಮೇಲೆ ಜನ ಬೆಂಕಿಯ ಈಟಿ ಎಸೆದಿದ್ದು, ಇದರಿಂದ ಆನೆ ನೋವು ತಡೆದುಕೊಳ್ಳಲಾಗದೇ ನರಳಿ ನರಳಿ ಪ್ರಾಣ ಬಿಟ್ಟಿದೆ. ಪಶ್ಚಿಮ ಬಂಗಾಳದ ಝರ್‌ಗ್ರಾಮದಲ್ಲಿ ಘಟನೆ ನಡೆದಿದ್ದು, ಈಟಿ ಬೆನ್ನಿಗೆ ಬಂದು ಇರಿದ ಮೇಲೆ ಆನೆಯೊಂದು ನರಳಿ ನರಳಿ ಪ್ರಾಣ ಬಿಟ್ಟ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಕಣ್ಣಂಚನ್ನು ತೇವಗೊಳಿಸುತ್ತಿದೆ.
ಮೊನಚಾದ ಕಬ್ಬಿಣದ ರಾಡ್‌ಗೆ ಬೆಂಕಿಯುಂಡೆಗಳನ್ನು ಕಟ್ಟಿ ಅದನ್ನು ಆನೆಯತ್ತ ಎಸೆಯಲಾಗುತ್ತದೆ. ಪಶ್ಚಿಮ ಬಂಗಾಳದಾದ್ಯಂತ ಆಚರಣೆಯಲ್ಲಿದ್ದ ಈ ಆನೆ ಅಥವಾ ಇತರ ವನ್ಯಜೀವಿಗಳನ್ನು ಓಡಿಸಲು ಬಳಸುವ ಕ್ರಮವನ್ನು 2018ರಲ್ಲೇ ಸುಪ್ರೀಂಕೋರ್ಟ್ ನಿಷೇಧ ಮಾಡಿದೆ. ಆದರೂ ಈಗ ಪಶ್ಚಿಮ ಬಂಗಾಳದಲ್ಲಿ ಈ ಪದ್ಧತಿ ಇನ್ನು ಜೀವಂತವಾಗಿರುವುದು ಈ ಘಟನೆಯಿಂದ ಪತ್ತೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಪರೀತ ಮಳೆ, ಕುಮಾರಧಾರ ನದಿಯಲ್ಲಿ ತೇಲಿಬಂದ ಆನೆಯ ಮೃತದೇಹ!
ಪರಿಸರವಾದಿ ಪ್ರೇರಣಾ ಸಿಂಗ್ ಬಿಂದ್ರಾ ಅವರು ಈ ಹೃದಯ ವಿದ್ರಾವಕವೆನಿಸುವ ದೃಶ್ಯಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರು ಆನೆಗಳು ಹಾಗೂ ಎರಡು ಮರಿಗಳಿದ್ದ ಆನೆಗಳ ಗುಂಪೊಂದು ಗುರುವಾರ ಬೆಳಗ್ಗೆ ಝರ್‌ಗ್ರಾಮ್ ಜಿಲ್ಲೆಯ ರಾಜ್ ಕಾಲೇಜ್ ಕಾಲೋನಿಗೆ ಬಂದಿವೆ. ಅಲ್ಲದೇ ಅಲ್ಲಿನ ಕೆಲ ಗೋಡೆಗಳನ್ನು ಬೀಳಿಸಿವೆ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಅದೇ ಸ್ಥಳದ ವ್ಯಕ್ತಿಯೊಬ್ಬರನ್ನು ಆನೆಯೊಂದು ಕೊಂದು ಹಾಕಿದೆ.
ಹೀಗೆ ಆನೆ ಹಿಂಡು ಗ್ರಾಮದಲ್ಲಿ ದಾಂಧಲೆ ಎಬ್ಬಿಸಲು ಶುರು ಮಾಡುತ್ತಿದ್ದಂತೆ ಸಿಟ್ಟಿಗೆದ್ದ ಜನ ಅಲ್ಲಿ ಈ ಮೊನಚಾದ ಕಬ್ಬಿಣದ ರಾಡ್‌ಗೆ ಬೆಂಕಿಯುಂಡೆಯನ್ನು ಹಾಗೂ ಪಂಜುಗಳನ್ನು ಕಟ್ಟಿ ಆನೆಗಳತ್ತ ಎಸೆದಿದ್ದಾರೆ. ಹೀಗೆ ಆನೆಗಳನ್ನು ಓಡಿಸುವ ಈ ತಂಡಕ್ಕೆ ಸ್ಥಳೀಯರು ಹೌಲಾ ಗ್ಯಾಂಗ್ ಎಂದು ಕರೆಯುತ್ತಿದ್ದು, ಈ ಹೌಲಾ ಗ್ಯಾಂಗ್ ಅರಣ್ಯ ಇಲಾಖೆಯವರಿಗೆ ಅರಿವಿದ್ದೆ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತಪಟ್ಟ ತಾಯಿ ಆನೆ ಎಬ್ಬಿಸಲು ದಿನವಿಡಿ ಪ್ರಯತ್ನಿಸಿದ ಮರಿ ಆನೆ;ಮನಕಲುಕುವ ಘಟನೆ!
ಆನೆಗಳನ್ನು ಕೃಷಿ ಭೂಮಿಯಿಂದ ಓಡಿಸುವ ಕೆಲಸ ಮಾಡುವ ಈ ಹುಲ್ಲಾ ಗ್ಯಾಂಗ್ ಅನ್ನು2018ರಲ್ಲೇ ಸುಪ್ರೀಂಕೋರ್ಟ್ ಬ್ಯಾನ್ ಮಾಡಿದೆ. ಆದರೂ ಗುರುವಾರ ಈ ಹುಲ್ಲಾ ಗ್ಯಾಂಗ್ ಧರ್ಮಪುರದ ಫುಟ್ಬಾಲ್ ಮೈದಾನದಲ್ಲಿ ಆನೆಗಳ ಮೇಲೆ ಈಟಿಗಳಿಂದ ಹಲವು ಬಾರಿ ದಾಳಿ ನಡೆಸಿದ್ದಾರೆ. ಇದರಿಂದ ಆನೆಯೊಂದು ಗಾಯಗೊಂಡು ಎದ್ದು ನಡೆಯಲಾಗದೇ ನರಳಿ ನರಳಿ ಪ್ರಾಣ ಬಿಟ್ಟಿದೆ.
ಹೌಲ್ಲಾ ಗುಂಪಿನಿಂದ ದಾಳಿಗೊಳಗಾದ ಹೆಣ್ಣಾನೆಯೊಂದರ ಬೆನ್ನಿಗೆ ಈಟಿ ಸಿಲುಕಿಕೊಂಡಿದ್ದು ಇದರಿಂದ ಅದರ ಬೆನ್ನು ಹುರಿಗೆ ಗಂಭೀರವಾದ ಗಾಯವಾಗಿದೆ ಎಂದು ಬಿಂದ್ರಾ ಅವರು ಹೇಳಿದ್ದಾರೆ. ಇದಾದ ನಂತರ ಈ ಆನೆಯನ್ನು ಅರಣ್ಯ ಸಿಬ್ಬಂದಿಯವರು ಘಟನೆ ನಡೆದ ಸುಮಾರು 8 ಗಂಟೆಯ ನಂತರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆನೆ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದೆ. ನಾವು ಆನೆಗಳನ್ನು ದೇವರೆಂದು ಪೂಜೆ ಮಾಡುತ್ತೇವೆ. ಆದರೆ ಅವುಗಳ ವಾಸಸ್ಥಾನವನ್ನು ನಾವು ಅವುಗಳಿಗೆ ನೀಡುತ್ತಿಲ್ಲ, ಅವರ ಜಾಗವನ್ನು ಅವರಿಗೆ ನೀಡುತ್ತಿಲ್ಲ ಎಂದು ಬಿಂದ್ರಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.