ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

ಗೂಗಲ್‌ ಮ್ಯಾಪ್‌ನಲ್ಲಿ ಕಾರ್‌ ಬದಲು ಬೈಕ್‌ ಎಂದು ಆಪ್ಷನ್‌ ಬದಲಾಯಿಸಲು ಮರೆತ ಕಾರಣಕ್ಕಾಗಿ ಯುವಕ ಇಂದು ಜೈಲು ಪಾಲಾಗಿದ್ದಾನೆ. ಮಾವನಿಗೆ ಔಷಧಿ ತರಲು ಹೋದವ ಜೈಲು ಪಾಲಾಗಿದ್ದು, ಜಾಮೀನು ಪಡೆಯಲು 20 ಸಾವಿರ ಹಣ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಹಾಗಿದ್ದರೆ ಇದೇನು ಕಥೆ?

Bandra Worli sea link Misreading maps landed our boy in this trouble san

ಮುಂಬೈ (ಮೇ.8): ಸಂಚಾರಕ್ಕೆ ಮ್ಯಾಪ್‌ಗಳನ್ನೇ ಆಧಾರವಾಗಿಟ್ಟುಕೊಂಡಿದ್ದ ಕಾರಣಕ್ಕೆ ಆಗಿರುವ ಅವಾಂತರವಿದು. ಹೌದು, ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಒಂದನ್ನು ಮಿಸ್‌ ಮಾಡಿದ್ದಕ್ಕೆ ಯುವಕ ಇಂದು ಜೈಲು ಪಾಲಾಗಿದ್ದಾನೆ. 24 ವರ್ಷದ ಈ ವ್ಯಕ್ತಿ, ತನ್ನ ಮಾವನಿಗಾಗಿ ಔಷಧಿ ತರಲು ಮನೆಯಿಂದ ಹೊರಟಿದ್ದ. ಹೊರಡುವಾಗ ಗೂಗಲ್‌ ಮ್ಯಾಪ್‌ ಯೂಸ್‌ ಮಾಡಿದ್ದ ಆತ, ಇದರಲ್ಲಿ ಕಾರ್‌ ಬದಲು ಬೈಕ್‌ ಎಂದು ಆಪ್ಷನ್‌ ಬದಲಾಯಿಸಲು ಮರೆತಿದ್ದಾನೆ. ಈ ಕಾರಣಕ್ಕೆ ಪೊಲೀಸರು 'ನರಹತ್ಯೆಗೆ ಯತ್ನ'ದ ಕೇಸ್‌ ದಾಖಲು ಮಾಡಿ ಜೈಲಿಗೆ ಅಟ್ಟಿದ್ದಾರೆ. ಜೈಲಿನಲ್ಲಿ ದಿನ ಕಳೆಯುತ್ತಿರುವ ಈ ವ್ಯಕ್ತಿಯ ಹೆಸರು ಕಿರಣ್‌ ಪಟೇಲ್‌. ಮುಂಬೈನ ಪ್ರಸಿದ್ಧ ಬಾಂದ್ರಾ-ವೊರ್ಲಿ ಸೀ ಲಿಂಕ್‌ನಲ್ಲಿ ಬೈಕ್‌ನಲ್ಲಿ ರೈಡ್‌ ಮಾಡಿದ ಕಾರಣಕ್ಕೆ ಪೊಲೀಸರು ಕಿರಣ್‌ ಪಟೇಲ್‌ ವಿರುದ್ಧ'ಉದ್ದೇಶಪೂರ್ವಕ ನರಹತ್ಯೆಯ ಕೇಸ್‌' ದಾಖಲು ಮಾಡಿ ಜೈಲಿಗೆ ಅಟ್ಟಿದ್ದಾರೆ. ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಅದಕ್ಕಾಗಿ 20 ಸಾವಿರ ರೂಪಾಯಿ ಕಟ್ಟುವಂತೆ ಹೇಳಿದೆ. ಒಂದು ಸಣ್ಣ ಸೆಟ್ಟಿಂಗ್‌ ಮಿಸ್‌ ಮಾಡಿದ ಕಾರಣಕ್ಕೆ 20 ಸಾವಿರ ಕಟ್ಟಬೇಕಾದ ಅನಿವಾರ್ಯತೆಯಲ್ಲಿರುವ ಕಿರಣ್‌ ಪಟೇಲ್‌, ಹಣ ಹೊಂದಿಸಲು ಇದ್ದಿದ್ದ ಸಂಬಂಧಿಕರ ಕಾಲು ಹಿಡಿಯುತ್ತಿದ್ದಾರೆ.

ಏನಿದು ಘಟನೆ: ಗುಜರಾತ್‌ನ ಅಹಮದಾಬಾದ್‌ನ ನಿವಾಸಿಯಾಗಿರುವ ಕಿರಣ್‌ ಸುನೀಲ್‌ ಪಟೇಲ್‌ ಕಳೆದ ತಿಂಗಳು ಮುಂಬೈಗೆ ಬಂದಿದ್ದರು. ಮುಂಬೈನ (Mumbai) ಖಾಂಡಿವಿಲಿಯಲ್ಲಿ(Khandivili) ವಾಸವಿದ್ದ ತಮ್ಮ 80 ವರ್ಷದ ಮಾವನನ್ನು ಭೇಟಿಯಾಗಿ ಮರಳುವುದು ಅವರ ಉದ್ದೇಶವಾಗಿತ್ತು. ಖಾಂಡಿವಿಲಿಗೆ ಆಗಮಿಸಿದ ಮೂರು ದಿನಗಳ ಬಳಿಕ ಏಪ್ರಿಲ್‌ 26 ರಂದು, ದಾದರ್‌ನಲ್ಲಿರುವ ವೈದ್ಯರಿಂದ ಮಾವನ ಔಷಧಿಯನ್ನು ಪಡೆದುಕೊಳ್ಳುವ ಸಲುವಾಗಿ ಮನೆಯನ್ನು ಬಿಟ್ಟಿದ್ದರು. ಕಿರಣ್‌ ಪಟೇಲ್‌ ಮೊಬೈಲ್‌ಗೆ ವೈದ್ಯರು ಲೊಕೇಷನ್‌ಅನ್ನೂ ಕಳಿಸಿದ್ದರು. ಇದನ್ನು ಗೂಗಲ್‌ ಮ್ಯಾಪ್‌ನಲ್ಲಿ (Google Maps) ಆತ ಸೆಟ್‌ ಮಾಡಿಕೊಂಡಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ, ಕಿರಣ್‌ ಮೊಬೈಲ್‌ನಲ್ಲಿ 'ಕಾರ್‌ ಡ್ರೈವಿಂಗ್‌' ಮ್ಯಾಪ್‌ನ ಡಿಫಾಲ್ಟ್‌ ಆಪ್ಷನ್‌ ಆಗಿತ್ತು. ಖಾಂಡಿವಿಲಿಯಿಂದ ಹೊರಡುವಾಗ, ಈ ಆಪ್ಶನ್‌ಅನ್ನು ದ್ವಿಚಕ್ರ ವಾಹನಕ್ಕೆ ಬದಲಾಯಿಸಲು ಅವರು ಮರೆತು ಹೋಗಿದ್ದರು.

'ನಾನು ಇನ್ನೊಂದು ಬೈಕ್‌ನಲ್ಲಿದ್ದೆ. ಆತ ತುಂಬಾ ಮುಂದಿದ್ದ ಹಾಗೂ ಮೊಬೈಲ್‌ನಲ್ಲಿ ಮ್ಯಾಪ್‌ ಅನ್ನು ಫಾಲೋ ಮಾಡುತ್ತಿದ್ದ. ನಾವು ಬಾಂದ್ರಾದ ಬಳಿ ಹೋದ ಬೆನ್ನಲ್ಲಿಯೇ ನನ್ನ ಅಣ್ಣ ಸೀ ಲಿಂಕ್‌ (Bandra Worli Sea Link) ಕಡೆ ಬೈಕ್‌ ತಿರುಗಿಸಿದ್ದ. ಆದರೆ, ನನ್ನನ್ನು ಪೊಲೀಸ್‌ ಅಧಿಕಾರಿ ತಡೆದ' ಎಂದು ಕಿರಣ್‌ನ ತಮ್ಮ ಕುನಾಲ್ ಪಟೇಲ್‌ ಹೇಳಿದ್ದಾರೆ. ಕಿರಣ್‌ ಪಟೇಲ್‌ನ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಸೋದರ ಸಂಬಂಧಿ 17 ವರ್ಷದ ಮೇಹುಲ್‌ ಮಿಥಾಪರ ಈ ಕುರಿತಾಗಿ ಮಾತನಾಡಿದ್ದು, 'ನಾವು ಸೀ ಲಿಂಕ್‌ಗೆ ಬೈಕ್‌ನಲ್ಲಿ ಹೋದಾಗ ಯಾರೂ ಕೂಡ ನಮ್ಮನ್ನು ತಡೆದಿರಲಿಲ್ಲ. ಸೀ ಲಿಂಕ್‌ನಲ್ಲಿ ಬೈಕ್‌ಗಳಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ ಎನ್ನುವುದೂ ಕೂಡ ನಮಗೆ ಗೊತ್ತಿರಲಿಲ್ಲ. ಬೈಕ್‌ನಲ್ಲಿ ಹೋಗುವಾಗ ಕುನಾಲ್‌ನಿಂದ ನಮಗೆ ಕರೆ ಬಂದಿತ್ತು. 'ತಮ್ಮನ್ನು ಪೊಲೀಸರು ತಡೆದಿದ್ದು, ಬೈಕ್‌ನಲ್ಲಿ ಸೀ ಲಿಂಕ್‌ನಲ್ಲಿ ಹೋಗುವುದಕ್ಕೆ ನಿಷೇಧವಿದೆ ಎಂದು ಹೇಳಿದ್ದರು' ಎಂದು ತಿಳಿಸಿದ' ಎಂದಿದ್ದಾರೆ.

'ನಮ್ಮಬ್ಬರಿಗೂ ವಾಪಾಸ್‌ ಬರುವಂತೆ ಪೊಲೀಸರು ಹೇಳಿದ್ದಾರೆ ಎಂದು ಕುನಾಲ್‌ ನಮಗೆ ಹೇಳಿದ. ಆದರೆ, ಟೋಲ್‌ ಬೂತ್‌ನಲ್ಲಿ ನಾವು ಯೂಟರ್ನ್‌ ಮಿಸ್‌ ಮಾಡಿಕೊಂಡಿದ್ದೆವು. ಇನ್ನು ರಸ್ತೆಯಲ್ಲಿ ಎರಡು-ಮೂರು ಕಾರುಗಳು ಮಾತ್ರವೇ ಇದ್ದವು. ಹಾಗಾಗಿ ಕಿರಣ್‌ ಅಲ್ಲಿಯೇ ಬೈಕ್‌ಅನ್ನು  ತಿರುಗಿಸಿ ರಾಂಗ್‌ ಸೈಡ್‌ನಲ್ಲಿಯೇ 20-30 ಮೀಟರ್‌ ಹೋಗಿ, ರಸ್ತೆಯ ಸರಿಯಾದ ಭಾಗಕ್ಕೆ ಹೋಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದ' ಎಂದು ಮೇಹುಲ್‌ ತಿಳಿಸಿದ್ದಾರೆ.

ಗೂಗಲ್ ಮ್ಯಾಪ್ ನೋಡಿ ಡ್ರೈವ್ ಮಾಡೋ ಅಭ್ಯಾಸ ಇದೆಯಾ? ಹಾಗಾದ್ರೆ ಇದನ್ನು ಓದಿ!

'ನಾವು ಯು-ಟರ್ನ್‌ ಪಡೆದುಕೊಂಡ ಬಳಿಕ, ರಸ್ತೆಯ ಸರಿಯಾದ ಭಾಗಕ್ಕೆ ಸಾಗಿ ಟೋನ್‌ ನಾಕಾದ ಬಳಿ ಹೋಗುತ್ತಿದ್ದೆವು' ಎಂದು ಮೇಹುಲ್‌ ತಿಳಿಸಿದ್ದಾರೆ. ಆದರೆ, ಈ ಹಂತದಲ್ಲಿ ತಡೆದ ಬಾಂದ್ರಾ ಪೊಲೀಸರು ಬೈಕ್‌ ರೈಡ್‌ ಮಾಡುತ್ತಿದ್ದ ಕಿರಣ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ನರಹತ್ಯೆಯ ಪ್ರಯತ್ನ), 279 ಮತ್ತು 336 ಮತ್ತು ಮೋಟಾರು ವಾಹನ ಕಾಯಿದೆಯ184, 179, 190(2),3/181, 4(2)/177(ಎ) ಅಡಿಯಲ್ಲಿ ಬಂಧಿಸಿದ್ದಾರೆ.  ನನ್ನನ್ನು ತಡೆದ ಪೊಲೀಸ್ ಪೇದೆಯ ಸೂಚನೆ ಮೇರೆಗೆ ಕಿರಣ್ ಯು ಟರ್ನ್ ತೆಗೆದುಕೊಂಡಿದ್ದಾನೆ ಎಂದು ಕುನಾಲ್ ಈ ವೇಳೆ ಹೇಳಿದ್ದಾರೆ. ಆದರೆ, ಪೊಲೀಸರು ಇದನ್ನು ಕೇಳಿಲ್ಲ.

ಗೂಗಲ್ ಮ್ಯಾಪ್ ಬಳಸುವವರೇ ಎಚ್ಚರ... ಈ ದಾರಿ ಅಲ್ಲಿಗೆ ಹೋಗಲ್ಲ!

ಬಂಧಿತನಾಗಿದ್ದ ಕಿರಣ್‌ ಪಟೇಲ್‌ಗೆ ಸೆಷನ್ಸ್‌ ಕೋರ್ಟ್‌ 20 ಸಾವಿರ ರೂಪಾಯಿಯ ಬಾಂಡ್‌ ಮೇಲೆ ಜಾಮೀನು ಮಂಜೂರು ಮಾಡಿದೆ. ಆದರೆ, 20 ಸಾವಿರ ರೂಪಾಯಿ ಕಟ್ಟಲು ಹಣವಿಲ್ಲ. ಅದಕ್ಕಾಗಿ ಇದ್ದಿದ್ದ ಸಂಬಂಧಿಕರ ಬಳಿ ಕೇಳಿ ಹಣದ ವ್ಯವಸ್ಥೆ ಮಾಡುತ್ತಿದ್ದೇವೆ. ಪೊಲೀಸರು ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಮೊದಲು ಪೊಲೀಸ್ ಪೇದೆ ಆತನನ್ನು ಯು-ಟರ್ನ್ ತೆಗೆದುಕೊಳ್ಳುವಂತೆ ಮಾಡಿದ ನಂತರ ಪೊಲೀಸರು ಸೆಕ್ಷನ್ 308 ಅನ್ನು ಕೇಸ್‌ನಲ್ಲಿ ಸೇರಿಸಿದ್ದಾರೆ. ನಾವು ಒಮ್ಮೆ ನಮ್ಮ ಮನೆಗೆ ಭೇಟಿ ನೀಡಿ ಅವರ ಮಾವನ ಸ್ಥಿತಿಯನ್ನು ನೋಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಅವರು ಕರುಣೆ ತೋರಿಸಲಿಲ್ಲ, ” ಎಂದು ಕುನಾಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios