ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್, ಅಪ್ರಾಪ್ತೆಯ ಮೇಲಿನ ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಲುಕ್-ಔಟ್ ಸರ್ಕ್ಯುಲರ್ ಜಾರಿ ಮತ್ತು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ನಿರಾಕರಣೆಯ ನಂತರ ಈ ಬೆಳವಣಿಗೆ ನಡೆದಿದೆ.

ಹೈದರಾಬಾದ್ (ಮೇ.16): ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್, ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳದ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಆರೋಪಿ ಭಗೀರಥ್ ದೇಶ ಬಿಟ್ಟು ಓಡಿಹೋಗದಂತೆ ತಡೆಯಲು ಪೊಲೀಸರು ಅವರ ವಿರುದ್ಧ 'ಲುಕ್-ಔಟ್ ಸರ್ಕ್ಯುಲರ್' (LOC) ಜಾರಿಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದೇ ವೇಳೆ ತೆಲಂಗಾಣ ಹೈಕೋರ್ಟ್ ಕೂಡ ಆರೋಪಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ.

Add Asianetnews Kannada as a Preferred SourcegooglePreferred

17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ವಕೀಲರ ಮೂಲಕ ಭಗೀರಥ್ ಪೊಲೀಸರಿಗೆ ಶರಣಾಗಿದ್ದಾರೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, "ನನ್ನ ಮಗನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ, ಕಾನೂನಿನ ಮೇಲಿನ ಗೌರವದಿಂದಾಗಿ ನಾನು ನನ್ನ ಪುತ್ರ ಭಗೀರಥ್‌ನನ್ನು ತನಿಖೆಗಾಗಿ ವಕೀಲರ ಮೂಲಕ ಪೊಲೀಸರಿಗೆ ಒಪ್ಪಿಸಿದ್ದೇನೆ. ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಒಬ್ಬ ಸಾಮಾನ್ಯ ನಾಗರಿಕನಾಗಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಲೇಬೇಕು," ಎಂದು ಹೇಳಿದ್ದಾರೆ.

ತಮ್ಮ ಕುಟುಂಬವನ್ನು ರಾಜಕೀಯವಾಗಿ ಗುರಿ ಮಾಡಲಾಗುತ್ತಿದೆ ಮತ್ತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಅವರು, "ನನ್ನ ಮಗ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳಿದ್ದಾನೆ. ದೂರು ದಾಖಲಾದ ತಕ್ಷಣವೇ ಆತನನ್ನು ಪೊಲೀಸರಿಗೆ ಒಪ್ಪಿಸಲು ನಾವು ನಿರ್ಧರಿಸಿದ್ದೆವು. ಆದರೆ ವಕೀಲರನ್ನು ಸಂಪರ್ಕಿಸಿ, ನಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಮುಂದಿಟ್ಟಾಗ, ಈ ಕೇಸ್ ವಜಾಗೊಳ್ಳುತ್ತದೆ ಮತ್ತು ಖಂಡಿತ ಬೇಲ್ ಸಿಗುತ್ತದೆ ಎಂದು ಅವರು ಹೇಳಿದ್ದರಿಂದ ಶರಣಾಗತಿ ಪ್ರಕ್ರಿಯೆ ತಡವಾಯಿತು. ಕೋರ್ಟ್ ಆದೇಶ ಸೋಮವಾರ ಬರುವ ನಿರೀಕ್ಷೆ ಇದ್ದರೂ, ತನಿಖೆಗೆ ವಿಳಂಬವಾಗಬಾರದು ಎಂದು ನಾನೇ ಖುದ್ದಾಗಿ ಆತನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದೇನೆ. ನಮಗೆ ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ," ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್‌ನಿಂದ ಭಗೀರಥ್‌ಗೆ ಬಿಗ್ ಶಾಕ್

ಇನ್ನೊಂದೆಡೆ, ಬಂಧನದಿಂದ ತಪ್ಪಿಸಿಕೊಳ್ಳಲು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಭಗೀರಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್, ಶುಕ್ರವಾರ ರಾತ್ರಿ ಆತನಿಗೆ ಯಾವುದೇ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ. ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಭಗೀರಥ್‌ಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿತು.

ಏನಿದು ಪ್ರಕರಣ? ಬಾಲಕಿಯ ತಾಯಿಯ ಗಂಭೀರ ದೂರು

ಮೇ 8 ರಂದು 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಸೈಬರಾಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಭಗೀರಥ್ ತಮ್ಮ ಮಗಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪರಿಚಯಸ್ಥರ ಮೂಲಕ ಜೂನ್ 2025 ರ ಸುಮಾರಿಗೆ ಇವರಿಬ್ಬರ ಮಧ್ಯೆ ಪರಿಚಯವಾಗಿದ್ದು, ನಂತರ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಸಂಪರ್ಕ ಮುಂದುವರಿದಿತ್ತು. ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವುದಾಗಿ ನಂಬಿಸಿ ಭಗೀರಥ್ ಆಕೆಯ ಮೇಲೆ ಮಾನಸಿಕ ಒತ್ತಡ ಹೇರಿದ್ದ ಎನ್ನಲಾಗಿದೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ನಂತರ ಪೊಲೀಸರು ಮತ್ತಷ್ಟು ಕಠಿಣ ಪೋಕ್ಸೋ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರಿಸಿದ್ದಾರೆ.

ಕೋಟಿ ಕೋಟಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್!: ಭಗೀರಥ್ ಕೌಂಟರ್ ದೂರು

ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಭಗೀರಥ್, ಬಾಲಕಿಯ ಕುಟುಂಬದ ವಿರುದ್ಧವೇ ಕೌಂಟರ್ ದೂರು ದಾಖಲಿಸಿದ್ದು, ಅವರ ಮೇಲೂ ಎಫ್‌ಐಆರ್ ದಾಖಲಾಗಿದೆ. "ಬಾಲಕಿ ಮತ್ತು ಆಕೆಯ ಪೋಷಕರು ನನ್ನನ್ನು ಮದುವೆಯಾಗುವಂತೆ ತೀವ್ರ ಒತ್ತಡ ಹೇರಿದ್ದರು. ನಾನು ಅದನ್ನು ನಿರಾಕರಿಸಿದಾಗ, ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಹಣ ಬೇಡಿಕೆ ಇಟ್ಟರು. ಹೆದರಿ ನಾನು ಆರಂಭದಲ್ಲಿ ಬಾಲಕಿಯ ತಂದೆಗೆ 50,000 ರೂಪಾಯಿ ನೀಡಿದ್ದೆ. ಆದರೆ ನಂತರ ಅವರು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟರು. ಹಣ ನೀಡದಿದ್ದರೆ ಬಾಲಕಿಯ ತಾಯಿ ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ," ಎಂದು ಭಗೀರಥ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಸಚಿವ ಸ್ಥಾನದಿಂದ ವಜಾಗೊಳಿಸಲು ಪ್ರಧಾನಿಗೆ ಪತ್ರ

ಈ ಮಧ್ಯೆ, ತೆಲಂಗಾಣ ರಕ್ಷಣಾ ಸೇನಾ (TRS) ಅಧ್ಯಕ್ಷೆ ಕೆ. ಕವಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವರಾಗಿರುವ ಬಂಡಿ ಸಂಜಯ್ ಕುಮಾರ್ ಅವರು ಅಧಿಕಾರದಲ್ಲಿದ್ದರೆ ಅವರ ಪುತ್ರನ ಮೇಲಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣವೇ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.