ಆಸ್ಟ್ರೇಲಿಯಾದ ರೀತಿಯಲ್ಲಿ ಆಂಧ್ರಪ್ರದೇಶದಲ್ಲೂ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಲು ಅಧ್ಯಯನ ಮಾಡುತ್ತಿದ್ದೇವೆ. ಈ ಬಗ್ಗೆ ಕಠಿಣ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಗುರುವಾರ ಹೇಳಿದ್ದಾರೆ.
ಹೈದರಾಬಾದ್: ಆಸ್ಟ್ರೇಲಿಯಾದ ರೀತಿಯಲ್ಲಿ ಆಂಧ್ರಪ್ರದೇಶದಲ್ಲೂ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಲು ಅಧ್ಯಯನ ಮಾಡುತ್ತಿದ್ದೇವೆ. ಈ ಬಗ್ಗೆ ಕಠಿಣ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಗುರುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ
ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮವನ್ನು ಮನಗಂಡು ಆಸ್ಟ್ರೇಲಿಯಾ ಇತ್ತೀಚೆಗೆ 16 ವರ್ಷದ ಒಳಗಿನ ಮಕ್ಕಳಿಗೆ ಇದನ್ನು ನಿಷೇಧಿಸಿತ್ತು. ಈ ಬೆನ್ನಲ್ಲೇ ಆಂಧ್ರಪ್ರದೇಶವೂ ಈ ಕ್ರಮಕ್ಕೆ ಮುಂದಾಗಿದೆ.
ನಿರ್ದಿಷ್ಟ ವಯಸ್ಸಿನ ಒಳಗಿನ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಇರಬಾರದು
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಲೋಕೇಶ್, ‘ನಿರ್ದಿಷ್ಟ ವಯಸ್ಸಿನ ಒಳಗಿನ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಇರಬಾರದು. ಏಕೆಂದರೆ ಅವರಿಗೆ ತಾವು ಅಲ್ಲಿ ಏನನ್ನು ನೋಡುತ್ತಿದ್ದೇವೆ ಎಂಬುದು ಅರ್ಥವಾಗುವುದಿಲ್ಲ. ಒಂದು ರಾಜ್ಯವಾಗಿ, ನಾವು ಆಸ್ಟ್ರೇಲಿಯಾದ ಕಾನೂನನ್ನು ಅಧ್ಯಯನ ಮಾಡುತ್ತಿದ್ದೇವೆ. ಈ ಬಗ್ಗೆ ಬಲವಾದ ಕಾಯ್ದೆಯನ್ನು ರಚಿಸಬೇಕಾದ ಅಗತ್ಯವಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.


