ನವದೆಹಲಿ[ಫೆ.27]: ಭಾರತೀಯ ಭದ್ರತಾ ಪಡೆಗಳ ಮೇಲೆ ಹೇಗೆ ಎರಗಬೇಕು, ಬಾಂಬ್‌ ತಯಾರಿಸುವುದು ಹೇಗೆ, ಆತ್ಮಾಹುತಿ ಬಾಂಬ್‌ ದಾಳಿ ಮಾಡಲು ಏನೆಲ್ಲಾ ಮಾಡಬೇಕು, ಕಠಿಣ ಸಂದರ್ಭಗಳಲ್ಲಿ ಜೀವಿಸುವುದು ಹೇಗೆ ಎಂಬಿತ್ಯಾದಿ ಭಯಾನಕ ಕೌಶಲ್ಯಗಳನ್ನು ‘ಫೈವ್‌ಸ್ಟಾರ್‌ ಹೋಟೆಲ್‌’ನಂತಹ ಸೌಲಭ್ಯ ಹೊಂದಿದ ಪ್ರದೇಶದಲ್ಲಿ ಉಗ್ರರಿಗೆ ಕಲಿಸಲು ಅತ್ಯಂತ ಬೃಹತ್‌ ಶಿಬಿರವೊಂದು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದುವೇ- ಬಾಲಾಕೋಟ್‌.

ಗಡಿನಿಯಂತ್ರಣ ರೇಖೆ ಬಳಿ ಎಂದಿನಂತೆ ವಹಿವಾಟು!

ಇದು ಇರುವುದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಗ್ಗುಲಲ್ಲೇ. ಆದರೆ ಇದು ಪಾಕಿಸ್ತಾನದ ಖೈಬರ್‌ ಪಖ್ತೂಂಖ್ವಾ ಪ್ರದೇಶಕ್ಕೆ ಸೇರುತ್ತದೆ. ಅಮೆರಿಕದ ಸೀಲ್‌ ಕಮಾಂಡೋಗಳು ಅಲ್‌ಖೈದಾ ಉಗ್ರ ಸಂಘಟನೆಯ ನಾಯಕ ಒಸಾಮಾ ಬಿನ್‌ ಲಾಡೆನ್‌ನನ್ನು ಹೊಡೆದುಹಾಕಿದ ಅಬೋಟಾಬಾದ್‌ನಿಂದ ಬಾಲಾಕೋಟ್‌ಗೆ ಕೇವಲ 65 ಕಿ.ಮೀ. ಅಂತರ. ಕುನ್ಹಾರ್‌ ನದಿಯ ದಂಡೆಯಲ್ಲಿರುವ ಬಾಲಾಕೋಟ್‌ ಪ್ರಕೃತಿ ಸೌಂದರ್ಯ ಹೊಂದಿದ ಪ್ರದೇಶ. ಅಲ್ಲಿಂದ 20 ಕಿ.ಮೀ. ಸಾಗಿದರೆ ಬೆಟ್ಟದ ಮೇಲೆ ಸಿಗುವುದೇ ನೆತ್ತರು ಹರಿಸುವ ರಾಕ್ಷಸರ ಭದ್ರಕೋಟೆ. ಅರ್ಥಾತ್‌ ಉಗ್ರರ ಶಿಬಿರ.

ಬಾಲಾಕೋಟ್‌ ನಗರಕ್ಕೆ ಬಳಿ ಇರುವ ಈ ಶಿಬಿರ ಈಜುಕೊಳ, ನುರಿತ ಬಾಣಸಿಗರು ಸೇರಿದಂತೆ ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ಇರುವ ಸೌಲಭ್ಯಗಳನ್ನು ಹೊಂದಿದೆ. ಆ ಸಂಘಟನೆ ಈ ಸಂಘಟನೆ ಎಂಬ ಭೇದ ಇಲ್ಲಿಲ್ಲ. ಭಾರತದ ಮೇಲೆ ದಾಳಿ ನಡೆಸಲು ಉಗ್ರಗಾಮಿಗಳನ್ನು ಸೃಷ್ಟಿಸುವ ಕಾರ್ಖಾನೆಯಂತೆ ಈ ಶಿಬಿರ ಇದೆ. ಜೈಷ್‌ ಎ ಮೊಹಮ್ಮದ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಸೇರಿ ವಿವಿಧ ಸಂಘಟನೆಗಳ ಉಗ್ರರು ಇಲ್ಲಿ ತರಬೇತಿ ಪಡೆಯುತ್ತಾರೆ. ಅವರನ್ನು ಸನ್ನದ್ಧಗೊಳಿಸುವವರು ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿಗಳು. ಜೈಷ್‌ ಎ ಮೊಹಮ್ಮದ್‌ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಹಾಗೂ ಮತ್ತಿತರ ಉನ್ನತ ಭಯೋತ್ಪಾದಕರು ಪ್ರಚೋದನಾಕಾರಿ ಭಾಷಣ ಮಾಡಿ ಉಗ್ರರಲ್ಲಿ ಭಾರತ ವಿರೋಧಿ ರೋಷಾವೇಶಗಳನ್ನು ತುಂಬುತ್ತಾರೆ.

ಪೆಟ್ಟು ತಿಂದರೂ ಬುದ್ಧಿ ಕಲಿಯದ ಹೇಡಿ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ

ತರಬೇತಿ ಏನೇನು?

ಮೌಲಾನಾ ಮಸೂದ್‌ ಅಜರ್‌ ಬಂಧುಗಳು ಹಾಗೂ ಆತನ ಸಂಘಟನೆಯ ಕಾರ್ಯಕರ್ತರೆಲ್ಲಾ ತರಬೇತಿ ಪಡೆದಿದ್ದೇ ಇಲ್ಲಿ. ಜೈಷ್‌ ಎ ಮೊಹಮ್ಮದ್‌ ಆರಂಭವಾಗುವ ಮುನ್ನ ಅವರಿಗೆಲ್ಲಾ ಇದೇ ಶಿಬಿರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ದಾಳಿ ತಂತ್ರಗಳನ್ನು ಕಲಿಸಿಕೊಡಲಾಗಿತ್ತು. ಇದೇ ಶಿಬಿರದಲ್ಲೇ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರೂ ತರಬೇತಿ ಪಡೆದುಕೊಳ್ಳುತ್ತಾರೆ.

ಭಯೋತ್ಪಾದಕರಿಗೆ ಒಟ್ಟು ಮೂರು ರೀತಿಯ ತರಬೇತಿಗಳು ಇರುತ್ತವೆ. ಅದರಲ್ಲಿ ಮೂರನೆಯದ್ದು, ಅತ್ಯಾಧುನಿಕ ವಿಧಾನಗಳನ್ನು ಹೊಂದಿರುವ ‘ಡೌರಾ- ಎ- ಖಾಸ್‌’. ಸ್ಫೋಟಕ ತಯಾರಿ, ಶಸ್ತ್ರಾಸ್ತ್ರ ಬಳಕೆ, ಹೋರಾಟ ಕಣದ ಚಿತ್ರಣ, ಭದ್ರತಾ ಪಡೆಗಳ ಮೇಲಿನ ದಾಳಿ, ಬಾಂಬ್‌ ತಯಾರಿ, ಅದನ್ನು ಸೂಕ್ತ ಸ್ಥಳದಲ್ಲಿ ಹಾಕುವುದು, ಆತ್ಮಾಹುತಿ ಬಾಂಬ್‌ ದಾಳಿ, ಆತ್ಮಾಹುತಿ ದಾಳಿಗೆ ವಾಹನಗಳ ಬಳಕೆ, ಎತ್ತರದ ಪ್ರದೇಶಗಳು ಹಾಗೂ ಅತ್ಯಧಿಕ ಒತ್ತಡದ ಸ್ಥಳಗಳಲ್ಲಿ ಹೇಗೆ ಜೀವಿಸಬೇಕು ಎಂಬೆಲ್ಲಾ ತಾಂತ್ರಿಕ ಕೌಶಲ್ಯಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.

ಟ್ರೋಲ್ ಆಯ್ತು ಪಾಕಿಸ್ತಾನ, ಸಂಭ್ರಮಾಚರಣೆ ನಡುವೆ ನಗುವಿನ ಗುಳಿಗೆ

ಇದಲ್ಲದೇ ಕಟ್ಟರ್‌ ಧಾರ್ಮಿಕ ಬೋಧನೆಗಳ ಮೂಲಕ, ಉಗ್ರರನ್ನು ತಲೆಕೆಡಿಸಿ, ಅವರು ತಮ್ಮ ನಿರ್ಧಾರ ಬದಲಿಸದಂತೆ ಮಾಡಲಾಗುತ್ತದೆ. ತರಬೇತಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳೂ ಇಲ್ಲಿವೆ.

ಒಟ್ಟು 500ರಿಂದ 700 ಮಂದಿ ಒಟ್ಟಿಗೇ ಇಲ್ಲಿ ತಂಗಬಹುದಾದ ಸೌಲಭ್ಯವಿದೆ. ಅವರಿಗೆಲ್ಲಾ ಅಡುಗೆ ತಯಾರಿಸಲು ಹಾಗೂ ಸ್ಥಳದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಕಷ್ಟುಸಿಬ್ಬಂದಿ ಇದ್ದಾರೆ. ಉಗ್ರರ ವಿರಾಮಕ್ಕಾಗಿ ಈಜುಕೊಳವನ್ನೂ ನಿರ್ಮಿಸಲಾಗಿದೆ.