ಸುಪ್ರೀಂ ಕೋರ್ಟ್ ಕಲಾಪದ ವೇಳೆ ಗಲಾಟೆ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಬಲ್ ಪ್ರತಾಪ್ ಸಿಂಗ್ ಎಂಬಾತನೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ಕಳೆದ ವಾರ ಸುಪ್ರೀಂ ಕೋರ್ಟ್‌(Supreme court)ನಲ್ಲಿ ನಡೆದಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ಗಲಾಟೆ ಮಾಡಿದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಕಲಾಪಕ್ಕೆ ಅಡ್ಡಿಪಡಿಸಿ, ನ್ಯಾಯಾಧೀಶರಿಗೆ ಅವಾಚ್ಯವಾಗಿ ನಿಂದಿಸಿ, ಪೇಪರ್‌ಗಳನ್ನ ಕೋರ್ಟ್‌ನಲ್ಲಿ ತೂರಿದ್ದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ದೆಹಲಿ ಪೊಲೀಸರ ಪ್ರಕಾರ, ಜುಲೈ 10ರಂದು ಸುಪ್ರೀಂ ಕೋರ್ಟ್‌ನ ಕೋರ್ಟ್ ನಂಬರ್ 13ರಲ್ಲಿ ಈ ಘಟನೆ ನಡೆದಿದೆ. ಪ್ರಬಲ್ ಪ್ರತಾಪ್ ಮತ್ತು ಇತರರು vs ಉತ್ತರ ಪ್ರದೇಶ ಸರ್ಕಾರ' ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ನಡೆದ ಗಲಾಟೆ ಬಗ್ಗೆ ಸುಪ್ರೀಂ ಕೋರ್ಟ್‌ನ ಭದ್ರತಾ ಸಿಬ್ಬಂದಿಯೊಬ್ಬರು ದೂರು ನೀಡಿದ್ದು, ಅದರ ಆಧಾರದ ಮೇಲೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಲಕ್ನೋ ವಿಶ್ವವಿದ್ಯಾಲಯದ ಮೂರನೇ ವರ್ಷದ ಕಾನೂನು ವಿದ್ಯಾರ್ಥಿ ಪ್ರಬಲ್ ಪ್ರತಾಪ್ ಸಿಂಗ್ (24) ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಅರ್ಜಿದಾರನಾಗಿ ಖುದ್ದು ವಿಚಾರಣೆಗೆ ಹಾಜರಾಗಿದ್ದ.

ಎಫ್‌ಐಆರ್‌ನಲ್ಲಿ ಏನಿದೆ?

ಎಫ್‌ಐಆರ್ ಪ್ರಕಾರ, ಕೋರ್ಟ್ ಕಲಾಪ ನಡೆಯುವ ವೇಳೆ ಅರ್ಜಿದಾರನಾಗಿ ಹಾಜರಾಗಿದ್ದ ಆರೋಪಿ ಪ್ರಬಲ್ ಪ್ರತಾಪ್(Prabal pratap singh), ಉದ್ದೇಶಪೂರ್ವಕವಾಗಿಯೇ ಕಲಾಪಕ್ಕೆ ಅಡ್ಡಿಪಡಿಸಿದ್ದಾನೆ. ಅಸಭ್ಯ ಮತ್ತು ಅಸಂಸದೀಯ ಭಾಷೆ ಬಳಸಿ, ಕೋರ್ಟ್ ಹಾಲ್‌ನೊಳಗೆ ಪೇಪರ್‌ಗಳನ್ನು ಎಸೆದು ಗದ್ದಲ ಸೃಷ್ಟಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭದ್ರತಾ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಲು ಆರೋಪಿ ಪ್ರಬಲ್ ಪ್ರತಾಪ್‌ನನ್ನ ತಡೆಯಲು ಪ್ರಯತ್ನಿಸಿದಾಗ, ಆರೋಪಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದೂ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಎರಡನೇ ಆರೋಪಿ ಬಂಧನ, ಪ್ರಕರಣ ದಾಖಲು

ಈ ಘಟನೆಗೆ ಸಂಬಂಧಿಸಿದಂತೆ ಲಕ್ನೋ ವಿಶ್ವವಿದ್ಯಾಲಯದ ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಚಂದರ್ ಭಾನ್ (23) ಎಂಬಾತನನ್ನೂ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 132, 221, 224 ಮತ್ತು 3(5) ಹಾಗೂ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

(ಈ ವರದಿಯ ಹೆಡ್‌ಲೈನ್ ಹೊರತುಪಡಿಸಿ, ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಈ ಲೇಖನವನ್ನು ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)