ಒಂದೂವರೆ ವರ್ಷದ ಮಗು ಸೋಪು ನೀರು ತುಂಬಿದ ವಾಶಿಗ್ ಮಶೀನ್‌ಗೆ ಬಿದ್ದಿದೆ. 15 ನಿಮಿಷ ಸಾವು ಬದುಕಿನ ನಡುವೆ ಹೋರಾಡಿದೆ. ಪ್ರಜ್ಞೆ ತಪ್ಪಿದ್ದ ಮಗುವನ್ನು ಆಸ್ಪತ್ರೆ ದಾಖಲಿಸಿ ಒಂದು ತಿಂಗಳು ಚಿಕಿತ್ಸೆ ನೀಡಲಾಗಿದೆ.ಇದೀಗ ಮಗುವಿನ ಸ್ಥಿತಿ ಹೇಗಿದೆ?

ದೆಹಲಿ(ಫೆ.15) ಮಕ್ಕಳನ್ನು ನೋಡಲು ಎರಡು ಕಣ್ಣು ಸಾಲದು ಅನ್ನೋ ಮಾತಿದೆ. ಕಾರಣ ಕಣ್ಣು ತಪ್ಪಿದರೆ ಮಕ್ಕಳು ಎಲ್ಲಿ ಮಾಯವಾಗುತ್ತಾರೆ, ಏನು ಎಡವಟ್ಟು ಮಾಡುತ್ತಾರೆ ಅನ್ನೋದು ಊಹಿಸಲು ಅಸಾಧ್ಯ. ಹೀಗೆ ತಾಯಿ ಒಂದೇ ನಿಮಿಷ ರೂಮಿನಿಂದ ಹೊರಗಡೆ ಹೋಗಿದ್ದಾರೆ. ಅಷ್ಟರಲ್ಲೇ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಕುರ್ಚಿ ಹತ್ತಿ ವಾಶಿಂಗ್ ಮಶಿನ್ ಒಳಗೆ ಬಿದ್ದಿದೆ. ಸೋಪು ನೀರು ತುಂಬಿದ ವಾಶಿಂಗ್ ಮಶಿನ್‌ನಲ್ಲಿ 15 ನಿಮಿಷ ಸಾವು ಬದುಕಿನ ನಡುವೆ ಹೋರಾಡಿದೆ. ತಾಯಿ ಮನೆಯೊಳಗೆ ಬಂದು ಎಲ್ಲಾ ಕಡೆ ಮಗುವನ್ನು ಹುಡುಕಿದ್ದಾರೆ. ಕೊನೆಗೆ ವಾಶಿಂಗ್ ಮಶಿನ್‌ನಲ್ಲಿ ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಪ್ರಜ್ಞೆ ತಪ್ಪಿದ ಮಗು ಸರಿ ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಐಸಿಯು, ವಾರ್ಡ್ ಸೇರಿ ಸತತ ಒಂದು ತಿಂಗಳ ಚಿಕಿತ್ಸೆ ಬಳಿಕ ಮಗು ಚೇತರಿಸಿಕೊಂಡಿದೆ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ.

ಪತಿ ಕಚೇರಿ ಕೆಲಸಕ್ಕೆ ತೆರಳಿದ್ದಾರೆ. ಇತ್ತ ಒಂದೂವವರೆ ವರ್ಷದ ಮಗುವನ್ನು ನೋಡಿಕೊಳ್ಳುತ್ತಾ ತಾಯಿ ಮನೆಗೆಲಸ ಆರಂಭಿಸಿದ್ದಾರೆ. ಅಡುಗೆ ಕೆಲಸದ ಜೊತೆಗೆ ಬಟ್ಟೆ ಒಗೆಯಲು ವಾಶಿಂಗ್ ಮಶೀನ್‌ ತೆರೆದಿದ್ದಾರೆ. ಸೋಪು ತುಂಬಿದ ನೀರು ವಾಶಿಂಗ್ ಮಶೀನ್ ತುಂಬಿಕೊಂಡಿದೆ. ಇದೇ ವೇಳೆ ಯಾವುದೋ ಕಾರಣಕ್ಕೆ ಎರಡು ನಿಮಿಷ ಮನೆ ಹೊರಗಡೆ ಬಂದಿದ್ದಾರೆ. ಮತ್ತೆ ಮನೆ ಒಳಗೆ ಬಂದಾಗ ಮಗು ನಾಪತ್ತೆ. ಎಲ್ಲಾ ಕಡೆ ಹುಡುಕಿದ್ದಾರೆ. ಮಗುವಿನ ಸುಳಿವಿಲ್ಲ. ಸದ್ದಿಲ್ಲ. ತಾಯಿ ಗಾಬರಿಯಾಗಿದ್ದಾರೆ. ಹುಡುಕಾಟ ತೀವ್ರಗೊಳಿಸಿದ್ದಾರೆ. ಸರಿಸುಮಾರು 15 ನಿಮಿಷ ಆಗಿ ಹೋಗಿದೆ. ಅಚಾನಕ್ಕಾಗಿ ವಾಶಿಂಗ್ ಮಶೀನ್ ಇಣುಕಿ ನೋಡಿದಾಗ ಸೋಪು ನೀರಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗು ಪತ್ತೆಯಾಗಿದೆ. 

Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!

ತಕ್ಷಣ ಮಗುವನ್ನು ಎತ್ತಿ ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಗುವಿನ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಉಸಿರಾಟ ಭಾಗಶಃ ನಿಂತಿತ್ತು. ದೇಹದೊಳಗೆ ಸೋಪು ನೀರು ತುಂಬಿತ್ತು. ಮಗುವಿನ ಪರಿಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ಐಸಿಯುಗೆ ಸೇರಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ವೆಂಟಿಲೇಟರ್ ಮೂಲಕ ಚಿಕಿತ್ಸೆ ಆರಂಭಗೊಂಡಿತ್ತು. ಆದರೆ ಸತತ 7 ದಿನ ಮಗು ಕೋಮಾಗೆ ಜಾರಿತ್ತು. ವೈದ್ಯರು ಕೂಡ ಪೋಷಕರಿಗೆ ಯಾವುದೇ ಭರವಸೆ ನೀಡಿರಲಿಲ್ಲ. 7ನೇ ದಿನ ಮಗು ಕೋಮಾದಿಂದ ಮರಳಿದೆ. ಬಳಿಕ ತಾಯಿಯ ಗುರುತು ಹಿಡಿದಿದೆ. ಪೋಷಕರಿಗೆ ಹೋದ ಜೀವ ಬಂದಂತಾಗಿದೆ.

ಕೋಮಾದಿಂದ ಮರಳಿದ ಬಳಿಕ 12 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಮಗು ಚೇತರಿಸಿಕೊಂಡಿದೆ. ಇದೀಗ ಮಗು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಈ ಕುರಿತು ಪ್ರತಿಕ್ರೆಯ ನೀಡಿರುವ ಆಸ್ಪತ್ರೆ ವೈದ್ಯರು, ಮಗುವನ್ನು ಆಸ್ಪತ್ರೆ ದಾಖಲಿಸುವ ಮೊದಲೇ ಕೋಮಾಗೆ ಜಾರಿತ್ತು. ಮಗುವಿನ ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ. ಪುಟ್ಟ ಮಗುವಿನ ದೇಹ ತುಂಬ ಸೋಪು ನೀರು ತುಂಬಿತ್ತು. ಉಸಿರಾಟವೂ ಬಹುತೇಕ ನಿಂತಿತ್ತು. ನಾಡಿ ಮಿಡಿತ ಮಾತ್ರ ಕೇಳಿಸುತ್ತಿತ್ತು. ಮಗುವಿನ ಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯವಾಗಿತ್ತು. ಆದರೆ ಪವಾಡ ಸದೃಶ್ಯ ಮಗು ಚಿಕಿತ್ಸಗೆ ಸ್ಪಂದಿಸಲು ಆರಂಭಿಸಿತು. 24 ಗಂಟೆಗಳ ಬಳಿಕ ಮಗು ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಅತೀ ದೊಡ್ಡ ತಿರುವು ನೀಡಿತು ಎಂದಿದ್ದಾರೆ. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಒಂದು ನಿಮಿಷದಲ್ಲಿ ನಡೆದ ಘಟನೆ ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಹೊಡೆತ ನೀಡಿದೆ. 

ದೆಹಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ 1 ತಿಂಗಳ ಪುಟ್ಟ ಕಂದಮ್ಮನ ಅಪಹರಣ!