ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!
ಬಾಬ್ರಿ ಮಸೀದಿ ಧ್ವಂಸ ಪ್ರಕರಣ| 32 ಆರೋಪಿಗಳು ನಿರ್ದೋಷಿಗಳು| ತೀರ್ಪು ಪ್ರಕಟಿಸಿದ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ
ಅಯೋಧ್ಯೆ(ಸೆ.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿರುವ ಲಕ್ನೋನ ಸಿಬಿಐ ಕೋರ್ಟ್ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯವಲ್ಲ, ಕ್ರಿಮಿನಲ್ ಪಿತೂರು ನಡೆದಿಲ್ಲ ಎಂದಿದೆ. ಈ ಮೂಲಕ ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿದೆ.
ಎರಡು ಸಾವಿರ ಪುಟಗಳ ತೀರ್ಪು ಬರೆದಿರುವ ಜಡ್ಜ್ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ. ಈ ಮೂಲಕ ರಾಜಕೀಯ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಈ ಘಟನೆ ಸಂಭವಿಸಿ 28 ವರ್ಷಗಳ ಬಳಿಕ ಹಾಗೂ ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ ಒಂದೇ ವರ್ಷದಲ್ಲಿ ಪ್ರಕಟವಾಗಿದೆ.
ಈ ಪ್ರಕರಣದ ವಿಚಾರಣೆ ಸಂಬಂಧ ಎಲ್‌ಕೆ ಅಡ್ವಾಣಿ ಈವರೆಗೂ ಒಟ್ಟು 1055 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮಸೀದಿ ದ್ವಂಸ ಮಾಡುವ ಉದ್ದೇಶ ನಮಗೆ ಇರಲೇ ಇಲ್ಲ. ಕರಸೇವಕರು ಸಾಂಕೇತಿಕವಾಗಿ ಪ್ರತಿಭಟಿಸುತ್ತಿದ್ದರು ಎಂದು ಅವರು ಈ ವೇಳೆ ಹೇಳಿದ್ದರು. ಇನ್ನು ಈ ಪ್ರಕರಣ ಸಂಬಂಧ ಸಿಬಿಐ 351 ಮಂದಿ ಸಾಕ್ಷ್ಯಿಗಳು, 600 ದಾಖಲೆಗಳನ್ನು ಹಾಗೂ 60 ವಿಡಿಯೋಗಳನ್ನು ಸಿಬಿಐ ನೀಡಿತ್ತು. ಇವುಗಳಲ್ಲಿ ಸಾಕ್ಷ್ಯಗಳಾಗಿ ನೀಡಿರುವ ವಿಡಿಯೋಗಳು ತಿರುಚಲಾಗಿದೆ ಎಂದು ಹೇಳಲಾಗಿದೆ.
ರಾಮ ಮಂದಿರಕ್ಕೆ ಬೇಕಿರುವ ಕಲ್ಲಿಗೆ ರಾಜಸ್ಥಾನದಲ್ಲಿ ನಿಷೇಧ
ಸಾವಿರಾರು ಕರಸೇವಕರು ಧ್ವಂಸ ಮಾಡಿರುವ ಬಾಬ್ರಿ ಮಸೀದಿ ಪ್ರಕರಣದಲ್ಲಿ ಒಟ್ಟಾರೆ 49 ಆರೋಪಿಗಳಿದ್ದು, ಇದರಲ್ಲಿ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ತಂದೆ ಬಾಳಾ ಠಾಕ್ರೆ, ಗಿರಿರಾಜ್ ಕಿಶೋರ್, ವಿಷ್ಣು ಹರಿ ದಾಲ್ಮಿಯಾ ಸೇರಿದಂತೆ 17 ಮಂದಿ ಸಾವಿಗೀಡಾಗಿದ್ದು, ಉಳಿದ 32 ಮಂದಿ ಜೀವಂತವಾಗಿದ್ದಾರೆ. ಹೀಗಾಗಿ ಈ ತೀರ್ಪು ಪ್ರಕಟವಾಗುವ ದಿನ ಹಾಲಿ ಇರುವ 32 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಇದರ ಅನ್ವಯ ಆರು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರೆ, ಇನ್ನುಳಿದ 26 ಆರೋಪಿಗಳು ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಷ್ಟೆ ದೊಡ್ಡ ಮಸೀದಿ ನಿರ್ಮಾಣ
ಕಳೆದ ವರ್ಷದ ನವೆಂಬರ್‌ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಪೂರ್ಣವಾಗಿ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಆದರೆ, 16ನೇ ಶತಮಾನದ ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ್ದನ್ನು ತಪ್ಪು ಎಂದು ಸಾರಿತ್ತು. ಅಲ್ಲದೆ, ಈ ಕುರಿತಾದ ವಿಚಾರಣೆಯನ್ನು ನಡೆಸಿ ಸೆ.30ರ ಒಳಗಾಗಿ ತೀರ್ಪು ನೀಡಬೇಕು ಎಂದು ಸಿಬಿಐ ಕೋರ್ಟ್‌ಗೆ ನಿರ್ದೇಶನ ನೀಡಿತ್ತು. ಆ ಪ್ರಕಾರ, ಆರೋಪಿಗಳ ವಿರುದ್ಧ ಸಿಬಿಐ ಒದಗಿಸಿರುವ 350 ಸಾಕ್ಷಿದಾರರು ಮತ್ತು 600 ದಾಖಲಾತಿಗಳನ್ನು ಪರಿಶೀಲಿಸಿ, ನ್ಯಾಯಾಧೀಶ ಯಾದವ್ ಅವರು ಅಂತಿಮ ತೀರ್ಪು ಬರೆಯವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದರು.
"