ರಾಮ ಮಂದಿರಕ್ಕೆ ಬೇಕಿರುವ ಕಲ್ಲಿಗೆ ರಾಜಸ್ಥಾನದಲ್ಲಿ ನಿಷೇಧ
ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಿಷೇಧಿಸಿದ ರಾಜಸ್ಥಾನ ಸರಕಾರ, ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ, ಸಾಧುಗಳ ಆಕ್ರೋಶ
ನವದೆಹಲಿ (ಸೆ.18): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾದ ಬೆನ್ನಲ್ಲೇ, ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ಥಾನ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗಣಿಗಾರಿಕೆ ನಿಷೇಧದಿಂದ ಅಡ್ಡಿ ಆಗುವ ಆತಂಕ ಎದುರಾಗಿದೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬನ್ಶಿ ಪಹಾರ್‌ಪುರ ಗಣಿಯಲ್ಲಿ ಈ ಕಲ್ಲುಗಳು ಲಭ್ಯವಾಗುತ್ತವೆ. ಆದರೆ ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಗುಲಾಬಿ ಕಲ್ಲುಗಳ ಗಣಿಗಾರಿಕೆಗೆ ರಾಜಸ್ಥಾನ ಗಣಿ ಇಲಾಖೆ ನಿಷೇಧ ಹೇರಿದೆ. ಜೊತೆಗೆ ಗುಲಾಬಿ ಕಲ್ಲುಗಳನ್ನು ಹೊತ್ತು ಸಾಗುತ್ತಿದ್ದ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಗುಲಾಬಿ ಕಲ್ಲುಗಳ ಗಣಿಗಾರಿಕೆಗೆ ಸರ್ಕಾರ ಅಧಿಕೃತ ಅದೇಶ ಹೊರಡಿಲ್ಲ. ಹೀಗಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಕಲ್ಲಿನ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜಸ್ಥಾನ ಸರ್ಕಾರ ಗುಲಾಬಿ ಕಲ್ಲುಗಳ ಗಣಿಗಾರಿಕೆಗೆ ನಿಷೇಧ ಹೇರಿರುವುದಕ್ಕೆ ಸಾಧು ಸಂತರು ಹಾಗೂ ವಿಶ್ವಹಿಂದೂ ಪರಿಷದ್‌ನ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಈ ಕಲ್ಲುಗಳ ಅಗತ್ಯವಿರುವುದುರಿಂದ ಆದಷ್ಟುಶೀಘ್ರ ನಿಷೇಧ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮುಗಿದ ಪಿತೃಪಕ್ಷ, ರಾಮ ಮಂದಿರ ನಿರ್ಮಾಣ ಕಾರ್ಯ ಶುರು
ಲಖನೌ: ಪಿತೃಪಕ್ಷ ಮುಗಿದಿದ್ದು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ, ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಮಂದಿರ ನಿರ್ಮಾಣ ಕಾರ್ಯ ಸುಮಾರು 100 ಕೆಲಸಗಾರರೊಂದಿಗೆ ಆರಂಭವಾಗಲಿದೆ. ಪ್ರಸಿದ್ಧ ಲಾರ್ಸೆನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪನಿ ಭವ್ಯವಾದ ದೇಗುಲ ನಿರ್ಮಿಸಿಕೊಡಲಿದೆ. ಅಡಿಪಾಯಕ್ಕೆ ಕೆಲಸ ಮಾಡುವ 100 ಕಾರ್ಮಿಕರಿಗೆ ಕೊರೋನಾ ಟೆಸ್ಟ್ ನಡೆಸಿ, ನೆಗೆಟಿವ್ ಇರುವವರನ್ನು ಮಾತ್ರ ರಾಮಜನ್ಮಭೂಮಿಯ ಆವರಣದೊಳಗೆ ಬಿಡಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ರಾಮಜನ್ಮಭೂಮಿಯ ಆವರಣದಲ್ಲಿ 12,879 ಚದರ ಮೀಟರ್ ಪ್ರದೇಶದಲ್ಲಿ ದೇಗುಲ ನಿರ್ಮಿಸಲು ನೀಲನಕ್ಷೆ ರೂಪಿಸಲಾಗಿದೆ. ಯಾವುದೇ ಶುಲ್ಕ ಪಡೆಯದೆ ದೇಗುಲ ನಿರ್ಮಿಸಲು ಎಲ್ ಅಂಡ್ ಟಿ ಮುಂದೆ ಬಂದಿದೆ. ದೇಗುಲದ ತಳಪಾಯ ನಿರ್ಮಿಸಲು 100 ಅಡಿ ಆಳದಲ್ಲಿ 1200 ಕಂಬಗಳನ್ನು ಮಲಗಿಸಲಾಗುತ್ತದೆ. ಇವು ಕಲ್ಲಿನ ಕಂಬಗಳಾಗಿವೆ. ತಳಪಾಯಕ್ಕೆ ಕಬ್ಬಿಣ ಬಳಸದಿರಲು ನಿರ್ಧರಿಸಲಾಗಿದೆ. ಈ ಕಂಬಗಳ ಮೇಲೆ ಇನ್ನೊಂದು ಹಂತದ ಅಡಿಪಾಯ ಹಾಕಲಾಗುತ್ತದೆ. ಕನಿಷ್ಠ 1500 ವರ್ಷ ಬಾಳಿಕೆ ಬರುವ ತಳಪಾಯ ಹಾಗೂ ಅದರ ಮೇಲೆ 1000 ವರ್ಷ ಬಾಳಿಕೆ ಬರುವ ದೇಗುಲ ನಿರ್ಮಿಸಲು ಎಲ್ ಅಂಡ್ ಟಿ ಕಂಪನಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಷ್ಟೇ ದೊಡ್ಡ ಮಸೀದಿ ನಿರ್ಮಾಣ
ದೀರ್ಘಕಾಲ ಬಾಳಿಕೆ ಬರುವ ಕಟ್ಟಡ ಹೇಗಿರಬೇಕು ಹಾಗೂ ಭೂಕಂಪ ಮತ್ತು ಗಾಳಿ-ಮಳೆಗೆ ಜಗ್ಗದಂತಹ ದೇಗುಲವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ಯೋಜಿಸಲು ಸೆಂಟ್ರಲ್ ಬಿಲ್ಡಿಂಗ್ ರೀಸಚ್‌ರ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ)ನ ತಜ್ಞರು ಹಾಗೂ ರೂರ್ಕಿ ಮತ್ತು ಮದ್ರಾಸ್ ಐಐಟಿಯ ವಿಜ್ಞಾನಿಗಳನ್ನು ಕರೆತರಲಾಗಿದೆ. ಎಲ್ ಅಂಡ್ ಟಿ ಕಂಪನಿ ಮುಂಬೈ, ಹೈದ್ರಾಬಾದ್ ಮುಂತಾದ ಕಡೆಗಳಿಂದ ಅಗತ್ಯ ಯಂತ್ರೋಪಕರಣಗಳನ್ನು ತರಿಸುತ್ತಿದೆ ಎಂದು ಹೇಳಲಾಗಿದೆ.