ಕೆಲವು ದಿನಗಳಿಂದ ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕಳ್ಳತನ ವಿಚಾರ ಭಾರೀ ಸುದ್ದಿಯಲ್ಲಿದೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಕಳ್ಳನೊಬ್ಬನ ಐಷಾರಾಮಿ ಜೀವನ ಹೇಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಹಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಮುಖ್ಯ ಆರೋಪಿ ಅವಿನಾಶ್ ಶುಕ್ಲ ತಾನು ಕದ್ದ ಹಣವನ್ನು ಐಷಾರಾಮಿ ಜೀವನಕ್ಕಾಗಿ ಹೇಗೆ ಬಳಸಿಕೊಂಡಿದ್ದಾನೆ ಎಂಬ ಬಗ್ಗೆ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ.
19 ಲಕ್ಷ ರೂಪಾಯಿಗಳ ಖರ್ಚಿನ ವಿವರ! ಕಾಣಿಕೆ ಪೆಟ್ಟಿಗೆಯಿಂದ ಕಳ್ಳತನವಾದ ಒಟ್ಟು ಮೊತ್ತ ಕೋಟ್ಯಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದ್ದರೂ, ಆರೋಪಿ ಅವಿನಾಶ್ ಶುಕ್ಲ ತಾನು ಸುಮಾರು 19 ರಿಂದ 20 ಲಕ್ಷ ರೂಪಾಯಿಗಳನ್ನು ತನ್ನ ಕುಟುಂಬ, ಸ್ನೇಹಿತರು ಮತ್ತು ಗೆಳತಿಗಾಗಿ ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗೆಳತಿಗೆ ಐಫೋನ್, ಅಣ್ಣನ ಮದುವೆಗೆ ಹಣ
ಅದ್ದೂರಿ ಮದುವೆ: ತನ್ನ ಅಣ್ಣನ ಮದುವೆಗಾಗಿ ಈತ ಸುಮಾರು 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ತನ್ನ ಗೆಳತಿಗೆ ಬೆಲೆಬಾಳುವ ಐಫೋನ್ (iPhone) ಗಿಫ್ಟ್ ನೀಡಿದ್ದಲ್ಲದೆ, ಅವಳ ಬ್ಯಾಂಕ್ ಖಾತೆಗೆ ಬರೋಬ್ಬರಿ 2.5 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾನೆ. ಇನ್ನೊಬ್ಬ ಸಹೋದರನಿಗೆ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ.
ತಾನು ಕದ್ದ ಹಣದಲ್ಲಿ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಐಷಾರಾಮಿ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಖರ್ಚು ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಮೂಲಗಳ ಪ್ರಕಾರ ಅತಿ ಹೆಚ್ಚು ಹಣ ಕದ್ದವನೀತನೇ! ಪೊಲೀಸ್ ದಾಖಲೆಗಳ ಪ್ರಕಾರ, ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಎಂಟು ಮಂದಿ ಶಂಕಿತರಲ್ಲಿ ಅವಿನಾಶ್ ಶುಕ್ಲನೇ ಅತಿ ಹೆಚ್ಚು ಹಣವನ್ನು ಮನೆಗೆ ಕೊಂಡೊಯ್ದಿದ್ದಾನೆ. ಈತ ಸುಮಾರು 20 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ಕಾಣಿಕೆ ಎಣಿಕೆ ಮಾಡುವ ಎಂಟು ಸಿಬ್ಬಂದಿಗಳ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಪೊಲೀಸರು ಈಗ ಇವರೆಲ್ಲರ ಬ್ಯಾಂಕ್ ಖಾತೆಗಳು, ಆರ್ಥಿಕ ವಹಿವಾಟುಗಳು ಮತ್ತು ಇತ್ತೀಚೆಗೆ ಖರೀದಿಸಿದ ಆಸ್ತಿಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಭಕ್ತರು ಭಕ್ತಿಯಿಂದ ಅರ್ಪಿಸಿದ ಕಾಣಿಕೆ ಹಣವನ್ನು ವೈಯಕ್ತಿಕ ಸುಖಕ್ಕಾಗಿ ಬಳಸಿಕೊಂಡಿರುವುದು ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.


