* ಬಹುನಿರೀಕ್ಷಿತ ಅಯೋಧ್ಯೆಯಲ್ಲಿ ರಾಮಮಂದಿರ ದೇಗುಲ* ಅಯೋಧ್ಯೆ, ರಾಮ ಮಂದಿರದಲ್ಲಿ ಭಕ್ತರ ದರ್ಶನಕ್ಕೆ ಮುಹೂರ್ತ ಫಿಕ್ಸ್ * 2024ರ ಲೋಕಸಭಾ ಚುನಾವಣೆಗೂ ಮುನ್ನ ತೆರೆಯುತ್ತೆ ದೇಗುಲ ದ್ವಾರ

ನವದೆಹಲಿ(ಆ.05): ಬಹುನಿರೀಕ್ಷಿತ ಅಯೋಧ್ಯೆಯಲ್ಲಿ ರಾಮಮಂದಿರ ದೇಗುಲವು 2023ರ ಡಿಸೆಂಬರ್‌ ವೇಳೆಗೆ ಭಕ್ತರ ದರ್ಶನಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಇದು 2024ರ ಲೋಕಸಭಾ ಚುನಾವಣೆಗೂ ಮುನ್ನ ತನ್ನ ಬಹುದೊಡ್ಡ ಚುನಾವಣಾ ಪ್ರಣಾಳಿಕೆಯನ್ನು ಈಡೇರಿಸುವ ಬಿಜೆಪಿಯ ಸಂಕಲ್ಪದ ಹಾದಿಯಲ್ಲೇ ಇದೆ.

2020ರ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದರು. ಗುರುವಾರ ಈ ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬಲಿದೆ. ಅದರ ಬೆನ್ನಲ್ಲೇ, ದೇಗುಲ ಭಕ್ತರ ದರ್ಶನಕ್ಕೆ ಮುಕ್ತವಾಗುವ ಮೊದಲ ಸುದ್ದಿಯೋ ಹೊರಬಿದ್ದಿದೆ.

ರಾಮ ಮಂದಿರದ ಮೊದಲ ಅಂತಸ್ತು 2023ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ರಾಮನ ಮೂರ್ತಿಯನ್ನು ಈಗಿರುವ ತಾತ್ಕಾಲಿಕ ಕಟ್ಟಡದಿಂದ ಭವ್ಯ ರಾಮ ಮಂದಿರಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲದೇ ಭಕ್ತರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಮ ಮಂದಿರದ ಸಂಪೂರ್ಣ ಆವರಣ 2025ರಲ್ಲಿ ಪೂರ್ಣಗೊಳ್ಳಲಿದೆ. ಮುಖ್ಯ ಮಂದಿರದ ಜೊತೆಗೆ ಮಂದಿರದ ಆವರಣದಲ್ಲಿ ಡಿಜಿಟಲ್‌ ಮ್ಯೂಸಿಯಂ ಹಾಗೂ ಸಂಶೋಧನಾ ಕೇಂದ್ರ ತಲೆ ನಿರ್ಮಾಣ ಆಗಲಿದೆ. ಮಂದಿರ ನಿರ್ಮಾಣಕ್ಕೆ ಕರ ಸೇವಕ್‌ಪುರಂನಲ್ಲಿರುವ ಶೇ.70ರಷ್ಟುಕಲ್ಲುಗಳನ್ನು ಬಳಕೆ ಮಾಡಿಕೊಲ್ಳಲಾಗುತ್ತದೆ. ದೇಗುಲ ನಿರ್ಮಾಣಕ್ಕೆ ಉಕ್ಕು ಅಥವಾ ಇಟ್ಟಿಗೆ ಬಳಕೆ ಮಾಡುವುದಿಲ್ಲ ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಭೂಮಿಪೂಜೆಯಾಗಿ ಒಂದು ವರ್ಷ:

ಅಯೋಧ್ಯೆ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆಯಾಗಿ ಇಂದಿಗೆ ಒಂದು ವರ್ಷ. ಈ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು, ಅಯೋಧ್ಯೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖುದ್ದಾಗಿ ಹಾಜರಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಪೂಜಾ ಕಾರ್ಯಕ್ರಮಗಳೂ ನಡೆಯಲಿವೆ ಎನ್ನಲಾಗಿದೆ.