ರಾಮ ಲಲ್ಲಾಗೆ ಹೊಸ ಹೆಸರಿಟ್ಟ ಪ್ರಾಣಪ್ರತಿಷ್ಠೆ ನೆರವೇರಿಸಿದ ಪ್ರಧಾನ ಅರ್ಚಕ!
ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಈಗಾಗಲೇ ಭಕ್ತರು ರಾಮ ಮಂದಿರ ದರ್ಶನ ಪಡೆಯಲು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿ ಕೋಟ್ಯಾಂತರ ಹಿಂದೂಗಳ ಕನಸು ನನಸು ಮಾಡಿದ್ದಾರೆ. ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ರಾಮ ಲಲ್ಲಾ ವಿಗ್ರಹ ಹೊಸ ಹೆಸರಿನಿಂದ ರಾಮ ಭಕ್ತರ ಹೃದಯಲ್ಲಿ ಅಚ್ಚೊತ್ತಲಿದೆ ಎಂದು ಪ್ರಧಾನ ಅರ್ಚಕರು ಹೇಳಿದ್ದಾರೆ. ಹಾಗಾದರೆ ರಾಮ ಲಲ್ಲಾನ ಹೊಸ ಹೆಸರೇನು?
ಆಯೋಧ್ಯೆ(ಜ.23) ಭವ್ಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ರಾಮ ಲಲ್ಲಾ ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದಾರೆ. ಸಾರ್ವಜನಿಕ ಮುಕ್ತವಾದ ಒಂದೇ ದಿನ 3 ಲಕ್ಷಕ್ಕೂ ಅಧಿಕ ಭಕ್ತರು ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನವರಿ 22ರ ಶುಭಮುಹೂರ್ತದಲ್ಲಿ ರಾಮ ಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. ಅರ್ಚಕ ಅರುಣ್ ದೀಕ್ಷಿತ್ ಮಾರ್ಗದರ್ಶನದಲ್ಲಿ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹ ರಾಮ ಲಲ್ಲಾ ಹೆಸರಿನಿಂದ ಅಲ್ಲ, ಬಾಲಕ ರಾಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
1949ರಲ್ಲಿ ಪ್ರತ್ಯಕ್ಷ ಗೊಂಡ ಹಾಗೂ ಇದುವರೆಗೆ ಆಯೋಧ್ಯೆಯಲ್ಲಿ ಪೂಜಿಸಲ್ಪಡುತ್ತಿದ್ದ ರಾಮ ಲಲ್ಲಾನನ್ನೂ ಗರ್ಭಗುಡಿಯಲ್ಲಿ ಪ್ರತಿಷ್ಛಾಪಿಸಲಾಗಿದೆ. ರಾಮ ಲಲ್ಲಾ ಹಾಗೇ ಇರಲಿದ್ದಾರೆ. ಹೊಸ ವಿಗ್ರಹ 5 ವರ್ಷದ ಬಾಲಕ ರಾಮನಾಗಿರುವ ಕಾರಣ ಬಾಲಕ ರಾಮ ಎಂದು ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
ಉಪವಾಸ ಅಂತ್ಯಗೊಳಿಸಲು ಏನಾದರು ಕೊಡುವುದಿದ್ದರೆ..,ಮೋದಿ ಮನವಿಗೆ ಭಾವುಕರಾದ ಸ್ವಾಮೀಜಿ!
ಬಾಲಕರಾಮನ ನೋಡಿದಾಗ ನನ್ನ ಕಣ್ಣುಗಳು ತುಂಬಿ ಬಂತು. ಮುಖದಲ್ಲಿನ ಮಂದಹಾಸ, ದೈವೀಕ ಕಳೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದನ್ನು ಅನುಭವಿಸಲು ಬಾಲಕ ರಾಮನ ದರ್ಶನ ಪಡಯಬೇಕು ಎಂದಿದ್ದಾರೆ. 50 ರಿಂದ 60 ಪ್ರಾಣಪ್ರತಿಷ್ಠೆಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೇರವೇರಿಸಿದ್ದೇನೆ. ಆದರೆ ರಾಮ ಮಂದಿರದ ಪ್ರಾಣಪ್ರತಿಷ್ಠೆ ಅಧ್ಯಾತ್ಮಿಕ ಹಾಗೂ ಸರ್ವೋಚ್ಚ ಎಂದು ವಾರಣಾಸಿ ಮೂಲದ ಅರ್ಚಕ ಅರುಣ್ ದೀಕ್ಷಿತ್ ಹೇಳಿದ್ದಾರೆ.
ಬಾಲಕ ರಾಮನಿಗೆ ತೊಡಿಸಿರುವ ಆಭರಣ, ಕಿರೀಟಿಗಳನ್ನು ವಾಲ್ಮೀಕಿ ರಾಮಾಯಣ, ರಾಮಚರಿತ ಮಾನಸ, ಆಧ್ಯಾತ್ಮ ರಾಮಾಯಣದಲ್ಲಿ ಅಧ್ಯಯನ ನಡೆಸಿ ವಿನ್ಯಾಸಗೊಳಿಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಟ್ರಸ್ಟ್ ಮಾಡಿದೆ. ಇಂದು ಒಂದೇ ದಿನ 3 ಲಕ್ಷಕ್ಕೂ ಅಧಿಕ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ಹಾಗೂ ಬಾಲಕ ರಾಮನ ದರ್ಶನ ಪಡೆದಿದ್ದಾರೆ.
ಆಯೋಧ್ಯೆಯಲ್ಲಿ SFJ ಉಗ್ರ ಸಂಘಟನೆಯ ಮೂವರು ಅರೆಸ್ಟ್, ಹೈ ಅಲರ್ಟ್ ಘೋಷಣೆ!
ಬಾಲಕ ರಾಮನ ಮೂರ್ತಿಯನ್ನು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. 6 ತಿಂಗಳ ಕಾಲ ವೃತದಂತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ವಿಗ್ರಹ ಕೆತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಾಲಕ ರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ನೇರವೇರಿಸಿದ್ದರು.