ಕೇವಲ 6 ದಿನದಲ್ಲಿ 19 ಲಕ್ಷ ಭಕ್ತರು ಆಯೋಧ್ಯೆ ರಾಮ ಮಂದಿರ ದರ್ಶನ, ಕೊರೆವ ಚಳಿಯಲ್ಲೂ ದಾಖಲೆ!
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ವಾರಗಳು ಉರುಳಿದೆ. ದಿನದಿಂದ ದಿನಕ್ಕೆ ರಾಮ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಆಯೋಧ್ಯೆಯಲ್ಲಿ ವ್ಯಾಪಾರ ವಹಿವಾಟು ದಿಡೀರ್ ಏರಿಕೆಯಾಗಿದೆ. ಇದೀಗ ಕಳೆದ 6 ದಿನದಲ್ಲಿ ಬರೋಬ್ಬರಿ 19 ಲಕ್ಷ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಪಡೆದಿದ್ದಾರೆ.
ಆಯೋಧ್ಯೆ(ಜ.29) ರಾಮ ಮಂದಿರ ಲೋಕಾರ್ಪಣೆಗೊಂಡು ವಾರಗಳು ಉರುಳಿದೆ. ಜನವರಿ 22ರಂದು ಪ್ರಧಾನಿ ಮೋದಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಮಾಡಿ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು. ಜನವರಿ 23ರಿಂದಲೇ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ಇದೀಗ ಕಳೆದ 6 ದಿನಗಳಲ್ಲಿ ಬರೋಬ್ಬರಿ 19 ಲಕ್ಷ ರಾಮ ಭಕ್ತರು ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಅತೀವ ಚಳಿಯ ನಡುವೆಯೂ ದಾಖಲೆ ಪ್ರಾಣದಲ್ಲಿ ಭಕ್ತರು ರಾಮ ದರ್ಶನ ಮಾಡಿದ್ದಾರೆ.
ಪ್ರತಿ ದಿನ ರಾಮ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಆಯೋಧ್ಯೆಯಲ್ಲಿ ಸ್ಥಳವಕಾಶ, ದರ್ಶನಗಳ ಕಾರಣದಿಂದ ಉತ್ತರ ಪ್ರದೇಶ ಸರ್ಕಾರ ರಾಮ ಭಕ್ತರ ಹರಿವು ನಿಯಂತ್ರಿಸಲು ಕೆಲ ಕ್ರಮಗಳನ್ನು ಕೈಗೊಂಡಿದೆ. ಉತ್ತರ ಪ್ರದೇಶ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ರಾಮ ಭಕ್ತರ ದರ್ಶನ ವಿವರ ಬಹಿರಂಗಪಡಿಸಿದೆ. ಜನವರಿ 23 ರಿಂದ ಜನವರಿ 28ರ ವರೆಗೆ 18.75 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ
ರಾಮಲಲ್ಲಾಗೆ ಚಿನ್ನವಜ್ರಾಭರಣದ ಸುರಿಮಳೆ: 2 ದಿನದಲ್ಲಿ 8 ಲಕ್ಷ ಜನರ ಭೇಟಿ : ಮೊದಲ ದಿನ 3.17 ಕೋಟಿ ಕಾಣಿಕೆ
ಜನವರಿ 23: 5 ಲಕ್ಷ ಭಕ್ತರ ದರ್ಶನ
ಜನವರಿ 24: 2.5 ಲಕ್ಷ ಭಕ್ತರ ದರ್ಶನ
ಜನವರಿ 25: 2 ಲಕ್ಷ ಭಕ್ತರ ದರ್ಶನ
ಜನವರಿ 26: 3.5 ಲಕ್ಷ ಭಕ್ತರ ದರ್ಶನ
ಜನವರಿ 27: 2.5 ಲಕ್ಷ ಭಕ್ತರ ದರ್ಶನ
ಜನವರಿ 28: 3.25 ಲಕ್ಷ ಭಕ್ತರ ದರ್ಶನ
ಜನವರಿ 23 ಹಾಗೂ ಜನವರಿ 24 ರಂದು ಆಯೋಧ್ಯೆ ರಾಮ ಭಕ್ತರಿಂದ ತುಂಬಿ ಹೋಗಿತ್ತು. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದರು. ಹೀಗಾಗಿ ಆಯೋಧ್ಯೆಗೆ ತೆರಳುವ ಉತ್ತರ ಪ್ರದೇಶದ ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ರದ್ದು ಮಾಡಲಾಗಿದೆ. ಸುಮಾರು 900ಕ್ಕೂ ಹೆಚ್ಚು ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು.
ಆಯೋಧ್ಯೆಯ ಎಲ್ಲಾ ಹೊಟೆಲ್, ರೂಂ ಬುಕ್ ಆಗಿವೆ. ಹೀಗಾಗಿ ಆಯೋಧ್ಯೆಗೆ ಆಗಮಿಸುವ ಭಕ್ತರಿಗೆ ರೂಂ ಸಿಗುವುದು ಕಷ್ಟವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಾಮ ಭಕ್ತರಿಗೆ ಎಲ್ಲಾ ವ್ಯವಸ್ಥೆಗೆ ಸೂಚನೆ ನೀಡಿದೆ.ರಾಮ ಭಕ್ತರು ಸರಾಗವಾಗಿ ಬಾಲಕ ರಾಮನ ದರ್ಶನ ಪಡೆಯಲು ಅನುವು ಮಾಡಿಕೊಡಲಾಗಿದೆ.
ಮಾರ್ಚ್‌ವರೆಗೆ ಆಯೋಧ್ಯೆ ಭೇಟಿ ಮಾಡದಂತೆ ಸಂಪುಟ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ!
ಇತ್ತೀಚೆಗೆ ರಾಮ ಮಂದಿರದ ಗರ್ಭಗುಡಿಗೆ ಕೋತಿಯೊಂದು ಪ್ರವೇಶಿಸಿದ ಪ್ರಸಂಗ ನಡೆದಿತ್ತು. ಅದೃಷ್ಟವಶಾತ್ ಯಾವುದೇ ತೊಂದರೆ ಕೊಡದೆ ಸುಮ್ಮನೆ ಹೊರಹೋಗಿದೆ. ಇದನ್ನು ಕಂಡ ಜನರು ‘ರಾಮನನ್ನು ಭೇಟಿ ಮಾಡಲು ಹನುಮ ಬಂದಿದ್ದಾನೆ’ ಎಂದು ವರ್ಣಿಸಿದ್ದಾರೆ. ದೇಗುಲದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ ಕೋತಿ, ನೇರವಾಗಿ ಗರ್ಭಗುಡಿ ಒಳಗೆ ಪ್ರವೇಶಿಸಿತು.