Asianet Suvarna News Asianet Suvarna News

ಸುಳಿಗಾಳಿಯಂತೆ ಪೂರೈಸಿದ ಮೋದಿಯವರ ಆಸ್ಟ್ರೇಲಿಯಾ ಪ್ರವಾಸ: ಮೋದಿ ಸುಳಿಗಾಳಿ ಎಬ್ಬಿಸಿದ ಧೂಳೆಷ್ಟು?

ಮೇ 23ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಿಡ್ನಿ ಭೇಟಿ ಅವರ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಭಾಗವಾಗಿತ್ತು. ಅವರು ಪಪುವಾ ನ್ಯೂ ಗಿನಿಯಾ ಪ್ರವಾಸ ಪೂರೈಸಿದ ಬಳಿಕ ಆಸ್ಟ್ರೇಲಿಯಾಗೆ ತೆರಳಿದ್ದರು. ಇದು ಒಂಬತ್ತು ವರ್ಷಗಳ ಬಳಿಕ ಆಸ್ಟ್ರೇಲಿಯಾಗೆ ಮೋದಿಯವರ ಮೊದಲ ಭೇಟಿಯಾಗಿತ್ತು.

Australian leader gives Indian Prime Minister a rock star welcome rav
Author
First Published May 30, 2023, 9:00 PM IST

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮೇ 23ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಿಡ್ನಿ ಭೇಟಿ ಅವರ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಭಾಗವಾಗಿತ್ತು. ಅವರು ಪಪುವಾ ನ್ಯೂ ಗಿನಿಯಾ ಪ್ರವಾಸ ಪೂರೈಸಿದ ಬಳಿಕ ಆಸ್ಟ್ರೇಲಿಯಾಗೆ ತೆರಳಿದ್ದರು. ಇದು ಒಂಬತ್ತು ವರ್ಷಗಳ ಬಳಿಕ ಆಸ್ಟ್ರೇಲಿಯಾಗೆ ಮೋದಿಯವರ ಮೊದಲ ಭೇಟಿಯಾಗಿತ್ತು.

ಮೋದಿಯವರಿಗೆ ಆಸ್ಟ್ರೇಲಿಯಾದಲ್ಲಿ ದೊರೆತ ಸ್ವಾಗತ ಏನನ್ನು ಬಿಂಬಿಸುತ್ತದೆ?

ಮೋದಿಯವರ ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸ ಪೂರ್ಣಗೊಂಡಿದೆ. ಅದರಲ್ಲೂ ಅವರ ಸಿಡ್ನಿ ಸಮಾರಂಭಕ್ಕೆ ಭಾರೀ ಪ್ರಚಾರ ನೀಡಲಾಗಿತ್ತು. ಆದರೆ ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಸಿಡ್ನಿ ಸಮಾರಂಭ ಅಂದುಕೊಂಡ ಮಟ್ಟಿಗೆ ಧೂಳೆಬ್ಬಿಸುವಲ್ಲಿ ವೈಫಲ್ಯ ಕಂಡಿದೆ.

ಸಿಡ್ನಿಯಲ್ಲಿ ಕಾಂತಾರದ ‘ವರಾಹ ರೂಪಂ’ ಮಿಂಚು; ಪಾಕಿಸ್ತಾನಿಯರೂ ಕೂಡಾ ಮೋದಿ ಪ್ರೀತಿಸ್ತಾರೆ ಎಂದ ಗಾಯಕ

"ನಾನು ಆ ಸಮಾರಂಭ ಆಯೋಜಿಸಿದ್ದ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಎಲ್ಲೆಡೆಯೂ ಚದುರಿ ಹೋಗಿದ್ದ ಖಾಲಿ ಆಸನಗಳು ಕಾಣಿಸಿಕೊಂಡಿದ್ದವು" ಎಂದು ದ ವೈರ್(The wire) ಆನ್‌ಲೈನ್ ಮಾಧ್ಯಮದ ವರದಿಗಾರರು, ಸಿಡ್ನಿ ನಿವಾಸಿ ಬರಹಗಾರರೊಬ್ಬರು ತನ್ನ ವರದಿಯಲ್ಲಿ ವಿವರಿಸಿದ್ದಾರೆ. "ನಾನು ಪ್ರವೇಶಿಸಿದ, ವೇದಿಕೆಯ ಸನಿಹದ ಪ್ರದೇಶದಲ್ಲಿ ಸಾಕಷ್ಟು ಜನರು ಸೇರಿದ್ದರು. ಆದರೆ ಅಲ್ಲಿ ಸುಲಭವಾಗಿ ಆಸನ ಸಿಗುತ್ತಿತ್ತು. ಆದರೆ ವೇದಿಕೆಯ ಇನ್ನೊಂದು ಕಡೆ, ಮೊದಲನೇ ಹಂತದಲ್ಲಿ ಕೇವಲ ಅರ್ಧದಷ್ಟು ಮಾತ್ರವೇ ಜನರು ಸೇರಿದ್ದರು. ಎರಡನೆಯ ಮತ್ತು ನಾಲ್ಕನೇ ಹಂತದಲ್ಲಿ ಜನರು ವಿರಳವಾಗಿ ಕುಳಿತಿದ್ದು ಕಂಡು ಬಂದಿತ್ತು. ಆ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಸನಗಳು ಖಾಲಿಯಾಗೇ ಉಳಿದಿದ್ದವು. ಈ ಸಮಾರಂಭಕ್ಕೆ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಇದಕ್ಕಾಗಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಾಕಷ್ಟು ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು. ಆದರೂ ಜನರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದು ನನಗೆ ಆಶ್ಚರ್ಯ ಉಂಟುಮಾಡಿತ್ತು. ಆದರೆ ಕುತೂಹಲಕಾರಿ ವಿಚಾರವೆಂದರೆ, ಈ ಸಮಾರಂಭದ ಟಿಕೆಟ್ ವಿತರಣಾ ಕಾರ್ಯದಲ್ಲಿ ಏನೋ ರಹಸ್ಯವಿದ್ದಂತೆ ತೋರುತ್ತಿತ್ತು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಎಪ್ರಿಲ್ ತಿಂಗಳಲ್ಲಿ ವಾಟ್ಸಾಪ್‌ನಲ್ಲಿ ಸಂಪೂರ್ಣವಾಗಿ ಅಲ್ಲಿಯವರೆಗೆ ಹೆಸರೇ ಕೇಳಿರದ, ಇಂಡಿಯನ್ ಆಸ್ಟ್ರೇಲಿಯನ್ ಡಯಾಸ್ಪೊರಾ ಫೌಂಡೇಶನ್ (ಐಎಡಿಎಫ್) ಎಂಬ ಸಂಸ್ಥೆಯ 'ಆಸ್ಟ್ರೇಲಿಯಾ ವೆಲ್‌ಕಮ್ಸ್ ಮೋದಿ' ಎಂಬ ಹೆಸರಿನ ಸಮಾರಂಭ ಆಯೋಜಿಸುತ್ತಿದೆ ಎಂಬ ಸಂದೇಶಗಳು ಹರಿದಾಡುತ್ತಿದ್ದವು ಎಂದು ಅವರು ಹೇಳುತ್ತಾರೆ. ಈ ಸಂಸ್ಥೆಯ ಕುರಿತ, ಅದರ ಮಾಲಿಕತ್ವದ ಮತ್ತು ಜಾಲತಾಣದ ಕುರಿತು ಹೆಚ್ಚಿನ ಶೋಧ ನಡೆಸಿದಾಗ, ಆ ಸಂಸ್ಥೆ ತೀರಾ ಇತ್ತೀಚೆಗೆ, ಅಂದರೆ ಫೆಬ್ರವರಿ ತಿಂಗಳಲ್ಲಿ ನೊಂದಾಯಿಸಲ್ಪಟ್ಟಿತ್ತು ಎಂದು ತಿಳಿದುಬಂದಿತ್ತು.

ಆದರೆ ಆಸ್ಟ್ರೇಲಿಯಾದಲ್ಲಿ ಅಪಾರ ಪ್ರಮಾಣದ ಮೋದಿ ಬೆಂಬಲಿಗರಿದ್ದಾರೆ. 350ಕ್ಕೂ ಹೆಚ್ಚು ಸಂಘಟನೆಗಳು, ಸಂಸ್ಥೆಗಳು ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದವು. ಸಮಾರಂಭ ನಡೆಯುವ 15 ದಿನಗಳಿಗೆ ಮೊದಲು, ಐಎಡಿಎಫ್ ತನ್ನ ಘೋಷಣೆಯಲ್ಲಿ 18,500 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ 20,000 ಜನರು ನೊಂದಾಯಿಸಿದ್ದು, ಸಾರ್ವಜನಿಕರಿಗೆ ಪ್ರವೇಶ ನೀಡಲು ಸಾಧ್ಯವಾಗುತ್ತಿಲ್ಲ ಎಂದಿತ್ತು.

ಟಿಕೆಟ್ ಸಿಗದ ದುರದೃಷ್ಟಶಾಲಿಗಳಿಗೆ ಸಮಾರಂಭ ನೋಡಲು ಅನುಕೂಲವಾಗುವ ನಿಟ್ಟಿನಲ್ಲಿ ಹೊರಭಾಗದಲ್ಲಿ ಬೃಹತ್ ಪರದೆಗಳನ್ನು ಅಳವಡಿಸಲಾಗಿತ್ತು. ಆ ಮೂಲಕ, ಒಳಭಾಗದಲ್ಲಿ ನಿಲ್ಲಲೂ ಜಾಗವಿಲ್ಲ ಎಂಬ ಸಂದೇಶ ರವಾನಿಸಲಾಗಿತ್ತು. ಆದರೆ ವರದಿಗಾರರು ಕ್ರೀಡಾಂಗಣ ಅರ್ಧ ಖಾಲಿಯಾಗಿತ್ತು ಎಂದಿದ್ದರು. ಅದರೊಡನೆ, ವಿಐಪಿಗಳಿಗೆ ಮೀಸಲಿಡಲಾಗಿದ್ದ ಆಸನಗಳೂ ಖಾಲಿಯಾಗಿದ್ದವು. ಸಮಾರಂಭದ ನಿರೂಪಕ ವೇದಿಕೆಯಿಂದ ಸಮಾರಂಭಕ್ಕೆ 25,000 ಜನರು ಆಗಮಿಸಿದ್ದಾರೆ ಎಂದು ಘೋಷಿಸಿದ್ದರು. ಆದರೆ ಕೇವಲ 18,500 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ 25,000 ಜನರು ಆಗಮಿಸಿದರೂ ಅಷ್ಟೊಂದು ಆಸನಗಳು ಖಾಲಿ ಇರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ.

ಆದರೆ, ಆಸ್ಟ್ರೇಲಿಯಾ ಸರ್ಕಾರ ಈ ಸಮಾರಂಭದಲ್ಲಿ ಸಕ್ರಿಯ ಪಾತ್ರವಹಿಸಿ, ಪಾಲ್ಗೊಂಡಿತ್ತು ಎಂದು ಅದೇ ವರದಿಗಾರರು ತಿಳಿಸಿದ್ದಾರೆ. ಸಮಾರಂಭದಲ್ಲಿ ಆಸ್ಟ್ರೇಲಿಯಾದ ಹಲವು ಪ್ರಮುಖ ಸಚಿವರೂ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರಂತೂ ಮೋದಿಯವರನ್ನು "ದ ಬಾಸ್" ಎಂದೇ ಶ್ಲಾಘಿಸಿದರು. ರಾಜಧಾನಿ ಕ್ಯಾನ್‌ಬೆರಾ, ಮೆಲ್ಬೋರ್ನ್, ಹಾಗೂ ಬ್ರಿಸ್ಬೇನ್‌ಗಳಿಂದಲೂ ಜನರು ವಿಶೇಷ ಬಸ್‌ಗಳಲ್ಲಿ ಮತ್ತು ಮೋದಿ ಏರ್‌ವೇಸ್ ಎಂದು ಕರೆಯಲ್ಪಟ್ಟ ವಿಶೇಷ ವಿಮಾನಗಳಲ್ಲಿ ಆಗಮಿಸಿದ್ದರು!

ಆಸ್ಟ್ರೇಲಿಯಾ ನಿವಾಸಿಯಾಗಿರುವ, ನ್ಯಾಯವಾದಿ ಮತ್ತು ಬರಹಗಾರರಾದ ಪ್ರಾಣೇಶ್ ಪ್ರಸಾದ್ ಅವರು ಪ್ರಿಂಟ್ ವರದಿಗಾರರ ಅಭಿಪ್ರಾಯಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದ್ದಾರೆ. "ಮೋದಿಯವರ ಸಮಾರಂಭ ಆಸ್ಟ್ರೇಲಿಯಾದ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಸರ್ಕಾರ, ಮಾದ್ಯಮ ಹಾಗೂ ಔದ್ಯಮಿಕ ವಲಯದಲ್ಲಿ ಮೋದಿಯವರ ಜನಪ್ರಿಯತೆ ಒಂದಿನಿತೂ ಕಡಿಮೆಯಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಂಜಾತರು ವೃತ್ತಿಪರರು, ಯಶಸ್ವಿಗಳಾಗಿದ್ದು, ಆಸ್ಟ್ರೇಲಿಯಾದ ವೈವಿಧ್ಯಮಯ ಸಂಸ್ಕೃತಿಯ ರಾಷ್ಟ್ರದಲ್ಲಿ ಧನಾತ್ಮಕ ಪ್ರಭಾವ ಹೊಂದಿದ್ದಾರೆ. ಟಿಕೆಟ್ ಹಂಚಿಕೆಯ ಕುರಿತಾದ ರಹಸ್ಯ ಕಾಯ್ದುಕೊಳ್ಳುವಿಕೆ ಹಾಗೂ ಆಸನಗಳು ಸಂಪೂರ್ಣವಾಗಿ ತುಂಬಿದ್ದವೇ ಎನ್ನುವುದಕ್ಕೂ, ಮೋದಿಯವರ ಭೇಟಿಗೂ ಯಾವುದೇ ಸಂಬಂಧವಿಲ್ಲ. ಈ ಸಮಾರಂಭ ಭಾರತ - ಆಸ್ಟ್ರೇಲಿಯಾದ ಸಹಭಾಗಿತ್ವದ ಬಲವರ್ಧನೆಗೆ ಒತ್ತು ನೀಡಿದ್ದರಿಂದ, ಇದೊಂದು ಬಹುಮುಖ್ಯ ಸಮಾರಂಭವಾಗಿತ್ತು" ಎಂದು ಪ್ರಾಣೇಶ್ ಅಭಿಪ್ರಾಯ ಪಟ್ಟಿದ್ದಾರೆ.

"ಈ ಸಮಾರಂಭ ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದ್ದು, ಭಾರತೀಯ ಸಮುದಾಯವನ್ನು ಕೆಣಕಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ರವಾನಿಸಿತ್ತು. ಮೋದಿಯವರ ಸ್ವಾಗತಕ್ಕಾಗಿ ಸಿಡ್ನಿ ಬಂದರು ಸೇತುವೆ ಹಾಗೂ ಒಪೆರಾ ಹೌಸ್‌ಗಳಲ್ಲಿ ತ್ರಿವರ್ಣದ ಬೆಳಕು ಮೂಡಿಸಲಾಯಿತು. ಮೋದಿಯವರೂ ಈ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿದ್ದರು. ಒಂದು ವೇಳೆ ಭಾರತ ಮತ್ತು ಮೋದಿಯವರು ಆಸ್ಟ್ರೇಲಿಯಾದಲ್ಲಿ ಸಾಧಿಸಿದ್ದನ್ನು ಪಾಕಿಸ್ತಾನ ಸಾಧಿಸಲು ಸಾಧ್ಯವೇ?" ಎಂದು ಅವರು ಪ್ರಶ್ನಿಸುತ್ತಾರೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಪ್ರಧಾನಿ ಅಲ್ಬನೀಸ್ ಅವರು ಈ ಕಟ್ಟಡಗಳಲ್ಲಿ ಮೋದಿಯವರ ಭೇಟಿಗೆ ಹೆಚ್ಚಿನ ಒತ್ತು ನೀಡಲು ಭಾರತದ ಧ್ವಜವನ್ನು ಬೆಳಕಿನ ರೂಪದಲ್ಲಿ ಮೂಡಿಸಲು ಬಯಸಿದ್ದರು, ಮತ್ತು ಇಂತಹ ಗೌರವವನ್ನು ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕದ ಸಂದರ್ಭದಲ್ಲೂ ನೀಡಲಾಗಿರಲಿಲ್ಲ ಎಂದು ವರದಿ ಮಾಡಿದೆ.

"ಆಸ್ಟ್ರೇಲಿಯಾಗೆ ಮೋದಿಯವರ ಭೇಟಿ ದ್ವಿಪಕ್ಷೀಯ ಸಂಬಂಧ ವೃದ್ಧಿಯನ್ನು ಸಂಕೇತಿಸುತ್ತದೆ. ಆಸ್ಟ್ರೇಲಿಯಾ ಚೀನಾವನ್ನು ಆರ್ಥಿಕ ಸಹಯೋಗಿ ಎಂಬಂತೆ ನೋಡಿದರೂ, ರಕ್ಷಣಾ ಸಹಯೋಗಿ ಎಂದು ಎಂದಿಗೂ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಭಾರತವನ್ನು ಆರ್ಥಿಕ ಮತ್ತು ರಕ್ಷಣಾ ಸಹಯೋಗಿ ಎಂದು ಆಸ್ಟ್ರೇಲಿಯಾ ಪರಿಗಣಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ 46.5 ಬಿಲಿಯನ್ ಡಾಲರ್ ಆಗಿದ್ದು, ಮೋದಿಯವರ ಭೇಟಿಯ ವೇಳೆ ನಡೆದ ಜಾಯಿಂಟ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್ ನಂತಹ ಒಪ್ಪಂದಗಳ ಕಾರಣದಿಂದ ಇದು ಇನ್ನಷ್ಟು ಹೆಚ್ಚಳ ಕಾಣಲಿದೆ" ಎನ್ನುತ್ತಾರೆ ಪ್ರಾಣೇಶ್ ಪ್ರಸಾದ್.

"ಇನ್ನೊಂದು ಸಹಿ ಹಾಕಲ್ಪಟ್ಟ ಪ್ರಮುಖ ಅಂಶವೆಂದರೆ, ವಲಸೆ ಮತ್ತು ಚಲನಶೀಲತಾ ಸಹಯೋಗದ ಒಪ್ಪಂದ. ಇದು ವಿದ್ಯಾರ್ಥಿಗಳಿಗೆ, ಶಿಕ್ಷಣ ತಜ್ಞರು, ಹಾಗೂ ಉದ್ಯೋಗಿಗಳಿಗೆ ಪರಸ್ಪರ ರಾಷ್ಟ್ರಗಳಲ್ಲಿ ನೆಲೆಸಲು, ಓದಲು ಮತ್ತು ಕೆಲಸ ಮಾಡಲು ಪೂರಕವಾಗಿದೆ. ಅದರೊಡನೆ, ಅತ್ಯಂತ ಕೌಶಲ ಬೇಕಾಗಿರುವ ವಲಯಗಳಲ್ಲಿ ಕಾರ್ಯ ನಿರ್ವಹಿಸುವ 3,000 ಭಾರತೀಯ ವೃತ್ತಿಪರರು ಉದ್ಯೋಗ ಸಹಾಯಧನವಿಲ್ಲದೆ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾಗೆ ತೆರಳಬಹುದು. ಈ ಮೊದಲು ಆಸ್ಟ್ರೇಲಿಯಾ ಇಂತಹ ಅವಕಾಶವನ್ನು "ಬಿಳಿಯ" ರಾಷ್ಟ್ರಗಳಿಗೆ ಮಾತ್ರವೇ ನೀಡಿತ್ತು" ಎಂದು ಪ್ರಸಾದ್ ವಿವರಿಸುತ್ತಾರೆ.

ಆಸ್ಪ್ರೇಲಿಯಾದಲ್ಲೂ ನಮೋ ಅಲೆ: ಸಿಡ್ನಿಯಲ್ಲಿ ‘ಮೋದಿ ಮೋದಿ’ ಜೈಘೋಷ; ಮೋದಿಯೇ ಬಾಸ್‌ ಎಂದ ಆಸೀಸ್‌ ಪ್ರಧಾನಿ

"ಆಸ್ಟ್ರೇಲಿಯಾ ಭಾರತವನ್ನು ಒಂದು ಪ್ರಮುಖ ಶಕ್ತಿಯಾಗಿ ಪರಿಗಣಿಸುತ್ತದೆ. ನಾವು ಇನ್ನೂ ಒಂದು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿಲ್ಲ. ಆದರೆ ನಮ್ಮ ಸಮಯ ಬಂದೇ ಬರುತ್ತದೆ. ಭಾರತದಲ್ಲಿರುವ ರೀತಿಯಲ್ಲೇ, ಆಸ್ಟ್ರೇಲಿಯಾದಲ್ಲಿರುವ ಎಡಪಂಥೀಯರು ಮಾನವ ಹಕ್ಕುಗಳ ಉಲ್ಲಂಘನೆ, ಸೆನ್ಸಾರ್, ಅಲ್ಪಸಂಖ್ಯಾತರು, ಹಿಂದೂ ಮೂಲಭೂತವಾದ, ಗುಜರಾತ್ ಹಿಂಸಾಚಾರ ಮುಂತಾದ ವಿಚಾರಗಳನ್ನೆತ್ತಿ ಮಾತನಾಡುತ್ತಾರೆ. ಆದರೆ ಸಾಂಪ್ರದಾಯಿಕವಾಗಿ ಇಂದಿಗೂ ಆಸ್ಟ್ರೇಲಿಯಾ ಜನಾಭಿಪ್ರಾಯದಲ್ಲಿ, ಮಾಧ್ಯಮ ಹಂತದಲ್ಲಿ ಚೀನಾ ಪರವಾಗಿದೆ. ಆದ್ದರಿಂದ ಮೋದಿಯವರ ಇಂತಹ ಸಮಾರಂಭಗಳು ಆಸ್ಟ್ರೇಲಿಯನ್ನರ ಭಾವನೆಗಳನ್ನು ಬದಲಾಯಿಸಲು ನೆರವಾಗುತ್ತವೆ. ನನ್ನ ಚೀನಾ ಮೂಲದ ಸ್ನೇಹಿತರೊಬ್ಬರು ಈ ಸಮಾರಂಭದ ಕುರಿತು ಮಾತನಾಡುತ್ತಾ, ಒಂದು ವೇಳೆ ಚೀನಾದ ಉನ್ನತ ನಾಯಕರೇನಾದರೂ ಆಸ್ಟ್ರೇಲಿಯಾಗೆ ಆಗಮಿಸಿ, ಅವರ ಗೌರವಾರ್ಥ ಇಂತಹ ಸಮಾರಂಭವನ್ನು ಏರ್ಪಡಿಸಿದರೆ ಆಸ್ಟ್ರೇಲಿಯಾದಲ್ಲಿರುವ ಚೀನೀಯರು ಆಗಮಿಸುವುದೇ ಅನುಮಾನ ಎಂದಿದ್ದರು. ಸಿಡ್ನಿ ಸಮಾರಂಭದ ಸ್ಥಳದ ಒಟ್ಟು ಸಾಮರ್ಥ್ಯ 21,302 ಆಸನಗಳಾಗಿದ್ದವು. ಆಸ್ಟ್ರೇಲಿಯಾದ ಮಾಧ್ಯಮಗಳೇ 20,000 ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ವರದಿ ಮಾಡಿವೆ. ಆದ್ದರಿಂದ ವಿರೋಧಿಗಳ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಅವರು ಹೇಳುತ್ತಾರೆ.

Follow Us:
Download App:
  • android
  • ios