ಆಸ್ಟ್ರೇಲಿಯಾದ ಹಿಂದೂ ದೇವಸ್ಥಾನದದ ಮೇಲಿನ ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಷಯ ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ , ಇದೀಗ ಆಸ್ಟ್ರೇಲಿಯಾ ಪ್ರಧಾನಿ ಭಾರತಕ್ಕೆ ಅಭಯ ನೀಡಿದ್ದಾರೆ. ಹಿಂದೂ ದೇಗುಲದ ಮೇಲಿನ ದಾಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ(ಮಾ.11): ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಬನಿಸ್ ಭಾರತ ಪ್ರವಾಸದಲ್ಲಿದ್ದಾರೆ. ಈಗಾಗಲೇ ಭಾರತ ಹಾಗೂ ಆಸ್ಟ್ರೇಲಿಯಾ ಹಲವು ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರಗಳ ಕುರಿತು ಮಾತುಕತೆ ನಡೆಸಿದೆ. ಪ್ರತ್ಯೇಕ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಗೆ ಆಸ್ಟ್ರೇಲಿಯಾದಲ್ಲಿ ನಡೆದ ಹಿಂದೂ ದೇಗುಲದ ಮೇಲಿನ ದಾಳಿ ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದಲ್ಲಿರುವ ಹಿಂದೂ ದೇಗುಲಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದರು. ಮೋದಿ ಮಾತಿನ ಬೆನ್ನಲ್ಲೇ ಆ್ಯಂಥೋನಿ ಅಲ್ಬಿನಿಸ್ ಮಹತ್ವದ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲದ ಮೇಲಿನ ದಾಳಿಗೆ ಅವಕಾಶ ನೀಡಲ್ಲ. ಇಂತಹ ದಾಳಿಯನ್ನು ಆಸ್ಟ್ರೇಲಿಯಾ ಯಾವತ್ತೂ ಸಹಿಸಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ್ಯಂಥೋನಿ ಅಲ್ಬಿನಿಸ್, ಯಾವುದೇ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗೆ ಆಸ್ಟ್ರೇಲಿಯಾದಲ್ಲಿ ಅವಕಾಶವಿಲ್ಲ. ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ದೇಗುಲದ ಮೇಲಿನ ದಾಳಿ ಕುರಿತು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಾನು ಅಭಯ ನೀಡುತ್ತೇನೆ. ಆಸ್ಟ್ರೇಲಿಯಾ ಎಲ್ಲಾ ಜನರ ನಂಬಿಕೆಯನ್ನು ಗೌರವಿಸುತ್ತದೆ. ಧಾರ್ಮಿಕ ಕಟ್ಟಡದ ಮೇಲಿನ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ. ಅದು ಹಿಂದೂ ದೇಗುಲ, ಚರ್ಚ್, ಮಸೀದಿ ಅಥವಾ ಇನ್ಯಾವುದೇ ಧಾರ್ಮಿಕ ಕಟ್ಟಡಗಳು, ಸ್ಥಳಗಳ ಮೇಲಿನ ದಾಳಿಯನ್ನು ಆಸ್ಟ್ರೇಲಿಯಾ ಖಂಡಿಸುತ್ತದೆ. ಇಂತಹ ದಾಳಿ ಮರುಕಳಿಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅ್ಯಂಥೋನಿ ಅಲ್ಬನಿಸ್ ಹೇಳಿದ್ದಾರೆ.
Ahmedabad Test ಪ್ರಧಾನಿ ಮೋದಿಗೆ ಕೊಟ್ಟ ಸ್ಮರಣಿಕೆಯಲ್ಲಿದೆ ಭಾರತ ಪರ ಆಡಿದವರ ಫೋಟೋ!
ಆಸ್ಟ್ರೇಲಿಯಾ ಪೊಲೀಸ್ ಹಾಗೂ ಭದ್ರತಾ ಪಡೆ ಈ ಕುರಿತು ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ಈ ರೀತಿ ದಾಳಿ ಮಾಡುವ ಯಾರನ್ನೂ ಬಿಡುವುದಿಲ್ಲ, ನಮ್ಮ ಭದ್ರತಾ ಪಡೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ಕುರಿತು ಯಾವುದೇ ಆತಂಕ ಬೇಡ. ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ರಕ್ಷಣೆ ನಮ್ಮ ಭದ್ರತಾ ಪಡೆ ಮಾಡಲಿದೆ ಎಂದು ಆಸಿಸ್ ಪ್ರಧಾನಿ ಹೇಳಿದ್ದಾರೆ.
ಇತ್ತೀಚೆಗೆ ಆಸ್ಪ್ರೇಲಿಯಾದಲ್ಲಿ ನಡೆಯುತ್ತಿರುವ ದೇವಾಲಯಗಳ ಮೇಲಿನ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತದ ಪ್ರವಾಸದಲ್ಲಿರುವ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಸಮ್ಮುಖದಲ್ಲೇ ಮೋದಿ ಈ ಕುರಿತು ಆಕ್ಷೇಪಿಸಿದ್ದರು. ಆಸ್ಪ್ರೇಲಿಯಾದಲ್ಲಿ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿರುವ ಸುದ್ದಿಗಳು ಬರುತ್ತಿವೆ. ಇದು ವಿಷಾದನೀಯ. ಇಂತಹ ವಿಷಯಗಳು ಸಹಜವಾಗಿಯೇ ಭಾರತದಲ್ಲಿ ಎಲ್ಲರಿಗೂ ಕಳವಳ ಉಂಟುಮಾಡುತ್ತವೆ. ಜೊತೆಗೆ, ನಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತವೆ ಎಂದಿದ್ದರು.
ಅಹಮದಾಬಾದ್ ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ! ಕ್ರಿಕೆಟ್‌ನ ಐತಿಹಾಸಿಕ ಕ್ಷಣ
ಇತ್ತೀಚೆಗೆ ಖಲಿಸ್ತಾನಿ ಪರ ಉಗ್ರರು ಆಸ್ಪ್ರೇಲಿಯಾದ ಅನೇಕ ದೇಗುಲಗಳ ಮೇಲೆ ಭಾರತ ಹಾಗೂ ಮೋದಿ ವಿರೋಧಿ ಬರಹ ಬರೆದಿದ್ದರು. ಖಲಿಸ್ತಾನಿ ರಾಷ್ಟ್ರ ಪರ ಘೋಷಣೆಗಳನ್ನೂ ಗೀಚಿದ್ದರು. ದೇಗುಲ ಮೇಲೆ ದಾಳಿ, ತಿರಂಗ ಹಿಡಿದವರ ಮೇಲೂ ದಾಳಿಯಾಗಿತ್ತು. ಈ ವಿಚಾರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿ ಸುರಕ್ಷತೆಗೆ ಆದ್ಯತೆ ನೀಡಲು ಮನವಿ ಮಾಡಿದ್ದರು.
