* ರೆಬೆಲ್ ನಾಯಕ ಕಪಿಲ್ ಸಿಬಲ್ ಮನೆಯಲ್ಲಿ ಔತಣಕೂಟ* ಸಿಬಲ್ ಮನೆಗೆ ಆಗಮಿಸಿದವರಲ್ಲಿ ರೆಬೆಲ್ ನಾಯಕರೇ ಹೆಚ್ಚು* ಔತಣಕೂಟಕ್ಕೆ ಗಾಂಧೀ ಕುಟುಂಬ ಗೈರು
ನವದೆಹಲಿ(ಆ.10): ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರೋಧ ಪಕ್ಷದ ಕೆಲ ನಾಯಕರಿಗೆ ತಮ್ಮ ದೆಹಲಿ ನಿವಾಸದಲ್ಲಿ ಸೋಮವಾರ ಔತಣಕೂಟ ಏರ್ಪಡಿಸಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾದ ಪಾರ್ಟಿ ಎಂದು ಹೇಳಲಾಗಿದ್ದರೂ, ಇದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಈ ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತೆ ಕಟ್ಟುವ ಬಗ್ಗೆಯೂ ಮಾತುಗಳು ಬಂದಿದ್ದು, ಅನೇಕರು ಪಕ್ಷವನ್ನು ಗಾಮಧೀ ಕುಟುಂಬದ ಹಿಡಿತದಿಂದ ಮುಕ್ತಗೊಳಿಸಿದರಷ್ಟೇ ಇದು ಸಾಧ್ಯ ಎಂಬ ನಿಲುವು ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಇನ್ನು ಈ ಔತಣಕೂಟದಲ್ಲಿ ಗಾಂಧೀ ಕುಟುಂಬದ ನಾಯಕರು ಇರಲಿಲ್ಲ ಎಂಬುವುದು ಉಲ್ಲೇಖನೀಯ.
ಸೋನಿಯಾ ಗಾಂಧಿಗೆ 2024ರವರೆಗೂ ಕಾಂಗ್ರೆಸ್ ಅಧ್ಯಕ್ಷೆ ಪಟ್ಟ!
ಇನ್ನು ಕಳೆದ ವರ್ಷ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಸ್ಪೋಟಕ ಪತ್ರ ಬರೆದಿದ್ದ ರೆಬೆಲ್ ನಾಯಕರಲ್ಲಿ ಕಪಿಲ್ ಸಿಬಲ್ ಕೂಡಾ ಒಬ್ಬರು ಎಂಬುವುದು ನೆನಪಿಸಿಕೊಳ್ಳಬೇಕಾದ ವಿಚಾರ. ಅಂದು ಈ ನಾಯಕರು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಾದ ಹೀನಾಯ ಸೋಲಿನ ಬಳಿಕ ಹೇಗೆ ಪಕ್ಷ ಮೂಲೆಗುಂಪು ಸೇರಿದೆ ಎಂಬುವುದನ್ನು ವಿವರಿಸಿ, ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಪಕ್ಷದ ಹಿತದೃಷ್ಟಿಯಿಂದ ಆಂತರಿಕ ಚುನಾವಣೆ, ನಾಯಕತ್ವ ಬದಲಾವಣೆ ಸೇರಿದಂತೆ ಕೆಲ ಸಂಘಟನಾತ್ಮಕ ಬದಲಾವನೆಗಳನ್ನು ಮಾಡುವಂತೆಯೂ ಒತ್ತಾಯಿಸಿದ್ದರು.
ಇನ್ನು ಕಪಿಲ್ ಸಿಬಲ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಡಿನ್ನರ್ ಪಾರ್ಟಿಗೆ ಕಾಂಗ್ರೆಸ್ ನಾಯಕಿ ಸೋನಿಯಾಗೆ ಪತ್ರ ಬರೆದು, ಕಾಂಗ್ರೆಸ್‌ನಲ್ಲಿ ಬದಲಾವಣೆಗೆ ಒತ್ತಾಯಿಸುತ್ತಿರುವ ನಾಯಕರನ್ನೇ ಆಹ್ವಾನಿಸಲಾಗಿತ್ತು. ಪಿ ಚಿದಂಬರಂ, ಶಶಿ ತರೂರ್ ಮತ್ತು ಆನಂದ್ ಶರ್ಮಾ ಮೂವರೂ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಪ್ರಮುಖ ನಾಯಕರಾಗಿದ್ದಾರೆ.
ಇನ್ನುಳಿದಂತೆ ಪ್ರತಿಪಕ್ಷದ ನಾಯಕರಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್, ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಸೇನೆಯ ಸಂಜಯ್ ರಾವುತ್, ತೃಣಮೂಲದ ಡೆರೆಕ್ ಒಬ್ರೈನ್ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಕೂಡಾ ಸಿಬಲ್ ಮನೆಯಲ್ಲಿ ಆಯೋಜಿಸಿದ್ದ ಕೂಟಕ್ಕೆ ಆಗಮಿಸಿದ್ದರು.
