Asianet Suvarna News Asianet Suvarna News

ನಿಮ್ಮ ಕನಸನ್ನು ಈಡೇರಿಸುವುದು ನನ್ನ ಸಂಕಲ್ಪ: ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ವಿಜಯೋತ್ಸವ ಭಾಷಣ

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ 3 ರಾಜ್ಯಗಳಲ್ಲಿ ಗೆದ್ದು ನಾವು ಹ್ಯಾಟ್ರಿಕ್‌ ಜಯ ದಾಖಲಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಲಿದೆ ಎಂಬುದರ ಗ್ಯಾರಂಟಿ ಎಂದು ಬಣ್ಣಿಸಿದ್ದಾರೆ.

Assembly Election Results 2023 Fulfilling your dream is my resolve: Prime Minister Modi said in Victory Speech akb
Author
First Published Dec 4, 2023, 6:11 AM IST

ನವದೆಹಲಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ 3 ರಾಜ್ಯಗಳಲ್ಲಿ ಗೆದ್ದು ನಾವು ಹ್ಯಾಟ್ರಿಕ್‌ ಜಯ ದಾಖಲಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಲಿದೆ ಎಂಬುದರ ಗ್ಯಾರಂಟಿ ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ದೆಹಲಿಯ ಬಿಜೆಪಿ ಕಚೇರಿ ಹೊರಗೆ ಭಾನುವಾರ ರಾತ್ರಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಾವು ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕ ಬೆಂಬಲ ಈ ಫಲಿತಾಂಶವಾಗಿದೆ. ಈ ಗೆಲುವಿನ ಮೂಲಕ ವೇದಿಕೆ ಮೇಲೆ ಕುಟುಂಬದ ನಾಯಕರನ್ನು ಸೇರಿಸುವುದರಿಂದ ಒಳ್ಳೆಯ ಫೋಟೋ ಸಿಗಬಹುದೇ ಹೊರತು ಗೆಲುವಲ್ಲ ಎಂಬ ಪಾಠವನ್ನು ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟಕ್ಕೆ ನಾವು ಕಲಿಸಿದ್ದೇವೆ ಎಂದು ಅವರು ಹೇಳಿದರು. ನಿಮ್ಮ ಕನಸನ್ನು ಈಡೇರಿಸುವುದು ನನ್ನ ಸಂಕಲ್ಪವಾಗಿದೆ ಎಂದು ನಾನು ಪ್ರಾಮಾಣಿಕತೆಯಿಂದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ಎಚ್ಚರಿಕೆ ನೀಡಿದ ಮತದಾರರು

ಮೂರು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ನೀಡುವ ಮೂಲಕ ಭ್ರಷ್ಟಾಚಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನೀವು (ವಿಪಕ್ಷಗಳು) ನಿಮ್ಮನ್ನು ಬದಲು ಮಾಡಿಕೊಳ್ಳದಿದ್ದರೆ, ನಾವು ನಿಮ್ಮನ್ನು ಹೊರಗಟ್ಟುತ್ತೇವೆ ಎಂದು ಮತದಾರರು ಹೇಳಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿ ಮತ್ತು ಜನರ ನಡುವೆ ಯಾರೂ ಬದಲು ಸಾಧ್ಯವಿಲ್ಲ. ಒಂದು ವೇಳೆ ಪ್ರಯತ್ನ ಪಟ್ಟರೆ ಜನ ಅವರನ್ನು ಇಲ್ಲವಾಗಿಸುತ್ತಾರೆ. ಹಾಗೆಯೇ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡಬೇಡಿ ಎಂದು ಕಾಂಗ್ರೆಸ್‌ ಹಾಗೂ ವಿಪಕ್ಷಗಳಿಗೆ ಹೇಳುತ್ತೇನೆ. ಒಂದು ವೇಳೆ ಬೆಂಬಲ ನೀಡಿದರೆ ಜನ ನಿಮ್ಮನ್ನು ಸೋಲಿಸುತ್ತಾರೆ ಎಂದು ಹೇಳಿದರು.

ಕೇಂದ್ರದ ಮೇಲೆ ಹೆಚ್ಚಿದ ಜನರ ನಂಬಿಕೆ:

ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ ಎಂಬುದು ಈ ಫಲಿತಾಂಶ ತೋರಿಸುತ್ತಿದೆ. ಸ್ವಾರ್ಥ ರಾಜಕಾರಣ ಮತ್ತು ರಾಷ್ಟ್ರದ ಹಿತಕ್ಕೆ ದುಡಿಯುವ ರಾಜಕಾರಣದ ನಡುವಿನ ವ್ಯತ್ಯಾಸ ಜನರಿಗೆ ಗೊತ್ತಾಗಿದೆ. ಬಲಿಷ್ಠ ಬಿಜೆಪಿ ಮಾತ್ರ ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು ಎಂಬುದು ಜನರಿಗೆ ಅರ್ಥವಾಗಿದೆ. ಮಹಿಳೆಯರು, ಮಕ್ಕಳು, ರೈತರು ಮತ್ತು ಬಡವರ ಕಲ್ಯಾಣ ಬಿಜೆಪಿಯಿಂದಷ್ಟೇ ಸಾಧ್ಯ ಎಂಬುದು ಮತದಾರರಿಗೆ ಮನದಟ್ಟಾಗಿದೆ. ಹೀಗಾಗಿಯೇ ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನ ಬಿಜೆಪಿ ಮೇಲಿನ ನಂಬಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ತನಿಖಾ ಸಂಸ್ಥೆಗಳನ್ನು ದೂಷಿಸುತ್ತಿದ್ದವರನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ ಎಂದು ಹೇಳಿದರು.

ಮಾಮ-ಮೋದಿ ಮೋಡಿಗೆ ಮಧ್ಯಪ್ರದೇಶ ಬಿಜೆಪಿ ಮಡಿಲಿಗೆ, ಗೆಲುವಿಗಿದೆ ಮತ್ತೆರೆಡು ಕಾರಣ!

ದೇಶದ ಯುವಕರು ಅಭಿವೃದ್ಧಿಯನ್ನಷ್ಟೇ ಬಯಸುತ್ತಾರೆ. ಅಲ್ಲದೇ ಮೊದಲ ಬಾರಿ ಮತ ಹಾಕುವವರು ಸಹ ಇದನ್ನೇ ಬಯಸುತ್ತಾರೆ. ಹೀಗಾಗಿ ಇವರೆಲ್ಲರಿಗೂ ಇರುವ ನಂಬಿಕೆ ಎಂದರೆ ಅದು ಬಿಜೆಪಿ ಮಾತ್ರ. ಯುವಕರನ್ನು ಕಡೆಗಣಿಸದ ಕಾರಣದಿಂದಲೇ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿತು ಎಂದು ಅವರು ಹೇಳಿದರು.

ಭಾರತದ ಮೇಲೆ ವಿಶ್ವದ ವಿಶ್ವಾಸ ಹೆಚ್ಚಳ:

ಬಿಜೆಪಿಯ ಈ ಬೃಹತ್‌ ಗೆಲುವು ಭಾರತದ ಮೇಲಿನ ವಿಶ್ವದ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದ ಅಭಿವೃದ್ಧಿಯ ಅಜೆಂಡಾವನ್ನು ಹೆಚ್ಚು ಜನ ಬೆಂಬಲಿಸಿರುವುದರಿಂದ ಇದು ಜಾಗತಿಕ ಹೂಡಿಕೆದಾರರನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುತ್ತದೆ. ಒಂದು ಸ್ಥಿರ ಸರ್ಕಾರಕ್ಕೆ ಜನ ಮತ ನೀಡುತ್ತಿದ್ದಾರೆ ಎಂಬುದನ್ನು ಜಗತ್ತು ಗಮನಿಸುತ್ತಿದೆ.

ಮತದಾರರಿಗೆ ಧನ್ಯವಾದ:

ಈ ಹ್ಯಾಟ್ರಿಕ್‌ ಗೆಲುವು 2024ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸುತ್ತೇವೆ ಎಂಬುದಕ್ಕೆ ಗ್ಯಾರಂಟಿಯಾಗಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ತೆಲಂಗಾಣದಲ್ಲೂ ಸಹ ನಮಗೆ ಮತ ನೀಡಿದವರಿಗೆ ಧನ್ಯವಾದಗಳು ಇಲ್ಲೂ ಸಹ ನಾವು ಪ್ರಗತಿಯನ್ನೇ ಕಂಡಿದ್ದೇವೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ, ನಾವು ಕೊಟ್ಟ ಭರವಸೆಗಳನ್ನು ತಪ್ಪದೇ ಈಡೇರಿಸುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios