ಅಸ್ಸಾಂನ 8 ವರ್ಷದ ಬಾಲಕಿ ಬಿನಿತಾ ಚೆಟ್ರಿ ಬ್ರಿಟನ್ ಗಾಟ್ ಟ್ಯಾಲೆಂಟ್‌ನಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಅದ್ಭುತ ನೃತ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ 8 ವರ್ಷದ ಬಾಲಕಿಯೊಬ್ಬಳು ತನ್ನ ಅಮೋಘವಾದ ನೃತ್ಯದಿಂದ ವಿಶ್ವವೇ ಬೆರಗುಗೊಳ್ಳುವಂತೆ ಮಾಡಿದ್ದಾಳೆ. ಬ್ರಿಟನ್ ಗಾಟ್ ಟಾಲೆಂಟ್ ಶೋದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಈಕೆ ತನ್ನ ಅದ್ಭುತವಾದ ನೃತ್ಯ ಪ್ರದರ್ಶನದಿಂದ ಅಲ್ಲಿ ಸೇರಿದ್ದ ಅತಿಥಿಗಳು ಹಾಗೂ ತೀರ್ಪುಗಾರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ. ಈಕೆಯ ಅದ್ಭುತ ನೃತ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಬಾಲಕಿಯ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಬಾಲಕಿಯ ಅದ್ಬುತ ಪ್ರತಿಭೆಗೆ ಮನಸೋತಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಆಕೆಯ ನೃತ್ಯದ ವೀಡಿಯೋವನ್ನು ಶೇರ್ ಮಾಡುತ್ತಾ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಶ್ಲಾಘನೆ
ಕೇವಲ 8 ವರ್ಷ, ವಿಶ್ವ ದರ್ಜೆ, ಉಕ್ಕಿನ ಇಚ್ಛೆಯುಳ್ಳವಳು, ಏಕೆಂದರೆ ಅವಳ ದೇಹದ ಮೇಲೆ ಆ ರೀತಿಯ ಸಾಮರ್ಥ್ಯವೂ ತೀವ್ರವಾದ ಅಭ್ಯಾಸದಿಂದ ಮಾತ್ರ ಬರುತ್ತದೆ. ಅದು ಕೇವಲ 'ಪಿಂಕ್ ಪ್ರಿನ್ಸಸ್ ಮನೆ' ಆಗಿದ್ದರೂ ಸಹ ಆಕೆಯ ಮಹತ್ವಾಕಾಂಕ್ಷೆಯ ಮೇಲೆ ಅಚಲವಾದ ಗಮನ ಕಾಣುತ್ತಿದೆ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. ಅಂದಹಾಗೆ ದೇಹದಲ್ಲಿ ಮೂಳೆಯೇ ಇಲ್ಲವೇನೋ ಎಂದು ನೋಡುಗರಿಗೆ ಭಾಸವಾಗುವಂತೆ ಅದ್ಭುತವಾಗಿ ನೃತ್ಯ ಮಾಡಿದ ಈಕೆಯ ಹೆಸರು ಬಿನಿತಾ ಚೆಟ್ರಿ.
ರೈಲಲ್ಲಿ 'ಇಂಡಿಯಾ ಗಾಟ್ ಟಾಲೆಂಟ್' ರನ್ಸರ್‌ಗಳ ಬಿಂದಾಸ್ ಡಾನ್ಸ್: ವಿಡಿಯೋ ವೈರಲ್
ನನ್ನ ಹೆಸರು ಬಿನಿತಾ ಚೆಟ್ರಿ, ನನಗೆ 8 ವರ್ಷ, ನಾನು ಭಾರತದ ಅಸ್ಸಾಂನಿಂದ ಬಂದಿದ್ದೇನೆ, ಬ್ರಿಟನ್ ಆಟ್ ಟಾಲೆಂಟ್ ಶೋ ನನ್ನ ಕನಸಿನ ವೇದಿಕೆಯಾಗಿದ್ದು, ನಾನು ಅಲ್ಲಿ ವಿಜಯಶಾಲಿಯಾಗಲು ಬಯಸಿದ್ದೇನೆ, ನಾನು ಪಿಂಕ್ ಪ್ರಿನ್ಸಸ್ ಹೌಸನ್ನು ಕೊಳ್ಳಲು ಬಯಸಿದ್ದೇನೆ ಎಂದು ಆಕೆ ವೇದಿಕೆಯಲ್ಲಿ ತನ್ನ ಪ್ರತಿಭಾ ಪ್ರದರ್ಶನಕ್ಕೂ ಮೊದಲು ತೀರ್ಪುಗಾರರಿಗೆ ತನ್ನನ್ನು ಪರಿಚಯಿಸಿಕೊಂಡಿದ್ದಾಳೆ.
ನಂತರ ಆಕೆ ಮಾಡಿದ ನೃತ್ಯ ನೋಡುಗರನ್ನು ಒಂದು ಕ್ಷಣ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಹಿಮ್ಮುಖವಾಗಿ ಪಲ್ಟಿಯ ಜೊತೆ ಕ್ಷಣದಲ್ಲಿ ದೇಹವನ್ನು ಬಳುಕಿಸಿ ಬದಲಿಸುವ ರೀತಿಗೆ ತೀರ್ಪುಗಾರರೇ ಅಚ್ಚರಿಗೊಂಡಿದ್ದರು, ಕೆಲವರು ಈಕೆಗೆ ಎಂಟು ವರ್ಷ ಎಂದರೆ ನಂಬಲಾಗದು ಎಂದು ಉದ್ಘರಿಸಿದರು. ಹಾಗೆಯೇ ಜಡ್ಜ್‌ಗಳು ಕೂಡ ಆಕೆಯ ಪವರ್‌ಫುಲ್ ಡಾನ್ಸ್‌ಗೆ ಪ್ರತಿಕ್ರಿಯಿಸುತ್ತಾ, 'ನಿನ್ನದು ಹುಲಿಯ ಶಕ್ತಿಯೊಂದಿಗೆ ವೇದಿಕೆಯಲ್ಲಿ ಹಾವಿನಂತೆ ದೇಹವನ್ನು ಬಳುಕಿಸುವ ರೀತಿ, ಭಾರತೀಯ ಸ್ಪರ್ಶದೊಂದಿಗೆ ಸಮಕಾಲೀನ ನೃತ್ಯವನ್ನು ಮಿಶ್ರ ಮಾಡಿದ್ದು ಇಷ್ಟವಾಯ್ತು. ತುಂಬಾ ಬಲಿಷ್ಠ, ತುಂಬಾ ಕಡಿಮೆ, ತುಂಬಾ ಶಕ್ತಿಶಾಲಿಯಾಗಿತ್ತು. ಇದೊಂದು ಅದ್ಭುತ ಪ್ರದರ್ಶನ. ಚೆನ್ನಾಗಿ ಮಾಡಿದ್ದೀರಿ, ನನ್ನ ಡಾರ್ಲಿಂಗ್' ಎಂದು ತೀರ್ಪುಗಾರರು ಬಿನಿತಾ ಚೆಟ್ರಿಯನ್ನು ಕೊಂಡಾಡಿದ್ದಾರೆ. ಅಲ್ಲದೇ ಆಕೆಯನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಿದ್ದಾರೆ.
ಅಸ್ಸಾಂ ಸಿಎಂ ಶ್ಲಾಘನೆ
ಹಾಗೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಕೂಡ ಬಿನಿತಾ ಚೆಟ್ರಿ ವೈರಲ್ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಪುಟ್ಟ ಹುಡುಗಿಗೆ ನನ್ನ ಶುಭಾಶಯಗಳು, ಆಕೆ ಪಿಂಕ್ ಪ್ರಿನ್ಸಸ್ ಹೌಸ್ ಖರೀದಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಬ್ರಿಟಿಷರನ್ನು ಮೆಚ್ಚಿಸಿದ ಪುಟ್ಟ ಬಾಲಕಿಯ ಎನರ್ಜಿಟಿಕ್ ಡಾನ್ಸ್ ವೀಡಿಯೋ ಇಲ್ಲಿದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.
