ಗುವಾಹಟಿ(ಜು.23): ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಶಾನ್ಯ ರಾಜ್ಯ ಅಸ್ಸಾಂ ಜಲಪ್ರಳಯಕ್ಕೆ ತತ್ತರಗೊಂಡಿರುವಾಗಲೇ ವಿಶ್ವದ 9ನೇ ಅತಿದೊಡ್ಡ ನದಿಯಾದ ಬ್ರಹ್ಮಪುತ್ರ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ ಎಂದು ಕೇಂದ್ರೀಯ ಜಲ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಈಗಾಗಲೇ ಅಪಾಯಮಟ್ಟಕ್ಕಿಂತ 8 ಸೆಂ.ಮೀನಷ್ಟುಎತ್ತರದಲ್ಲಿ ನೀರು ಹರಿಯುತ್ತಿದ್ದು, ಪ್ರತೀ ಗಂಟೆಗೆ 2 ಸೆಂ.ಮೀನಷ್ಟುಏರಿಕೆ ಕಾಣುತ್ತಿದೆ.

ಅಸ್ಸಾಂ ಪ್ರವಾಹ ಮತ್ತಷ್ಟು ಗಂಭೀರ: ರಕ್ಷಣೆಗೆ ವಾಯುಪಡೆ ಸನ್ನದ್ಧ!

ಭಾರೀ ಮಳೆಗೆ ಎದುರಾಗಿರುವ ಪ್ರವಾಹ ಸ್ಥಿತಿಯು ಬುಧವಾರ ಮತ್ತಷ್ಟುಬಿಗಡಾಯಿಸಿದ್ದು, ಪ್ರವಾಹದ ಹೊಡೆತಕ್ಕೆ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ರಾಜ್ಯದಲ್ಲಿ ಉದ್ಭವಿಸಿದ ನೆರೆ ಮತ್ತಿತ್ತರ ವಿಪತ್ತು ಘಟನೆಗಳಲ್ಲಿ ಸಾವನ್ನಿಪ್ಪಿದವರ ಸಂಖ್ಯೆ 115ಕ್ಕೆ ಏರಿದೆ. ಅಲ್ಲದೆ, ರಾಜ್ಯದ 26 ಜಿಲ್ಲೆಗಳ 26 ಲಕ್ಷ ಮಂದಿ ಪ್ರವಾಹ ಸಂಕಷ್ಟಕ್ಕೀಡಾಗಿದ್ದಾರೆ.

ಏತನ್ಮಧ್ಯೆ, ತ್ವರಿತಗತಿಯಲ್ಲಿ ರಕ್ಷಣಾ ಕಾರಾರ‍ಯಚರಣೆ ಕೈಗೊಂಡಿರುವ ರಾಜ್ಯ ವಿಪತ್ತು ನಿರ್ವಹಣಾ ತಂಡ(ಎಸ್‌ಡಿಆರ್‌ಎಫ್‌) ಪ್ರವಾಹದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಿಸಿ ಸುರಕ್ಷಿತ ತಾಣಗಳಿಗೆ ರವಾನೆ ಮಾಡಿದೆ.

ಅಸ್ಸಾಂ ಜಲ ಪ್ರಳಯ: 25 ಲಕ್ಷ ಜನ ಸಂಕಷ್ಟಕ್ಕೆ!

ಈ ನಡುವೆ ಈ ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಮತ್ತು ಪರಿಹಾರ ಕಾರ‍್ಯಗಳಿಗಾಗಿ 346 ಕೋಟಿ ರು. ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಪ್ರಳಯದ ನಿಯಂತ್ರಣಕ್ಕಾಗಿ ನೆರೆಯ ಭೂತಾನ್‌ ರಾಷ್ಟ್ರದೊಂದಿಗೆ ಚರ್ಚಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಹೇಳಿದ್ದಾರೆ.