ಗುವಾಹಟಿ(ಜು.20): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಎದುರಾದ ಪ್ರವಾಹ ಸ್ಥಿತಿಗೆ ಅಸ್ಸಾಂನಲ್ಲಿ ಭಾನುವಾರ ಮತ್ತೆ 5 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈಶಾನ್ಯ ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದ ಈವರೆಗೆ 81 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ, ರಾಜ್ಯದ 34 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಿಗೆ ಅಪ್ಪಳಿಸಿರುವ ಪ್ರಳಯದಿಂದ 25 ಲಕ್ಷ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮತ್ತೊಂದೆಡೆ ಪ್ರವಾಹ ಸ್ಥಿತಿ ನಿರ್ವಹಣೆಗೆ ರಾಜ್ಯಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಅವರಿಗೆ ಭರವಸೆ ನೀಡಿದ್ದಾರೆ.

ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸೋನೊವಾಲ್‌ ಅವರಿಗೆ ಭಾನುವಾರ ಕರೆ ಮಾಡಿದ ಮೋದಿ ಅವರು, ರಾಜ್ಯದಲ್ಲಿ ಉದ್ಭವಿಸಿರುವ ನೆರೆ, ಕೊರೋನಾ ಪರಿಸ್ಥಿತಿ ಹಾಗೂ ಇತ್ತೀಚೆಗೆ ಗ್ಯಾಸ್‌ ಸ್ಫೋಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ, ರಾಜ್ಯಕ್ಕೆ ಅಗತ್ಯವಿರುವ ಎಲ್ಲ ನೆರವುಗಳನ್ನು ನೀಡುವುದಾಗಿ ಮೋದಿ ಅವರು ಘೋಷಣೆ ಮಾಡಿದ್ದಾರೆ.

ಈ ವೇಳೆ ಪ್ರವಾಹಕ್ಕೆ ಸಿಲುಕಿದ ರಾಜ್ಯದ ಜನರ ನೆರವಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮೋದಿ ಅವರಿಗೆ ಸೋನೊವಾಲ್‌ ವಿವರಣೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.