ಬೆಂಗಳೂರು (ನ.30): ಡಿಜಿಟಲ್ ಸುದ್ದಿತಾಣಗಳ ಮಾಪನ ಮತ್ತು ವಿಶ್ಲೇಷಣೆ ನಡೆಸುವ ಅಂತರಾಷ್ಟ್ರೀಯ ಸಂಸ್ಥೆ ಕಾಮ್‌ಸ್ಕೋರ್‌ ಅಕ್ಟೋಬರ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಏಷ್ಯಾನೆಟ್‌ ನ್ಯೂಸ್ ನೆಟ್ವರ್ಕ್ 9ನೇ ಸ್ಥಾನಕ್ಕೆ ಜಿಗಿದಿದೆ.

ವಸ್ತುನಿಷ್ಠ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಯನ್ನು ಡಿಜಿಟಲ್ ಓದುಗರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿರುವ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್, ಅಕ್ಟೋಬರ್‌ ತಿಂಗಳಿನಲ್ಲಿ 182 ಮಿಲಿಯನ್ ಓದುಗರನ್ನು ಪಡೆದಿದೆ.

ಟಾಪ್ 10 ಮಾಧ್ಯಮ ಸಂಸ್ಥೆಗಳ ಪೈಕಿ ಸ್ಥಾನ ಪಡೆದಿರುವ ಏಕೈಕ ದಕ್ಷಿಣ ಭಾರತೀಯ ಸಂಸ್ಥೆ ಏಷ್ಯಾನೆಟ್ ಆಗಿದೆ. ಅಮರ್ ಉಜಾಲಾ, ಜಾಗರಣ್ ನ್ಯೂಸ್, ಏಬಿಪಿ ನ್ಯೂಸ್‌ ನೆಟ್ವರ್ಕ್, ಮಲಯಾಳ ಮನೋರಮಾ ಮತ್ತು ಟೈಮ್ಸ್ ನೆಟ್ವರ್ಕ್‌ನ್ನು ಕೂಡಾ ಏಷ್ಯಾನೆಟ್ ಹಿಂದಿಕ್ಕಿದೆ.

ಇದನ್ನೂ ಓದಿ | ಧನ್ಯವಾದ ‘ಡಿಜಿಟಲ್’ ಕರ್ನಾಟಕ: ಸುವರ್ಣನ್ಯೂಸ್ ಮುಡಿಗೆ ಮತ್ತೊಂದು ಗರಿ...

ಗೂಗಲ್ ಅನಾಲಿಟಿಕ್ಸ್ ಪ್ರಕಾರ ಏಷ್ಯಾನೆಟ್‌ ನ್ಯೂಸ್‌ ನೆಟ್ವರ್ಕ್ ಈಗಾಗಲೇ 450 ಮಿಲಿಯನ್  ಪೇಜ್‌ವೀವ್ಸ್‌ಗಳನ್ನು ಪಡೆಯುವ ಮೂಲಕ ಡಿಜಿಟಲ್ ಮಾಧ್ಯಮ ಲೋಕದಲ್ಲಿ ಅಗ್ರಪಂಕ್ತಿಯಲ್ಲಿದೆ.

ಏಷ್ಯಾನೆಟ್‌ನ ಕನ್ನಡ ಆವೃತ್ತಿ ಸುವರ್ಣನ್ಯೂಸ್.ಕಾಂ, ಅಕ್ಟೋಬರ್‌ನಲ್ಲಿ 4.8 ಮಿಲಿಯನ್ ಓದುಗರನ್ನು ಪಡೆಯುವ ಮೂಲಕ ಕನ್ನಡದ ನಂ. 1 ನ್ಯೂಸ್‌ಪೋರ್ಟಲ್ ಆಗಿ ಹೊರಹೊಮ್ಮಿದೆ.   

ಏಷ್ಯಾನೆಟ್‌ ನ್ಯೂಸ್‌ ನೆಟ್ವರ್ಕ್, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬೆಂಗಾಲಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನ್ಯೂಸ್‌ ಪೋರ್ಟಲ್‌ಗಳನ್ನು ಹೊಂದಿದೆ.

ಕ್ಷಣ ಕ್ಷಣಕ್ಕೂ ಡಿಜಿಟಲ್ ಮಾಧ್ಯಮ ಕ್ಷೇತ್ರ, ತನ್ನ ವಿಸ್ತಾರದ ಜೊತೆಗೆ ಪ್ರಭಾವವನ್ನೂ ಕೂಡಾ ಹೆಚ್ಚಿಸುತ್ತಿದೆ. ಕೈಗೆಟಕುವ ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಪ್ರತಿಯೊಬ್ಬ ಶ್ರೀಸಾಮನ್ಯನನ್ನು ಡಿಜಿಟಲೀಕರಣಗೊಳಿಸಿದೆ.

ಈ ಡಿಜಿಟಲ್ ಸುನಾಮಿಯು ಸುದ್ದಿ ತಲುಪಿಸುವ ಸ್ವರೂಪವನ್ನು ಬದಲಾಯಿಸಿದೆ. ಏಷ್ಯಾನೆಟ್‌ ಡಿಜಿಟಲ್  ನ್ಯೂಸ್‌ತಾಣಗಳು ಓದುಗರ/ವೀಕ್ಷಕರ  ಸುದ್ದಿದಾಹವನ್ನು ತಣಿಸುವ ಕೆಲಸವನ್ನು ಪೂರ್ಣ ಜವಾಬ್ದಾರಿಯೊಂದಿಗೆ ನಿರಂತರವಾಗಿ ಮಾಡಿಕೊಂಡು ಬಂದಿವೆ.