ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೊಸ ಚರ್ಚಾ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ಭಾರತ ಆದಿವಾಸಿಗಳಿಗೆ ಮತ್ತು ದ್ರಾವಿಡನ್ನರಿಗೆ ಸೇರಿದ್ದು ಎಂದಿದ್ದಾರೆ. ಈ ಮೂಲಕ ಈ ಹಿಂದಿನಿಂದಲೂ ಇರುವ ದ್ರಾವಿಡ ಚಳವಳಿ ಮತ್ತು ಆದಿವಾಸಿಗಳು ಮೂಲ ನಿವಾಸಿಗಳು ಎಂಬ ಚರ್ಚೆಗೆ ಮರುಜೀವ ಸಿಕ್ಕಿದೆ. 

ಭಿವಾಂಡಿ: ಎಐಎಮ್‌ಐಎಮ್‌ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ (AIMIM Chief Asaduddin Owaisi) ಶನಿವಾರ ಬಿಜೆಪಿಯ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Svayam Sevak Sangha) ವಿರುದ್ಧ ಮತ್ತೊಂದು ಸುತ್ತಿನ ಮಾತಿನ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಭಿವಾಂಡಿಯ ರ್ಯಾಲಿಯಲ್ಲಿ ಭಾಗವಹಿಸಿದ ಅಸಾದುದ್ದೀನ್‌ ಓವೈಸಿ, "ಭಾರತ ನನ್ನದೂ ಅಲ್ಲ, ಠಾಕ್ರೆ ಅವರದ್ದೂ ಅಲ್ಲ, ಅಥವಾ ಪ್ರಧಾನಿ ನರೇಂದ್ರ ಮೋದಿ - ಅಮಿತ್ ಶಾ ಅವರದ್ದೂ ಅಲ್ಲ. ಭಾರತ ದೇಶ ಯಾರಿಗಾದರೂ ಸ್ವಂತ ಎಂದರೆ ಅದು ದ್ರಾವಿಡನ್ನರಿಗೆ ಮತ್ತು ಆದಿವಾಸಿಗಳಿಗೆ ಸೇರಬೇಕು (India belongs to Adiwasis and Dravidians). ಆರ್‌ಎಸ್‌ಎಸ್‌ - ಬಿಜೆಪಿ ಮೊಘಲರ ನಂತರ ಹುಟ್ಟಿಕೊಂಡವು, ಆದರೆ ದ್ರಾವಿಡನ್ನರು ಮತ್ತು ಆದಿವಾಸಿಗಳು ಇಲ್ಲಿನ ಮೂಲ ನಿವಾಸಿಗಳು. ಆಫ್ರಿಕಾ, ಇರಾನ್‌, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದಿಂದ ವಲಸೆ ಬಂದ ಜನರಿಂದ ಭಾರತ ದೇಶ ಸೃಷ್ಟಿಯಾಗಿದೆ," ಎಂದು ಹೇಳಿದ್ದಾರೆ. 

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್ (NCP Chief Sharad Pawar) ಅವರ ವಿರುದ್ಧವೂ ಸಿಡಿದ ಓವೈಸಿ, ಸಂಜಯ್‌ ರಾವತ್‌ (Sanjay Raut) ವಿರುದ್ಧ ಪ್ರಕರಣ ದಾಖಲಾದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಪವಾರ್‌ಗೆ, ನವಾಬ್‌ ಮಲಿಕ್‌ ಬಂಧನವಾದಾಗ ಪ್ರಧಾನಿ ಭೇಟಿ ಮಾಡಲು ಯಾಕೆ ಮನಸ್ಸು ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ, ಶಿವಸೇನೆ ಮತ್ತು ಎನ್‌ಸಿಪಿ ಮುಸಲ್ಮಾನ ಸಮುದಾಯದ ವಿರುದ್ಧವಿದೆ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನು ಓವೈಸಿ ಮಾಡಿದ್ದಾರೆ. 

ಎನ್‌ಸಿಪಿ, ಶೀವಸೇನೆ, ಬಿಜೆಪಿ ಸೇರಿದಂತೆ ಉಳಿದ ಪಕ್ಷಗಳ ವಿರುದ್ಧ ಮಾತು ಮುಂದುವರೆಸಿ, "ಬಿಜೆಪಿ, ಎನ್‌ಸಿಪಿ, ಕಾಂಗ್ರೆಸ್‌, ಸಮಾಜವಾದಿ ಪಕ್ಷ ಎಲ್ಲವೂ ಹೆಸರಿಗೆ ಜಾತ್ಯತೀತ ಪಕ್ಷಗಳು. ಅವರ ಪಕ್ಷದ ಕಾರ್ಯಕರ್ತರು, ನಾಯಕರು ಜೈಲಿಗೆ ಹೋಗಬಾರದು ಎಂದು ಅಪೇಕ್ಷಿಸುತ್ತಾರೆ. ಆದರೆ ಮುಸಲ್ಮಾನ ಪಕ್ಷದ ಯಾವುದಾದರೂ ನಾಯಕ ಜೈಲಿಗೆ ಹೋದರೆ ತಲೆಕೆಡಿಸಿಕೊಳ್ಳುವುದಿಲ್ಲ. ಅದವರಿಗೆ ಬೇಡವಾದ ವಿಚಾರವಾಗುತ್ತದೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಂಜಯ್ ರಾವತ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡುತ್ತಾರೆ. ಆದರೆ ನವಾಬ್‌ ಮಲಿಕ್‌ ಬಂಧನ ಸಂಬಂಧ ಪವಾರ್‌ ಪ್ರಧಾನಿ ಭೇಟಿ ಮಾಡುವುದಿರಲಿ, ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ, ಎಂದು ಓವೈಸಿ ಹೇಳಿದ್ದಾರೆ. 

ಇದನ್ನೂ ಓದಿ: ಮಸೀದಿಯಿಂದ ತೆರವುಗೊಳಿಸಿದ ಲೌಡ್‌ ಸ್ಪೀಕರ್‌ ಶಾಲೆಗೆ ದಾನ!

"ಸಂಜಯ್‌ ರಾವತ್‌ ಮುಂದೆ ನವಾಬ್‌ ಮಲ್ಲಿಕ್‌ ಚಿಕ್ಕವರಾ? ಶರದ್‌ ಪವಾರ್‌ ಅವರನ್ನು ಪ್ರಶ್ನಿಸುತ್ತೇನೆ, ನವಾಬ್‌ ಮಲ್ಲಿಕ್‌ ವಿಚಾರದಲ್ಲಿ ಯಾಕೆ ಮೌನವಹಿಸಿದಿರಿ. ಯಾಕೆಂದರೆ ಮಲಿಕ್‌ ಮುಸಲ್ಮಾನ ಎಂದೇ? ಸಂಜಯ್‌ ರಾವತ್‌ ಮತ್ತು ನವಾಬ್‌ ಮಲಿಕ್‌ ಸಮಾನರಲ್ಲವೇ?," ಎಂದು ಪ್ರಶ್ನಿಸಿದ್ದಾರೆ. 

ಎಐಎಂಐಎಂ ಪಕ್ಷದ ಭಿವಾಂಡಿಯ ನಾಯಕ ಖಾಲಿದ್‌ ಗುಡ್ಡು ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಓವೈಸಿ ಬೇಡಿಕೆ ಇಟ್ಟಿದ್ದಾರೆ. "ಖಾಲಿದ್‌ ಗುಡ್ಡು ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಅವರ ಮೇಲೆ ಹಾಕಿರುವ ಸೆಕ್ಷನ್‌ಗಳು ಸಂಪೂರ್ಣ ತಪ್ಪುಗಳಿಂದ ಕೂಡಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಲ್ಲಿ ಮನವಿ ಮಾಡುತ್ತೇನೆ, ಗುಡ್ಡು ಅವರನ್ನು ಬಿಡುಗಡೆ ಮಾಡಿ," ಎಂದು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಪಿಎಫ್‌ಐ ರ್ಯಾಲಿಯಲ್ಲಿ ಹಿಂದೂ ವಿರೋಧಿ ಘೋಷಣೆ: ಬಾಲಕನ ತಂದೆ ಸೆರೆ!

"ಖಾಲಿದ್‌ ಗುಡ್ಡು ಅಧಿಕಾರದಲ್ಲಿರುವ ಶಿವಸೇನೆ - ಎನ್‌ಸಿಪಿ - ಕಾಂಗ್ರೆಸ್‌ ವಿರುದ್ಧ ದನಿ ಎತ್ತಿದರು. ಭ್ರಷ್ಟಾಚಾರವನ್ನು ಪ್ರಶ್ನಿಸಿದರು. ಈ ಕಾರಣಕ್ಕೆ ಮುಂಬೈ ಪೊಲೀಸರನ್ನು ಬಳಸಿಕೊಂಡು ಖಾಲಿದ್‌ ಗುಡ್ಡು ಅವರನ್ನು ಬಂಧಿಸಲಾಗಿದೆ," ಎಂದು ಓವೈಸಿ ಹೇಳಿದ್ದಾರೆ.