Asianet Suvarna News Asianet Suvarna News

ಅರುಣಾಚಲ ಪ್ರದೇಶ ಹೊಡೆದಾಟದಲ್ಲಿ ಭಾರತದ ಕನಿಷ್ಠ 20 ಸೈನಿಕರಿಗೆ ಗಾಯ!

ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆಸಿದರು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

Arunachal pradesh clash At least 20 Indian soldiers were wounded says BJP MP san
Author
First Published Dec 13, 2022, 3:52 PM IST

ನವದೆಹಲಿ (ಡಿ.13): ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ತಪಿರ್ ಗಾವೊ ಅವರು ಇಂಗ್ಲೆಂಡ್‌ ಮೂಲದ ಟೆಲಿಗ್ರಾಫ್‌ ಪತ್ರಿಕೆಗೆ ಮಂಗಳವಾರ ತಿಳಿಸಿದ್ದಾರೆ.ಡಿಸೆಂಬರ್ 9 ರಂದು ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರಿಗೆ "ಸಣ್ಣ ಗಾಯ"ಗಳಾಗಿವೆ ಎಂದು ಕೇಂದ್ರ ರಕ್ಷಣಾ ಇಲಾಖೆ ಹೇಳಿದ್ದರೆ, ಇನ್ನೊಂದೆಡೆ ಅರುಣಾಚಲ ಪೂರ್ವ ಕ್ಷೇತ್ರದ ಬಿಜೆಪಿ ಸಂಸದ ಗಾವೊ ಮಾಡಿರುವ ಕಾಮೆಂಟ್‌ನಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ. ಈ ಎರಡೂ ಹೇಳಿಕಗಳು ಭಿನ್ನವಾಗಿದೆ. ಗಂಭೀರವಾಗಿ ಗಾಯಗೊಂಡ ಆರು ಸೈನಿಕರನ್ನು ಅಸ್ಸಾಂನ ಗುವಾಹಟಿಗೆ ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಗಾವೊ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ. ಮಂಗಳವಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಇದರ ಬಗ್ಗೆ ಮಾತನಾಡಿದ್ದು, ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ ಎಂದಿದ್ದರು.


"ನಮ್ಮ ಯಾವುದೇ ಸೈನಿಕರು ಸಾವು ಕಂಡಿಲ್ಲ ಅಥವಾ ಯಾವುದೇ ಗಂಭೀರ ಗಾಯಗಳಿಂದ ಬಳಲುತ್ತಿಲ್ಲ ಎಂದು ನಾನು ಈ ಸದನಕ್ಕೆ ಹೇಳಲು ಬಯಸುತ್ತೇನೆ" ಎಂದು ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆಯಲ್ಲಿ ರಾಜನಾಥ್‌ ಸಿಂಗ್‌ ತಿಳಿಸಿದ್ದರು. "ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ, ಪಿಎಲ್‌ಎ [ಪೀಪಲ್ಸ್ ಲಿಬರೇಶನ್ ಆರ್ಮಿ] ಸೈನಿಕರನ್ನು ಅವರ ಮೂಲ ಸ್ಥಳಗಳಿಗೆ ವಾಪಾಸ್‌ ಕಳಿಸಲಾಗಿದೆ' ಎಂದು ಹೇಳಿದ್ದಾರೆ.

ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ "ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು" ಪ್ರಯತ್ನಿಸುತ್ತಿರುವ ಚೀನಾ ಈ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.  ಡಿಸೆಂಬರ್ 11 ರಂದು, ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಯಾಂಗ್ಟ್ಸೆ ಪ್ರದೇಶದ ಸ್ಥಳೀಯ ಭಾರತೀಯ ಸೇನಾ ಕಮಾಂಡರ್ ಚೀನಾದ ಸಹವರ್ತಿಯೊಂದಿಗೆ ಧ್ವಜ ಸಭೆಯನ್ನು ಈ ಕುರಿತಾಗಿ ನಡೆಸಿದ್ದಾರೆ ಎಂದು ತಿಳಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚೀನಾದ ಎದುರಿನ ಘರ್ಷಣೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಸೋಮವಾರ ಆರೋಪಿಸಿದ ನಂತರ ರಕ್ಷಣಾ ಸಚಿವರ ಹೇಳಿಕೆ ಹೊರಬಿದ್ದಿದೆ. "ಕಳೆದ ಎರಡು ವರ್ಷಗಳಿಂದ, ನಾವು ಸರ್ಕಾರವನ್ನು ಎಚ್ಚರಗೊಳಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದೇವೆ, ಆದರೆ ಮೋದಿ ಸರ್ಕಾರವು ತನ್ನ ರಾಜಕೀಯ ಇಮೇಜ್ ಉಳಿಸಲು ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. "ಕೇಂದ್ರ ಸರ್ಕಾರದ ಈ ನೀತಿಯ ಕಾರಣದಿಂದಾಗಿ, ಚೀನಾ ಧೈರ್ಯವು ಹೆಚ್ಚಾದಂತೆ ಅನಿಸಿದೆ' ಎಂದ್ದಾರೆ.

ಮೋದಿ ತಮ್ಮ ಇಮೇಜ್ ಉಳಿಸಲು ದೇಶವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದೂ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ. "ಉತ್ತರ ಲಡಾಖ್‌ನ ಒಳನುಗ್ಗುವಿಕೆಯನ್ನು ಶಾಶ್ವತಗೊಳಿಸುವ ಪ್ರಯತ್ನದಲ್ಲಿ, ಚೀನಾ ಡೆಪ್ಸಾಂಗ್‌ನಲ್ಲಿ ಎಲ್‌ಎಸಿಯಿಂದ 15-18 ಕಿಮೀ ವ್ಯಾಪ್ತಿಯಲ್ಲಿ 200 ಶಾಶ್ವತ ಆಶ್ರಯಗಳನ್ನು ನಿರ್ಮಾಣ ಮಾಡಿದೆ. ಆದರೆ ಸರ್ಕಾರವು ಈ ವಿಚಾರದಲ್ಲಿ ಮೌನವಾಗಿದೆ" ಎಂದು ಅವರು ಆರೋಪಿಸಿದರು. ಈಗ ಮತ್ತೊಮ್ಮೆ ಆತಂಕಕಾರಿ ವಿಚಾರವೊಂದು ಸರ್ಕಾರದ ಮುನ್ನಲೆಗೆ ಬಂದಿದೆ ಎಂದು ಹೇಳಿದ್ದಾರೆ.

ತವಾಂಗ್‌‌ನಲ್ಲಿ ಚೀನಾ ಕಿರಿಕ್: ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಭಾರತೀಯ ಸೇನೆ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಕ್ಷಣಾ ಸಚಿವಾಲಯದ ವಿವರಗಳು ಸ್ಪಷ್ಟವಾಗಿಲ್ಲ ಮತ್ತು ಸ್ಪಷ್ಟೀಕರಣವನ್ನು ಕೋರಿದ್ದಾರೆ. "ಘರ್ಷಣೆಗೆ ಕಾರಣವೇನು?" ಎಂದು ಸರಣಿ ಟ್ವೀಟ್‌ಗಳಲ್ಲಿ ಪ್ರಶ್ನಿಸಿದ್ದಾರೆ. “ಗುಂಡುಗಳನ್ನು ಹಾರಿಸಲಾಗಿದೆಯೇ ಅಥವಾ ಅದು ಗಾಲ್ವಾನ್‌ನಂತೆ ಇದೆಯೇ? ಎಷ್ಟು ಸೈನಿಕರು ಗಾಯಗೊಂಡಿದ್ದಾರೆ? ಅವರ ಸ್ಥಿತಿ ಏನು? ” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಲಡಾಖ್ ಬಳಿಕ ತವಾಂಗ್‌‌ನಲ್ಲಿ ಚೀನಾ ಕಿರಿಕ್, ಸೇನಾ ಚಕಮಕಿಯಲ್ಲಿ ಯೋಧರಿಗೆ ಗಾಯ!

ಭಾರತೀಯ ಸೇನೆಯನ್ನು ಶ್ಲಾಘಿಸಿದ ಓವೈಸಿ, "ಮೋದಿ ನೇತೃತ್ವದ ದುರ್ಬಲ ರಾಜಕೀಯ ನಾಯಕತ್ವವು ಚೀನಾ ವಿರುದ್ಧ ಈ ಅವಮಾನಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ. ಘರ್ಷಣೆಯ ಕುರಿತು ಚರ್ಚಿಸಲು ಲೋಕಸಭೆಯಲ್ಲಿ ನೋಟಿಸ್ ಸಲ್ಲಿಸಿದ್ದೇನೆ ಎಂದು ಓವೈಸಿ ಹೇಳಿದರು.

Follow Us:
Download App:
  • android
  • ios