Asianet Suvarna News Asianet Suvarna News

ಆರ್ಟಿಕಲ್ 370 ರದ್ದು: ಏಕಭಾರತ, ಶ್ರೇಷ್ಠ ಭಾರತಕ್ಕೆ ಸುಪ್ರೀಂ ಬಲ!

ಆಗಸ್ಟ್ 5ರ ಐತಿಹಾಸಿಕ ದಿನ ನಮ್ಮ ಸಂಸತ್ತು 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಅಂಗೀಕರಿಸಿತು. ಅಂದಿನಿಂದ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಅಲ್ಲಿನ ಅಭಿವೃದ್ಧಿಯನ್ನು ನ್ಯಾಯಾಲಯ ನಾಲ್ಕು ವರ್ಷಗಳಿಂದ ನೋಡಿದೆ. ಸಂಸತ್ತಿನ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.

Article 370 Verdict Supreme court  issue Here is this weeks article written by Prime Minister Narendra Modi rav
Author
First Published Dec 12, 2023, 6:34 AM IST

- ನರೇಂದ್ರ ಮೋದಿ

ವಿಶೇಷ ಲೇಖನ

ಡಿಸೆಂಬರ್ 11ರಂದು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ 370 ಮತ್ತು 35 (ಎ) ವಿಧಿಗಳ ರದ್ದತಿ ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ತನ್ನ ತೀರ್ಪಿನ ಮೂಲಕ ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದಿದೆ. 2019ರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕ ಏಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾಡಲಾಗಿದೆಯೇ ಹೊರತು ವಿಘಟನೆಗೆ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಗಮನಿಸಿದೆ. 370ನೇ ವಿಧಿ ಶಾಶ್ವತವಲ್ಲ ಎಂಬ ಅಂಶವನ್ನು ನ್ಯಾಯಾಲಯವೂ ಗುರುತಿಸಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಅದ್ಭುತವಾದ ಭೂದೃಶ್ಯಗಳು ತಲೆಮಾರುಗಳಿಂದ ಕವಿಗಳು, ಕಲಾವಿದರು ಮತ್ತು ಸಾಹಸಿಗಳ ಮನಸೂರೆಗೊಂಡಿವೆ. ಇದು ಸ್ವರ್ಗವನ್ನು ಪ್ರತಿಬಿಂಬಿಸುತ್ತವೆ. ಆದರೆ, ಕಳೆದ ಏಳು ದಶಕಗಳಿಂದ ಈ ಸ್ಥಳಗಳು ಹಿಂಸಾಚಾರ ಮತ್ತು ಅಸ್ಥಿರತೆಗೆ ಸಾಕ್ಷಿಯಾಗಿದ್ದವು. ಇದು ಇಲ್ಲಿನ ಅದ್ಭುತವಾದ ಜನರಿಗೆ ಎಂದಿಗೂ ಅರ್ಹವಾದುದಾಗಿರಲಿಲ್ಲ.

ಡಿ.11ಕ್ಕೆ ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು ಭವಿಷ್ಯ, ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್!

ಮನಸ್ಥಿತಿಯ ದೊಡ್ಡ ಬಲಿಪಶು ಕಾಶ್ಮೀರ

ದುರದೃಷ್ಟವಶಾತ್, ಶತಮಾನಗಳ ವಸಾಹತುಶಾಹಿಯಿಂದಾಗಿ, ಆರ್ಥಿಕ ಮತ್ತು ಮಾನಸಿಕ ಅಧೀನತೆಯಿಂದಾಗಿ ನಮ್ಮದು ಒಂದು ರೀತಿಯ ಗೊಂದಲಮಯ ಸಮಾಜವಾಗಿದೆ. ವಿಷಾದದ ವಿಷಯವೆಂದರೆ, ಜಮ್ಮು-ಕಾಶ್ಮೀರ ಇಂತಹ ಮನಸ್ಥಿತಿಯ ದೊಡ್ಡ ಬಲಿಪಶುವಾಯಿತು. ಸ್ವಾತಂತ್ರ್ಯದ ಸಮಯದಲ್ಲಿ ನಾವು ರಾಷ್ಟ್ರೀಯ ಐಕ್ಯತೆಯ ಹೊಸ ಆರಂಭದ ಆಯ್ಕೆಯನ್ನು ಹೊಂದಿದ್ದೆವು. ಆದರೆ, ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಗೊಂದಲಮಯ ಸಮಾಜದ ವಿಧಾನವನ್ನು ಮುಂದುವರಿಸಲು ನಾವು ನಿರ್ಧರಿಸಿದೆವು.

ನನ್ನ ಜೀವನದಲ್ಲಿ ಜಮ್ಮು-ಕಾಶ್ಮೀರ ಆಂದೋಲನದೊಂದಿಗೆ ಸಂಪರ್ಕ ಹೊಂದುವ ಅವಕಾಶ ಪಡೆದಿದ್ದೇನೆ. ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ನೆಹರು ಸಂಪುಟದಲ್ಲಿದ್ದಾಗ ಕಾಶ್ಮೀರ ಸಮಸ್ಯೆಯ ಕಾರಣ ಸಂಪುಟ ತೊರೆದರು ಮತ್ತು ಮುಂದೆ ತಮ್ಮ ಜೀವನವನ್ನು ಪಣಕ್ಕಿಟ್ಟು ಕಠಿಣ ಹಾದಿ ಹಿಡಿದರು. ವರ್ಷಗಳ ನಂತರ, ಶ್ರೀನಗರದ ಸಾರ್ವಜನಿಕ ಸಭೆಯೊಂದರಲ್ಲಿ ಅಟಲ್ ಜಿ ಅವರು ‘ಇನ್ಸಾನಿಯಾತ್’, ‘ಜಮ್ಹೂರಿಯಾತ್’ ಮತ್ತು ‘ಕಾಶ್ಮೀರಿಯಾತ್’ ಎಂಬ ಪ್ರಬಲ ಸಂದೇಶವನ್ನು ನೀಡಿದರು.

ಮೂಲಭೂತವಾಗಿ ಹೇಳುವುದಾದರೆ- 370 ಮತ್ತು 35 (ಎ) ವಿಧಿಗಳು ಪ್ರಮುಖ ಅಡೆತಡೆಗಳಾಗಿದ್ದವು. ಈ ವಿಧಿಗಳಿಂದಾಗಿ, ಒಂದೇ ರಾಷ್ಟ್ರಕ್ಕೆ ಸೇರಿದ ಜನರ ನಡುವೆ ಅಂತರವನ್ನು ಸೃಷ್ಟಿಸಲಾಯಿತು. ಈ ಅಂತರದಿಂದಾಗಿ, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಅನೇಕರು ಬಯಸಿದರೂ ಸಾಧ್ಯವಾಗಲಿಲ್ಲ.

ಅಲ್ಲಿನವರೂ ಅಭಿವೃದ್ಧಿ ಬಯಸುತ್ತಾರೆ

ಕಳೆದ ಹಲವು ದಶಕಗಳಲ್ಲಿ ಸಮಸ್ಯೆಯನ್ನು ಹತ್ತಿರದಿಂದ ನೋಡಿದವನಾಗಿ, ನಿರ್ದಿಷ್ಟತೆಗಳು ಮತ್ತು ಸಂಕೀರ್ಣತೆಗಳ ಸೂಕ್ಷ್ಮವಾದ ತಿಳಿವಳಿಕೆಯನ್ನು ಹೊಂದಿದ್ದೆ. ಆದರೂ, ನನಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ, ಇಲ್ಲಿನ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ. ಅವರು ತಮ್ಮ ಸಾಮರ್ಥ್ಯದ ಮೇಲೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ ಎಂಬುದು.

ಹೀಗಾಗಿ, ಜನರಿಗೆ ಸೇವೆ ಸಲ್ಲಿಸುವಾಗ, ನಾವು ಮೂರು ಆಧಾರ ಸ್ತಂಭಗಳಿಗೆ ಆದ್ಯತೆ ನೀಡಿದ್ದೇವೆ. 1. ನಾಗರಿಕರ ಕಾಳಜಿ. 2. ಬೆಂಬಲ ಕ್ರಮದ ಮೂಲಕ ವಿಶ್ವಾಸ ಬೆಳೆಸುವುದು, 3. ಅಭಿವೃದ್ಧಿಗೆ ಆದ್ಯತೆ ನೀಡುವುದು.

2014ರಲ್ಲಿ ನಾವು ಅಧಿಕಾರ ವಹಿಸಿಕೊಂಡ ನಂತರ, ಜಮ್ಮು-ಕಾಶ್ಮೀರದಲ್ಲಿ ವಿನಾಶಕಾರಿ ಪ್ರವಾಹಗಳು ಸಂಭವಿಸಿದವು. ಸೆಪ್ಟೆಂಬರ್ 2014ರಲ್ಲಿ ಪುನರ್ವಸತಿಗಾಗಿ ವಿಶೇಷ ಸಹಾಯವಾಗಿ 1000 ಕೋಟಿ ರು. ಘೋಷಿಸಿದೆ. ಅದೇ ವರ್ಷ, ಜಮ್ಮು-ಕಾಶ್ಮೀರದಲ್ಲಿ ನಾವು ಕಳೆದುಕೊಂಡವರ ಸ್ಮರಣಾರ್ಥವಾಗಿ ನಾನು ದೀಪಾವಳಿಯನ್ನು ಆಚರಿಸದಿರಲು ನಿರ್ಧರಿಸಿದೆ. ನಾನು ದೀಪಾವಳಿಯ ದಿನ ಅಲ್ಲಿರಲು ನಿರ್ಧರಿಸಿದೆ.

ಏಸ್‌ ಇಟ್‌ ಲೈಕ್‌ ಅಫ್ಶಾನ್‌

ಜಮ್ಮು-ಕಾಶ್ಮೀರದ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ನಮ್ಮ ಸಚಿವರು ಆಗಾಗ ಹೋಗಿ ಜನರೊಂದಿಗೆ ಸಂವಾದ ನಡೆಸಬೇಕೆಂದು ನಾವು ನಿರ್ಧರಿಸಿದೆವು. ಈ ಭೇಟಿಗಳು ಅಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಮೇ 2014ರಿಂದ ಮಾರ್ಚ್ 2019ರವರೆಗೆ ಸಚಿವರ 150ಕ್ಕೂ ಹೆಚ್ಚು ಭೇಟಿಗಳು ನಡೆದಿವೆ. 2015ರ ವಿಶೇಷ ಪ್ಯಾಕೇಜ್ ಇಲ್ಲಿನ ಅಭಿವೃದ್ಧಿ ಅಗತ್ಯಗಳನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಮೂಲಸೌಕರ್ಯ ಕರಕುಶಲ ಉದ್ಯಮಕ್ಕೆ ಬೆಂಬಲವಾಗಿದೆ.

ನಾವು ಕ್ರೀಡಾಶಕ್ತಿ ಬಳಸಿಕೊಂಡಿದ್ದೇವೆ. ಯುವಜನರ ಕನಸುಗಳನ್ನು ಪೋಷಿಸಿ ಅವರ ಆಕಾಂಕ್ಷೆಗಳು ಮತ್ತು ಭವಿಷ್ಯದಲ್ಲಿ ಅಥ್ಲೆಟಿಕ್ ಹಾದಿ ಹಿಡಿಯುವ ಅವರ ರೂಪಾಂತರದ ಪರಿಣಾಮವನ್ನು ನಾವು ನೋಡಿದ್ದೇವೆ. ಕ್ರೀಡಾ ಸ್ಥಳಗಳನ್ನು ಮೇಲ್ದರ್ಜೆಗೇರಿಸಲಾಗಿದೆ, ತರಬೇತುದಾರರು ಲಭ್ಯವಾಗುವಂತೆ ಮಾಡಲಾಗಿದೆ. ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಅಫ್ಶಾನ್ ಆಶಿಕ್ ಅವರ ಹೆಸರು ನನ್ನ ನೆನಪಿಗೆ ಬರುತ್ತದೆ. ಡಿಸೆಂಬರ್ 2014ರಲ್ಲಿ ಅವರು ಶ್ರೀನಗರದಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದ ಗುಂಪಿನ ಭಾಗವಾಗಿದ್ದರು. ಆದರೆ ಸೂಕ್ತ ಪ್ರೋತ್ಸಾಹ ದೊರೆತ ಕಾರಣದಿಂದ ಆಕೆ ಫುಟ್ಬಾಲ್ ಕಡೆಗೆ ತಿರುಗಿದರು. ಅವರನ್ನು ತರಬೇತಿಗೆ ಕಳುಹಿಸಲಾಯಿತು ಮತ್ತು ಆಟದಲ್ಲಿ ಮಿಂಚಿದರು. ಫಿಟ್ ಇಂಡಿಯಾ ಡೈಲಾಗ್ ಒಂದರಲ್ಲಿ ನಾನು ಅವರೊಂದಿಗೆ ಸಂವಾದ ನಡೆಸಿದ್ದು ನೆನಪಿದೆ. ಅಲ್ಲಿ ನಾನು ‘ಬೆಂಡ್ ಇಟ್ ಲೈಕ್ ಬೆಕ್ಹ್ಯಾಮ್’ ಬಿಟ್ಟು ‘ಏಸ್ ಇಟ್ ಲೈಕ್ ಅಫ್ಶಾನ್’ ಆಗುವ ಸಮಯ ಬಂದಿದೆ ಎಂದು ಹೇಳಿದೆ.

ಶಾಲೆಗಳನ್ನು ಈಗ ಸುಡುತ್ತಿಲ್ಲ

ಇಲ್ಲಿನ ಅಭಿವೃದ್ಧಿಯಲ್ಲಿ ಪಂಚಾಯತ್ ಚುನಾವಣೆಗಳು ಒಂದು ಅಭೂತಪೂರ್ವ ಕ್ಷಣವಾಗಿದೆ. ಮತ್ತೊಮ್ಮೆ ನಾವು ಅಧಿಕಾರದಲ್ಲಿ ಉಳಿಯುವ ಅಥವಾ ನಮ್ಮ ತತ್ವಗಳ ಮೇಲೆ ನಿಲ್ಲುವ ಆಯ್ಕೆಯನ್ನು ಎದುರಿಸಿದೆವು. ಜನರ ಆಕಾಂಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಂಚಾಯತ್ ಚುನಾವಣೆಯ ಯಶಸ್ಸು ಜನರ ಪ್ರಜಾಸತ್ತಾತ್ಮಕ ಗುಣವನ್ನು ಸೂಚಿಸುತ್ತದೆ. ಹಳ್ಳಿಗಳ ಪ್ರಧಾನರೊಂದಿಗೆ ನಡೆಸಿದ ಸಂವಾದವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇತರ ಸಮಸ್ಯೆಗಳ ಜೊತೆಗೆ, ನಾನು ಅವರಿಗೆ ಯಾವುದೇ ಹಂತದಲ್ಲೂ ಶಾಲೆಗಳನ್ನು ಸುಡಬಾರದು ಮತ್ತು ಅದಾಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿ ಮಾಡಿದೆ. ಅವರು ಇದಕ್ಕೆ ಬದ್ಧವಾಗಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ.

ಆಗಸ್ಟ್ 5ರ ಐತಿಹಾಸಿಕ ದಿನ ನಮ್ಮ ಸಂಸತ್ತು 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಅಂಗೀಕರಿಸಿತು. ಅಂದಿನಿಂದ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನ್ಯಾಯಾಲಯದ ತೀರ್ಪು ಡಿಸೆಂಬರ್ 2023ರಲ್ಲಿ ಬಂದಿದೆ. ಆದರೆ ಜಮ್ಮು- ಕಾಶ್ಮೀರ ಮತ್ತು ಲಡಾಖ್‌ನಾದ್ಯಂತದ ಅಭಿವೃದ್ಧಿಯನ್ನು ನ್ಯಾಯಾಲಯ ನಾಲ್ಕು ವರ್ಷಗಳಿಂದ ನೋಡಿದೆ. ಸಂಸತ್ತಿನ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.

ಕೇಂದ್ರದ ಯೋಜನೆಗಳು ಪರಿಪೂರ್ಣ ಜಾರಿ

ರಾಜಕೀಯವಾಗಿ ಕಳೆದ 4 ವರ್ಷಗಳು ತಳಮಟ್ಟದ ಪ್ರಜಾಪ್ರಭುತ್ವದಲ್ಲಿ ಹೊಸ ನಂಬಿಕೆಯೊಂದಿಗೆ ಗುರುತಿಸಲ್ಪಟ್ಟಿವೆ. ಶೋಷಿತರಿಗೆ ಅವರ ಸವಲತ್ತುಗಳು ಸಿಗುತ್ತಿರಲಿಲ್ಲ. ಆಗ ಲಡಾಖ್‌ನ ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಆಗಸ್ಟ್ 5, 2019 ಎಲ್ಲವನ್ನೂ ಬದಲಾಯಿಸಿತು. ಪ್ರಾತಿನಿಧ್ಯವು ಹೆಚ್ಚು ವ್ಯಾಪಕವಾಗಿದೆ. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ.

ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!

ಕೇಂದ್ರದ ಯೋಜನೆಗಳು ಪರಿಪೂರ್ಣತೆಯ ಮಟ್ಟವನ್ನು ತಲುಪಿವೆ. ಜನರಿಗೆ ಪ್ರಮುಖ ಸವಾಲಾಗಿರುವ ಆರೋಗ್ಯ ರಕ್ಷಣೆ ಮೂಲಸೌಕರ್ಯ ಉನ್ನತೀಕರಿಸಲಾಗಿದೆ. ಎಲ್ಲಾ ಗ್ರಾಮಗಳು ಒಡಿಎಫ್ ಪ್ಲಸ್ ಸ್ಥಾನಮಾನಗಳನ್ನು ಸಾಧಿಸಿವೆ. ಭ್ರಷ್ಟಾಚಾರದ ಕೂಪವಾಗಿದ್ದ ಸರ್ಕಾರಿ ಹುದ್ದೆಗಳನ್ನು ಪಾರದರ್ಶಕವಾಗಿ ರೀತಿಯಲ್ಲಿ ಭರ್ತಿ ಮಾಡಲಾಗಿದೆ. ಐಎಂಆರ್ ನಂತಹ ಇತರ ಸೂಚಕಗಳು ಸುಧಾರಣೆಯನ್ನು ತೋರಿಸಿವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಎಲ್ಲರಿಗೂ ಕಾಣಿಸುತ್ತಿದೆ.

ಡಿಸೆಂಬರ್ 11ರಂದು ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ‘ಏಕ್ ಭಾರತ್, ಶ್ರೇಷ್ಠ ಭಾರತ್’ಎಂಬ ಮನೋಭಾವವನ್ನು ಬಲಪಡಿಸಿದೆ. ಇಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಜನಿಸಿದ ಪ್ರತಿಯೊಂದು ಮಗುವೂ ಸ್ವಚ್ಛವಾದ ಕ್ಯಾನ್ವಾಸ್‌ನೊಂದಿಗೆ ಜನಿಸುತ್ತದೆ. ಇಂದು ಜನರ ಕನಸುಗಳು ಬಂಧಿಯಾಗದೆ ಭವಿಷ್ಯದ ಸಾಧ್ಯತೆಗಳಾಗಿವೆ. ಅಭಿವೃದ್ಧಿ ನಿರಾಶೆ ಮತ್ತು ಹತಾಶೆಯನ್ನು ಬದಲಿಸಿವೆ.

Latest Videos
Follow Us:
Download App:
  • android
  • ios