ಶತ್ರು ಡ್ರೋನ್‌ ಉರುಳಿಸಲು ಸೇನೆಯಿಂದ ಹದ್ದುಗಳಿಗೆ ಟ್ರೇನಿಂಗ್‌ ನೀಡಲಾಗುತ್ತಿದೆ. ಪಾಕ್‌ನಿಂದ ಬರುವ ಡ್ರೋನ್‌ಗಳೇ ಟಾರ್ಗೆಟ್‌ ಆಗಿದ್ದು, ಯುದ್ಧ ಅಭ್ಯಾಸ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ಹಕ್ಕಿಗಳ ಬಳಕೆ ಇದೇ ಮೊದಲು ಎಂದು ತಿಳಿದುಬಂದಿದೆ. 

ನವದೆಹಲಿ: ಗಡಿಯಾಚೆಯಿಂದ ಡ್ರೋನ್‌ಗಳನ್ನು (Drone) ಹಾರಿಸಿ ದೇಶದಲ್ಲಿ ಡ್ರಗ್ಸ್‌ (Drugs) ಹಾಗೂ ಶಸ್ತ್ರಾಸ್ತ್ರಗಳನ್ನು (Weapons) ಸರಬರಾಜು ಮಾಡುತ್ತಿರುವ ಸಮಸ್ಯೆಗೆ ಭಾರತೀಯ ಸೇನೆಯು (Indian Army) ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದೆ. ಭಾರತೀಯ ಸೇನೆಯು ಶತ್ರುಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು ಹದ್ದುಗಳಿಗೆ (Eagle) ತರಬೇತಿ ನೀಡಲು ಆರಂಭಿಸಿದೆ. ಇಂತಹ ಕಾರ್ಯಕ್ಕೆ ಹಕ್ಕಿಗಳನ್ನು (Birds) ಬಳಸುತ್ತಿರುವುದು ಇದೇ ಮೊದಲ ಬಾರಿ ಎಂದು ಹಿರಿಯ ಸೇನಾಧಿಕಾರಿಗಳೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನವು (Pakistan) ಡ್ರೋನ್‌ಗಳ ಮೂಲಕ ಭಾರತಕ್ಕೆ ಮಾದಕ ವಸ್ತು, ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ನಕಲಿ ನೋಟು ಮೊದಲಾದವುಗಳನ್ನು ರವಾನಿಸುವ ಮೂಲಕ ದೇಶದಲ್ಲಿ ದುಷ್ಕೃತ್ಯ ಎಸಗಲು ಯತ್ನಿಸುತ್ತಿದೆ. ಇವುಗಳ ಮೇಲೆ ನಿಗಾ ಇಡಲು ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ, ಅತ್ಯಂತ ಸೂಕ್ಷ್ಮ ದೃಷ್ಟಿಹೊಂದಿರುವ, ಹಲವು ಕಿ.ಮೀ ದೂರದಲ್ಲಿನ ವಸ್ತುಗಳನ್ನೂ ಅತ್ಯಂತ ನಿಖರವಾಗಿ ಗುರುತಿಸಬಲ್ಲ ಸಾಮರ್ಥ್ಯ ಹೊಂದಿರುವ ಹದ್ದುಗಳ ಬಳಕೆ, ಡ್ರೋನ್‌ ಮೇಲೆ ನಿಗಾ ಇಡಲು ಹೆಚ್ಚು ನೆರವಾಗಲಿದೆ ಎಂಬುದು ಸೇನೆಯ ಲೆಕ್ಕಾಚಾರ.

ಇದನ್ನು ಓದಿ: ಮೋದಿ ಸಮಾವೇಶದಲ್ಲಿ ಭಾರಿ ಭದ್ರತಾ ವೈಫಲ್ಯ: ಡ್ರೋನ್‌ ಹಾರಾಟ: 3 ಜನರ ಬಂಧನ

ಹೀಗಾಗಿಯೇ ಶತ್ರು ದೇಶದ ಡ್ರೋನ್‌ಗಳಿಗೆ ಕಡಿವಾಣ ಹಾಕಲು ಸೇನೆ ಹದ್ದುಗಳಿಗೆ ತರಬೇತಿ ನೀಡುತ್ತಿದೆ. ಉತ್ತರಾಖಂಡದ ಔಲಿಯಲ್ಲಿ ನಡೆಯುತ್ತಿರುವ ಭಾರತ- ಅಮೆರಿಕ ಜಂಟಿ ಸೇನಾ ತರಬೇತಿ ಆದ ಯುದ್ಧ ಅಭ್ಯಾಸದಲ್ಲಿ ಶತ್ರು ಡ್ರೋನ್‌ಗಳನ್ನು ಹದ್ದುಗಳು ಹೇಗೆ ಹೊಡೆದುರುಳಿಸುತ್ತವೆ ಎಂಬುದನ್ನು ಪ್ರದರ್ಶಿಸಲಾಗಿದೆ. ಪ್ರಸ್ತುತ ನಾಯಿಗಳು ಹಾಗೂ ಹದ್ದುಗಳಿಗೆ ಸೇನಾ ಕಾರ್ಯಾಚರಣೆಗಳಿಗಾಗಿ ತರಬೇತಿ ಕೊಡಲಾಗುತ್ತಿದೆ. ಇದರಿಂದ ವಿಶೇಷವಾಗಿ ಪಂಜಾಬ್‌ ಹಾಗೂ ಜಮ್ಮು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಹಾರಿ ಬರುವ ಡ್ರೋನ್‌ಗಳ ಹಾವಳಿಯನ್ನು ತಗ್ಗಿಸಲು ಸೇನೆಗೆ ನೆರವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

10 ಕೆ.ಜಿ. ಹೆರಾಯಿನ್‌ ಇದ್ದ 2 ಪಾಕ್‌ ಡ್ರೋನ್‌ ಹೊಡೆದು ಉರುಳಿಸಿದ ಮಹಿಳಾ ಪಡೆ
ಚಂಡೀಗಢ: ಪಂಜಾಬಿನ ಅಮೃತಸರದ ಭಾರತ ಪಾಕಿಸ್ತಾನ ಗಡಿಯಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನದ ಎರಡು ಡ್ರೋನ್‌ಗಳನ್ನು ಭಾರತೀಯ ಗಡಿ ಭದ್ರತಾ ಮಹಿಳಾ ಪಡೆ ಹೊಡೆದುರುಳಿಸಿದೆ. ಬಳಿಕ ಉರುಳಿಬಿದ್ದ ಡ್ರೋನ್‌ಗಳಿಂದ 10 ಕೇಜಿ ಹೆರಾಯಿನ್‌ (Heroin) ಮಾದಕವನ್ನು ವಶಪಡಿಸಿಕೊಂಡಿವೆ. ಗಡಿಯಲ್ಲಿ ಡ್ರೋನ್‌ಗಳನ್ನು ಮಹಿಳಾ ಬಿಎಸ್‌ಎಫ್‌ (BSF) ತಂಡ ಹೊಡೆದುರುಳಿಸಿದ್ದು ಇದೇ ಮೊದಲ ಘಟನೆಯಾಗಿದೆ. ಸೋಮವಾರ ರಾತ್ರಿ 11.5 ಗಂಟೆಗೆ ಭಾರತ ಗಡಿ ಪ್ರವೇಶಿಸುತ್ತಿದ್ದ ಡ್ರೋನುಗಳತ್ತ 73ನೇ ತಂಡದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳು 25 ಸುತ್ತಿನ ಗುಂಡು ಹಾರಿಸಿ ನೆಲಕ್ಕುರುಳಿಸಿದ್ದಾರೆ. ಈ ವೇಳೆ ಭಾರತದತ್ತ ಬರುತ್ತಿದ್ದ 3ನೇ ಡ್ರೋನ್‌ ಪಾಕಿಸ್ತಾನಕ್ಕೆ ಹಿಂದಿರುಗಿದೆ.

ಇದನ್ನೂ ಓದಿ: ಪಂಜಾಬ್‌ ಗಡಿ ಬಳಿ ಮತ್ತೆ ಪಾಕ್‌ ಡ್ರೋನ್‌ಗಳು ಪತ್ತೆ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ

ಪಂಜಾಬ್‌ನ ಭಾರತ-ಪಾಕ್ ಗಡಿಯುದ್ದಕ್ಕೂ ಡ್ರೋನ್ ವೀಕ್ಷಣೆಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತವು 100% ಕ್ಕಿಂತ ಹೆಚ್ಚು ಹೆಚ್ಚಳವನ್ನು ಕಂಡಿದೆ ಎಂದು ಬಿಎಸ್‌ಎಫ್‌ ಮಾಹಿತಿ ನೀಡಿದೆ. ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ರವಾನಿಸಲು ಭಾರತದ ವಾಯು ಪ್ರದೇಶದೊಳಗೆ ಪ್ರವೇಶಿಲು ಯತ್ನಿಸಿದ ಅಥವಾ ಪ್ರವೇಶಿಸಿದ ಡ್ರೋನ್‌ಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ವರ್ಷದ ಜನವರಿ ಮತ್ತು ನವೆಂಬರ್ ನಡುವೆ, ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ 215 ಡ್ರೋನ್‌ಗಳು ಕಾಣಿಸಿಕೊಂಡಿರುವ ಘಟನೆಗಳಿಗೆ ಬಿಎಸ್‌ಎಫ್ ಸಾಕ್ಷಿಯಾಗಿದೆ. ಅಂದರೆ, ಪ್ರತಿ ತಿಂಗಳಿಗೆ ಅಂದಾಜು ಸುಮಾರು 20 ಡ್ರೋನ್‌ಗಳು ಪತ್ತೆಯಾಗುತ್ತಿವೆ ಎಂದು ತಿಳಿದುಬಂದಿದೆ. ಹಿನ್ನೆಲೆ ಭಾರತೀಯ ಸೇನೆ ಹದ್ದುಗಳ ಸಹಾಯ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.